ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಭಾರತೀಯ ಮೂಲದ ಎ.ಸಿ.ಚರಾನಿಯಾ ನೇಮಕವಾಗಿದ್ದಾರೆ. ನಾಸಾದ ತಂತ್ರಜ್ಞಾನ, ನೀತಿ ಮತ್ತು ಯೋಜನೆಗೆ ಸಂಬಂಧಿಸಿದ ಆಡಳಿತಧಿಕಾರಿ ಬಿಲ್ ನೆಲ್ಸನ್ ಅವರಿಗೆ ಚರಾನಿಯಾ ಅವರು ಪ್ರಧಾನ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಎ.ಸಿ.ಚರಾನಿಯಾ ಅವರು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂಡವಾಳ ಹೂಡಿಕೆ, ಅಮೆರಿಕ ಸರ್ಕಾರದ ಹಾಗೂ ಇತರ ಸಂಸ್ಥೆಗಳ ಜತೆಗೆ ಸಹಭಾಗಿತ್ವದ ಬಗ್ಗೆ ಸಲಹೆ ನೀಡಲಿದ್ದಾರೆ.
ವಾಷಿಂಗ್ಟನ್‌ನಲ್ಲಿರುವ ನಾಸಾದ ಪ್ರಧಾನ ಕಚೇರಿಯಲ್ಲಿ ತಂತ್ರಜ್ಞಾನ, ನೀತಿ ಮತ್ತು ವ್ಯೂಹಕ್ಕೆ ಸಂಬಂಧಿಸಿದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.
“ಚರಾನಿಯಾ ಅವರು ತಂತ್ರಜ್ಞಾನ ಹೂಡಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರ ಜ್ಞಾನ ಮತ್ತು ಉತ್ಸಾಹ ನಾಸಾಗೆ ಖಂಡಿತ ಸದುಪಯೋಗವಾಗಲಿದೆ,’ ಎಂದು ನಾಸಾದ ತಂತ್ರಜ್ಞಾನ, ನೀತಿ ಮತ್ತು ವ್ಯೂಹಕ್ಕೆ ಸಂಬಂಧಿಸಿದ ವಿಭಾಗದ ಸಹಾಯಕ ಆಡಳಿತಾಧಿಕಾರಿ ಭವ್ಯ ಲಾಲ್ ಹೇಳಿದ್ದಾರೆ.