ಕಾನ್ಪುರ: ಪಂದ್ಯದ ಎರಡೂವರೆ ದಿನಗಳ ಕಾಲ ವರುಣ ಅಡ್ಡಿಪಡಿಸಿದರೂ ಚಾಕಚಕತ್ಯೆಯ ಆಟವಾಡಿದ ಟೀಂ ಇಂಡಿಯಾ ಬಾಂಗ್ಲಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯವನ್ನು ಜಯಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಜಯಿಸಿದೆ.
ಕಾನ್ಪುರದಲ್ಲಿ ಪಂದ್ಯ ಗೆಲ್ಲಲು 95 ರನ್ ಗುರಿ ಪಡೆದ ಭಾರತವು ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದ ರೋಹಿತ್ ಪಡೆ ಮತ್ತೊಂದು ಸರಣಿ ಜಯ ಸಾಧಿಸಿತು.
52 ರನ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾ ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡ ಸತತ ವಿಕೆಟ್ ಕಳೆದುಕೊಂಡಿತು. ಹಿರಿಯ ಬ್ಯಾಟರ್ ಮುಶ್ಫೀಕರ್ ರಹೀಂ ಹೊರತು ಪಡಿಸಿ ಬೇರೆ ಯಾವ ಬ್ಯಾಟರ್ ಕೂಡಾ ನಿಂತು ಆಡಲಿಲ್ಲ. ರಹೀಂ 37 ರನ್ ಗಳಿಸಿದರು. ಬಾಂಗ್ಲಾ 47 ಓವರ್ ಗಳಲ್ಲಿ 146 ರನ್ ಗಳಿಗೆ ಆಲೌಟಾಯಿತು.
ಭಾರತದ ಪರ ಬುಮ್ರಾ, ಅಶ್ವಿನ್ ಮತ್ತು ರವಿ ಜಡೇಜಾ ತಲಾ ಮೂರು ವಿಕೆಟ್ ಪಡೆದರು. ಒಂದು ವಿಕೆಟ್ ಆಕಾಶ್ ದೀಪ್ ಪಾಲಾಯಿತು.
95 ರನ್ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲಿ ಗಿಲ್ ಮತ್ತು ರೋಹಿತ್ ವಿಕೆಟ್ ಕಳೆದುಕೊಂಡಿತು. ಆದರೆ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಅರ್ಧಶತಕದ ಜೊತೆಯಾಟವಾಡಿದರು. ಜೈಸ್ವಾಲ್ 51 ರನ್ ಮಾಡಿದರೆ, ವಿರಾಟ್ ಕೊಹ್ಲಿ 29 ರನ್ ಗಳಿಸಿ ಅಜೇಯವಾಗಿ ಉಳಿದರು.
ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪಡೆದರೆ, ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾ: 233 ರನ್ ಮತ್ತು 146
ಭಾರತ: 285-9 ಡಿ ಮತ್ತು 98-3