ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್‌ನ ಎರಡನೇ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಭಾರತ ಎರಡನ್ನು ಗೆದ್ದಂತಾಗಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ನೀಡಿದ್ದ 115 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ 26.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 118 ರನ್ ಬಾರಿಸಿ ವಿಜಯದ ಗೆರೆ ತಲುಪಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ರೋಹಿತ್ ಶರ್ಮಾ 31 , ಕೆ.ಎಲ್. ರಾಹುಲ್ 1 , ವಿರಾಟ್ ಕೊಹ್ಲಿ 20 , ಶ್ರೇಯಸ್ ಅಯ್ಯರ್ 12 ರನ್ ಬಾರಿಸಿದ್ರೆ, ಚೇತೇಶ್ವರ್ ಪೂಜಾರ 31 ಮತ್ತು ವಿಕೆಟ್ ಕೀಪರ್ ಎಸ್.ಭರತ್ 21 ರನ್ ಬಾರಿಸಿ ಅಜೇಯರಾಗಿ ಉಳಿದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ- ಆರ್ ಅಶ್ವಿನ್ ಜೋಡಿ ತಮ್ಮ ಸ್ಪಿನ್ ಜಾಲದ ಮೂಲಕ ಆಸ್ಟ್ರೇಲಿಯವನ್ನು ಹೆಡೆಮುರಿಕಟ್ಟಿದ್ದಾರೆ. ಜಡೇಜಾ 7 ವಿಕೆಟ್ ಪಡೆದು ಮಿಂಚಿದ್ರೆ ಆರ್. ಅಶ್ವಿನ್ 3 ವಿಕೆಟ್ ಕಬಳಿಸಿದ್ಧಾರೆ.
ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಅತೀ ವೇಗದ 25,000 ರನ್ ದಾಖಲಿಸಿದ ಮೊದಲಿಗ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.