ಡಬ್ಲಿನ್: ಐರ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಗೆದ್ದು ಬೀಗಿದೆ. ಮಳೆ ಕಾಡಿದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಏಳು ವಿಕೆಟ್ ಅಂತರದಿಂದ ಗೆಲುವು ಸಾಧಿಸಿತು.
ಮಳೆಯ ಕಾರಣದಿಂದ ತಲಾ 12 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ನಾಲ್ಕು ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದರೆ, ಭಾರತ ತಂಡ ಮೂರು ವಿಕೆಟ್ ಕಳೆದುಕೊಂಡು 9.2 ಓವರ್ ಗಳಲ್ಲಿ ಗುರಿ ತಲುಪಿತು.
ಆರಂಭದಲ್ಲಿ ಕೇವಲ 22 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಐರ್ಲೆಂಡ್ ಗೆ ಹ್ಯಾರಿ ಟೆಕ್ಟರ್ ನೆರವಾದರು. 33 ಎಸೆತಗಳಲ್ಲಿ ಮೂರು ಸಿಕ್ಸರ್ ಆರು ಬೌಂಡರಿ ನೆರವಿನಿಂದ ಟೆಕ್ಟರ್ ಅಜೇಯ 64 ರನ್ ಗಳಿಸಿದರು. ಭಾರತದ ಪರ ಬಿಗು ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ ಮೂರು ಓವರ್ ನಲ್ಲಿ ಒಂದು ಮೇಡನ್ ಸಹಿತ 16 ರನ್ ನೀಡಿದ ಒಂದು ವಿಕೆಟ್ ಕಿತ್ತರೆ, ಚಾಹಲ್ ಕೇವಲ 11 ರನ್ ನೀಡಿ ಒಂದು ವಿಕೆಟ್ ಪಡೆದರು. ಉಳಿದಂತೆ ಹಾರ್ದಿಕ್ ಪಾಂಡ್ಯ ಮತ್ತು ಆವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಶ್ರೀನಗರ ಎಕ್ಸ್ ಪ್ರೆಸ್ ಉಮ್ರಾನ್ ಮಲಿಕ್ ಒಂದು ಓವರ್ ನಲ್ಲಿ 14 ರನ್ ನೀಡಿದರು.
ಇದನ್ನೂ ಓದಿ:ಈ ಹೋಟೆಲ್ ನಲ್ಲಿ ಆಂಟಿ ಎಂದರೆ ಆರ್ಡರ್ ಕ್ಯಾನ್ಸಲ್! 18ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ನಿಯಮ
ಗುರಿ ಬೆನ್ನತ್ತಿದ ಭಾರತ ತಂಡದ ಪರ ದೀಪಕ್ ಹೂಡಾ ಮಿಂಚಿದರು. ಮೊದಲ ಬಾರಿಗೆ ಆರಂಭಿಕನಾಗಿ ಆಡಿದ ಹೂಡಾ ಅಜೇಯ 47 ರನ್ ಗಳಿಸಿದರು. ಇಶಾನ್ ಕಿಶನ್ 26 ರನ್ ಮತ್ತು ನಾಯಕ ಹಾರ್ದಿಕ್ 24 ರನ್ ಗಳಿಸಿದರು.
ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಜೂನ್ 28ರಂದು ಡಬ್ಲಿನ್ ನಲ್ಲಿ ನಡೆಯಲಿದೆ.