Advertisement

ಇತಿಹಾಸ ಬರೆದ ಭಾರತ

06:00 AM Dec 11, 2018 | Team Udayavani |

ಅಡಿಲೇಡ್‌: ಸರಿಯಾಗಿ 10 ವರ್ಷಗಳ ಬಳಿಕ ಭಾರತೀಯ ತಂಡವು ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್‌ ಪಂದ್ಯವೊಂದನ್ನು ಗೆದ್ದು ಸಂಭ್ರಮಿಸಿದೆ. ಈ ಮೂಲಕ ಚೊಚ್ಚಲ ಬಾರಿ ಸರಣಿ ಗೆಲ್ಲುವ ಆಸೆ ಚಿಗುರುವಂತೆ ಮಾಡಿದೆ. ಬೌಲರ್‌ಗಳ ನಿಖರ ದಾಳಿಯ ಬಲದಿಂದ ಪ್ರವಾಸಿ ಭಾರತವು ಅಡಿಲೇಡ್‌ನ‌ಲ್ಲಿ ಸಾಗಿದ ಮೊದಲ ಪಂದ್ಯದಲ್ಲಿ 31 ರನ್ನುಗಳಿಂದ ರೋಚಕ ಗೆಲುವು ದಾಖಲಿಸಿತು. ಅಶ್ವಿ‌ನ್‌, ಬುಮ್ರಾ ಮತ್ತು ಶಮಿ ತಲಾ ಮೂರು ವಿಕೆಟ್‌ ಕಿತ್ತು ಆಸೀಸ್‌ ಹೋರಾಟಕ್ಕೆ ಬ್ರೇಕ್‌ ನೀಡಲು ಯಶಸ್ವಿಯಾದರು. ಈ ಗೆಲುವಿನಿಂದ ಭಾರತ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಕಳೆದ 70 ವರ್ಷಗಳಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಭಾರತವು ಸರಣಿಯ ಮೊದಲ ಪಂದ್ಯ ಗೆದ್ದು ಮುನ್ನಡೆ ಸಾಧಿಸಿರುವುದು ಇದೇ ಮೊದಲ ಸಲವಾಗಿದೆ.

Advertisement

ಗೆಲುವಿನ ಸಂಭ್ರಮದ ಜತೆ ವಿಕೆಟ್‌ಕೀಪರ್‌ ರಿಷಬ್‌ ಪಂತ್‌ 11 ಕ್ಯಾಚ್‌ ಪಡೆದು ವಿಶ್ವದಾಖಲೆ ಸಮಗಟ್ಟಿದ ಸಾಧನೆ ಮಾಡಿದರು. ಟೆಸ್ಟ್‌ ಪಂದ್ಯವೊಂದರಲ್ಲಿ ವಿಕೆಟ್‌ಕೀಪರೊಬ್ಬ ಗರಿಷ್ಠ ಬಲಿ ಪಡೆದ ದಾಖಲೆಯನ್ನು ಪಂತ್‌ ಅವರು ಇಂಗ್ಲೆಂಡಿನ ಜ್ಯಾಕ್‌ ರಸೆಲ್‌ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿ’ವಿಲಿಯರ್ ಜತೆ ಹಂಚಿಕೊಂಡರು.

ಮಾರ್ಷ್‌ ಹೋರಾಟ
ನಾಲ್ಕು ವಿಕೆಟಿಗೆ 104 ರನ್ನುಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ಸೋಲು ತಪ್ಪಿಸಲು ದಿನಪೂರ್ತಿ ಆಡಬೇಕಾಗಿತ್ತು. ಆದರೆ ಭಾರತಕ್ಕೆ ಆತಿಥೇಯ ತಂಡದ ಇನ್ನುಳಿದ ಆರು ವಿಕೆಟ್‌ ಉರುಳಿಸಿದರೆ ಸಾಕಾಗಿತ್ತು. 31 ರನ್ನಿನಿಂದ ಆಟ ಮುಂದುವರಿಸಿದ ಶಾನ್‌ ಮಾರ್ಷ್‌ ತಾಳ್ಮೆಯ ಆಟವಾಡಿದರೆ ಹೆಡ್‌ ಹೆಚ್ಚು ಹೊತ್ತು ನಿಲ್ಲಲಿಲ್ಲ. ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಮಾರ್ಷ್‌ 10ನೇ ಅರ್ಧಶತಕ ದಾಖಲಿಸಿದರು. 60 ರನ್‌ ಗಳಿಸಿ ಬುಬ್ರಾಗೆ ವಿಕೆಟ್‌ ಒಪ್ಪಿಸಿದರು.

ಮಾರ್ಷ್‌ ಬಳಿಕ ನಾಯಕ ಟಿಮ್‌ ಪೈನ್‌ ಸಹಿತ ಬಾಲಂಗೋಚಿಗಳು ದಿಟ್ಟ ಆಟ ಪ್ರದರ್ಶಿಸಿದರೂ ಆತಿಥೇಯ ತಂಡದ ಸೋಲನ್ನು ತಪ್ಪಿಸಲು ಅವರಿಂದ ಸಾಧ್ಯವಾಗಲಿಲ್ಲ. ಪೈನ್‌ 41 ರನ್‌ ಹೊಡೆದರೆ ನಥನ್‌ ಲಿಯೋನ್‌ ಮತ್ತು ಜೋಶ್‌ ಹ್ಯಾಝಲ್‌ವುಡ್‌ ಅಂತಿಮ ವಿಕೆಟಿಗೆ 42 ರನ್ನುಗಳ ಜತೆಯಾಟ ನಡೆಸಿ ಭಾರತೀಯರ ಬೌಲರ್‌ಗಳ ಬೆವರಿಳಿಸುವಂತೆ ಮಾಡಿದರು. ಈ ಜೋಡಿ ಪ್ರತಿಯೊಂದು ರನ್‌ ಗಳಿಸುವಾಗಲೂ ಅಡಿಲೇಡ್‌ ಓವಲ್‌ನಲ್ಲಿ ಪ್ರೇಕ್ಷಕರು ಕರತಾಡನ ಮಾಡಿ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಅಂತಿಮವಾಗಿ 120ನೇ ಓವರಿನಲ್ಲಿ ಆಸ್ಟ್ರೇಲಿಯ ಆಲೌಟ್‌ ಆಯಿತು.

ಆಸ್ಟ್ರೇಲಿಯ ನೆಲದಲ್ಲಿ  6ನೇ ಗೆಲುವು
ಅಡಿಲೇಡ್‌: ಭಾರತೀಯ ತಂಡವು ಕಳೆದ 70 ವರ್ಷಗಳಿಂದ ಆಸ್ಟ್ರೇಲಿಯ ನೆಲದಲ್ಲಿ 12 ಟೆಸ್ಟ್‌ ಸರಣಿ ಆಡಿದ್ದು ಕೇವಲ ಆರು ಟೆಸ್ಟ್‌ಗಳಲ್ಲಿ ಜಯ ಸಾಧಿಸಿದೆ. ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಜಯಭೇರಿ ಬಾರಿಸಿ ಮುನ್ನಡೆ ಸಾಧಿಸಿರುವುದು ಇದೇ ಮೊದಲ ಸಲವಾಗಿದೆ.  ಭಾರತ ಈ ಹಿಂದೆ 1977, 1978, 1981, 2003 ಮತ್ತು 2008ರಲ್ಲಿ ನಡೆದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿದ ಸಾಧನೆ ಮಾಡಿತ್ತು. 77ರಿಂದ 81ರ ನಡುವಣ ಅವಧಿಯಲ್ಲಿ ಭಾರತ ಮೂರು ಜಯ ಸಾಧಿಸಿರುವುದು ವಿಶೇಷವೆಂದು ಹೇಳಬಹುದು. ಈ ಮೂರು ಗೆಲುವುಗಳಲ್ಲಿ ಸುನೀಲ್‌ ಗಾವಸ್ಕರ್‌, ಸ್ಪಿನ್ನರ್‌ ಚಂದ್ರಶೇಖರ್‌, ಚೇತನ್‌ ಚೌಹಾಣ್‌, ಗುಂಡಪ್ಪ ವಿಶ್ವನಾಥ್‌, ಕರ್ಸನ್‌ ಘಾವ್ರಿ, ಎರ್ರಪಳ್ಳಿ ಪ್ರಸನ್ನ ಮತ್ತು ಕಪಿಲ್‌ ದೇವ್‌ ಅವರ ನಿರ್ವಹಣೆ ಗಮನಾರ್ಹವಾಗಿತ್ತು. 

Advertisement

ಒಂದು ಗೆಲುವಿನಿಂದ ತೃಪ್ತಿಯಾಗಿಲ್ಲ
ಒಂದು ಪಂದ್ಯವನ್ನು ಗೆದ್ದ ಅನಂತರ ಖುಷಿ ಪಡಬಾರದು. ಜಯಿ ಸಿದ್ದೇವೆಂದು ತೃಪ್ತಿ ಪಡಬಾರದು. ಗೆಲುವು ಸಾಧಿಸಿದ್ದರಿಂದ ಖುಷಿ ಇದೆ. ಆದರೆ ಈ ಖುಷಿ ಹೀಗೆ ಮುಂದುವರಿಯಬೇಕು. ನಾವು ಕಳೆದುಕೊಳ್ಳು ವಂಥದ್ದು ಏನೂ ಇಲ್ಲ. 4 ವರ್ಷಗಳ ಹಿಂದೆ ನಾವು 48 ರನ್‌ಗಳಿಂದ ಆಸ್ಟ್ರೇಲಿಯ ವಿರುದ್ಧ ಸೋತಿದ್ದೆವು. ಈಗ 31 ರನ್‌ಗಳಿಂದ ಗೆದ್ದಿರುವುದು ಉತ್ತಮ ಸಾಧನೆಯೆಂದು ಹೇಳಬಹುದು. ಆಸ್ಟ್ರೇಲಿಯ ದಲ್ಲಿ ಇಲ್ಲಿಯ ವರೆಗೆ ನಾವು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿಲ್ಲ. ಈ ಗೆಲುವು ನಮಗೆ ಮತ್ತಷ್ಟು ಉತ್ತೇಜನ ನೀಡಿದೆ.
ವಿರಾಟ್‌ ಕೊಹ್ಲಿ

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    250
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌    235
ಭಾರತ ದ್ವಿತೀಯ ಇನ್ನಿಂಗ್ಸ್‌    307
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌
(ಗೆಲುವಿನ ಗುರಿ 323 ರನ್‌)

ಆರನ್‌ ಫಿಂಚ್‌    ಸಿ ಪಂತ್‌ ಬಿ ಅಶ್ವಿ‌ನ್‌    11
ಮಾರ್ಕಸ್‌ ಹ್ಯಾರಿಸ್‌    ಸಿ ಪಂತ್‌ ಬಿ ಶಮಿ    26
ಉಸ್ಮಾನ್‌ ಖ್ವಾಜಾ    ಸಿ ರೋಹಿತ್‌ ಬಿ ಅಶ್ವಿ‌ನ್‌    8
ಶಾನ್‌ ಮಾರ್ಷ್‌    ಸಿ ಪಂತ್‌ ಬಿ ಬುಮ್ರಾ    60
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸಿ ಪೂಜಾರ ಬಿ ಶಮಿ    14
ಟ್ರ್ಯಾವಿಸ್‌ ಹೆಡ್‌    ಸಿ ರಹಾನೆ ಬಿ ಇಶಾಂತ್‌    14
ಟಿಮ್‌ ಪೈನೆ    ಸಿ ಪಂತ್‌ ಬಿ ಬುಮ್ರಾ    41
ಪ್ಯಾಟ್‌ ಕಮಿನ್ಸ್‌    ಸಿ ಕೊಹ್ಲಿ ಬಿ ಬುಮ್ರಾ    28
ಮಿಚೆಲ್‌ ಸ್ಟಾರ್ಕ್‌    ಸಿ ಪಂತ್‌ ಬಿ ಶಮಿ    28
ನಥನ್‌ ಲಿಯೋನ್‌    ಔಟಾಗದೆ    38
ಜೋಶ್‌ ಹ್ಯಾಝಲ್‌ವುಡ್‌    ಸಿ ರಾಹುಲ್‌ ಬಿ ಅಶ್ವಿ‌ನ್‌    13

ಇತರ        10
ಒಟ್ಟು (ಆಲೌಟ್‌)    291
ವಿಕೆಟ್‌ ಪತನ: 1-28, 2-44, 3-60, 4-84, 5-115, 6-156, 7-187, 8-228, 9-259

ಬೌಲಿಂಗ್‌:
ಇಶಾಂತ್‌ ಶರ್ಮ        19-4-48-1
ಜಸ್‌ಪ್ರೀತ್‌ ಬುಮ್ರಾ        24-8-68-3
ಆರ್‌. ಅಶ್ವಿ‌ನ್‌        52.5-13-92-3
ಮೊಹಮ್ಮದ್‌ ಶಮಿ        20-4-65-3
ಮುರಳಿ ವಿಜಯ್‌        4-0-11-0
ಪಂದ್ಯಶ್ರೇಷ್ಠ: ಚೇತೇಶ್ವರ ಪೂಜಾರ

ಎಕ್ಸ್‌ಟ್ರಾ ಇನ್ನಿಂಗ್ಸ್‌
 ಇದೇ ಮೊದಲ ಬಾರಿಗೆ ಆಸ್ಟ್ರೇಲಿಯ ನೆಲದಲ್ಲಿ ಭಾರತ ಆಸೀಸ್‌ ವಿರುದ್ಧ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯವೊಂದರಲ್ಲಿ ಜಯಿಸಿದೆ. ಕಳೆದ 11 ಟೆಸ್ಟ್‌ ಸರಣಿಗಳಲ್ಲಿ ಭಾರತ 9 ಸರಣಿಗಳ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿದೆ. ಉಳಿದೆರಡು ಸರಣಿಯ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 

 50 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಹಾಗೂ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಲ್ಪ ರನ್‌ ಕಲೆ ಹಾಕಿ ವಿದೇಶಿ ಮೈದಾನದಲ್ಲಿ ಮೊದಲ ಬಾರಿ ಟೆಸ್ಟ್‌ ಪಂದ್ಯವನ್ನು ಗೆದ್ದಿದ್ದೆ. ಮೊದಲ 4 ವಿಕೆಟಿಗೆ ಮಾಡಿದ 41 ರನ್‌  ವಿಜಯದ ಫ‌ಲಿತಾಂಶದ 2ನೇ ಅತಿ ಕಡಿಮೆ ಮೊತ್ತವಾಗಿದೆ. 2004ರಲ್ಲಿ ಮುಂಬಯಿನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಭಾರತ 31ರನ್‌ಗೆ 4 ವಿಕೆಟ್‌ ಕಳೆದುಕೊಂಡಿತ್ತು. 1975ರಲ್ಲಿ ಚೆನ್ನೈನಲ್ಲಿ ವಿಂಡೀಸ್‌ ವಿರುದ್ಧ ಪಂದ್ಯದಲ್ಲಿ ಭಾರತ 41 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತ್ತು.

 ವಿರಾಟ್‌ ಕೊಹ್ಲಿ, ಒಂದು ಕ್ಯಾಲೆಂಡರ್‌ ವರ್ಷ ದಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಗೆದ್ದ 6ನೇ ನಾಯಕ ಎಂದೆ ನಿಸಿಕೊಂಡಿದ್ದಾರೆ. ಜೊಯಿ ಡಾರ್ಲಿಂಗ್‌ (1902), ಕೆಪ್ಲರ್‌ ವೆಸೆಲ್ಸ್‌ (1994), ಮಾರ್ಕ್‌ ಟೇಲರ್‌ (1997), ಗ್ರೇಮ್‌ ಸ್ಮಿತ್‌ (2008, 2012), ರಿಕಿ ಪಾಂಟಿಂಗ್‌ (2009) ಇನ್ನುಳಿದ ಐವರು ನಾಯಕರು.

 ರನ್‌ ಆಧಾರದಲ್ಲಿ ಈ 31 ರನ್‌ ಅಂತರದ ಜಯವು  ಭಾರತದ 3ನೇ ಅತಿ ಕಡಿಮೆ ರನ್‌ ಅಂತರದ ಜಯವಾಗಿದೆ. 2004ರ ಮುಂಬಯಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯನ್ನು 13 ರನ್‌ಗಳಿಂದ ಹಾಗೂ 1972-73ರ ಕೋಲ್ಕತಾ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು 28 ರನ್‌ಗಳಿಂದ ಭಾರತ ಸೋಲಿಸಿತ್ತು. 

 ರಿಷಬ್‌ ಪಂತ್‌ ಈ ಟೆಸ್ಟ್‌ ಪಂದ್ಯದಲ್ಲಿ  11 ಕ್ಯಾಚ್‌ ಪಡೆದು ಇಂಗ್ಲೆಂಡಿನ ಜ್ಯಾಕ್‌ ರಸೆಲ್‌ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿ’ವಿಲಿಯರ್ ಅವರ ವಿಶ್ವದಾಖಲೆಯನ್ನು ಸಮಗಟ್ಟಿದರು. ಭಾರತ ಪರ ಪಂತ್‌ ವೃದ್ಧಿಮಾನ್‌ ಸಾಹಾ ದಾಖಲೆ ಹಿಂದಿಕ್ಕಿದ್ದಾರೆ. ಸಾಹಾ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ ಟೌನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ 10 ಬಲಿ ಪಡೆದಿದ್ದರು. ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್‌ನಲ್ಲಿ ಪಂತ್‌ 10 ಬಲಿ ಪಡೆದ ಸಾಧನೆಯನ್ನು ಮಾಡಿದ್ದರು. 

 ಟ್ರ್ಯಾವಿಸ್‌ ಹೆಡ್‌,  ಪ್ಯಾಟ್‌ ಕಮಿನ್ಸ್‌ 7ನೇ ವಿಕೆಟಿಗೆ 50 ರನ್‌ ಕಲೆ ಹಾಕಿರುವುದು ಈ ಟೆಸ್ಟ್‌ನ ಆಸ್ಟ್ರೇಲಿಯ ಪರ ಏಕೈಕ ಗರಿಷ್ಠ ಜತೆಯಾಟವಾಗಿದೆ.  

 ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರ 87 ರನ್‌ಗಳ ಜತೆಯಾಟ ಈ ಟೆಸ್ಟ್‌ನ ಅತಿ ಹೆಚ್ಚು ರನ್‌ಗಳ ಜತೆಯಾಟವಾಗಿದೆ. 

 ದ್ವಿತೀಯ ಇನ್ನಿಂಗ್ಸ್‌ನಲ್ಲಿ  ಆಸ್ಟ್ರೇಲಿಯದ 291 ರನ್‌ ಮೊತ್ತ ಒಂದೇ ಒಂದು 50 ರನ್‌ಗಳ ಜತೆಯಾಟವಿಲ್ಲದೆ ದಾಖಲಾದ ಅತ್ಯಧಿಕ ಟೆಸ್ಟ್‌ ಮೊತ್ತವಾಗಿದೆ. 6ನೇ ಹಾಗೂ 8ನೇ ವಿಕೆಟ್‌ ಜತೆಯಾಟದಲ್ಲಿ ದಾಖಲಾದ 41 ರನ್‌ ಆಸ್ಟ್ರೇಲಿಯ ಇನ್ನಿಂಗ್ಸ್‌ನ ಅತ್ಯಧಿಕ ಮೊತ್ತ. 

 ಜಸ್‌ಪ್ರೀತ್‌ ಬುಮ್ರಾ ಮೊದಲ ಇನ್ನಿಂಗ್ಸ್‌
ನಲ್ಲಿ 47 ರನ್‌ ನೀಡಿ 3 ವಿಕೆಟ್‌ ಕಬಳಿಸಿರು ವುದು ಭಾರತೀಯ ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯಾಗಿದೆ. 

 ಪ್ರವಾಸಿ ತಂಡದ ಯಾವುದೇ ಬೌಲರ್‌ 4 ಪ್ಲಸ್‌ ವಿಕೆಟ್‌ ಪಡೆಯದೇ ಆಸ್ಟ್ರೇಲಿಯ ಸೋಲುತ್ತಿರುವುದು ಇದು 3ನೇ ಸಲವಾಗಿದೆ. 1955ರ ಅಡಿಲೇಡ್‌ ಟೆಸ್ಟ್‌ ಮತ್ತು 1971ರ ಸಿಡ್ನಿ ಟೆಸ್ಟ್‌ನಲ್ಲಿ ಯಾವುದೇ ಬೌಲರ್‌ 4 ಪ್ಲಸ್‌ ಪಡೆಯದಿದ್ದರೂ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯವನ್ನು ಸೋಲಿಸಿತ್ತು.

 ಈ ಟೆಸ್ಟ್‌ ಪಂದ್ಯದಲ್ಲಿ 35 ವಿಕೆಟ್‌ ಕ್ಯಾಚ್‌ ಮೂಲಕ ಉರುಳಿರುವುದು ಗರಿಷ್ಠವಾಗಿದೆ. ಈ ಹಿಂದೆ ಇದೇ ವರ್ಷ ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯ ನಡುವಿನ ಕೇಪ್‌ ಟೌನ್‌ ಟೆಸ್ಟ್‌ನಲ್ಲಿ 34 ವಿಕೆಟ್‌ ಕ್ಯಾಚ್‌ ಮೂಲಕ ಉರುಳಿದ್ದವು. ಈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕಮಿನ್ಸ್‌ ಎಲ್‌ಬಿಡಬ್ಲ್ಯುನಿಂದ ಔಟಾದ ಬಳಿಕ ಸತತ 23 ವಿಕೆಟ್‌ ಕ್ಯಾಚ್‌ ಮೂಲಕ ಉರುಳಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next