Advertisement
ನ್ಯೂಝಿಲ್ಯಾಂಡ್ ನೀಡಿದ 203 ರನ್ ಗಳ ಭರ್ಜರಿ ಸವಾಲನ್ನು ಬೆನ್ನತ್ತಿದ್ದ ಭಾರತ ಕೆ.ಎಲ್. ರಾಹುಲ್ (56), ಶ್ರೇಯಸ್ ಅಯ್ಯರ್ (ಅಜೇಯ 58) ಅವರ ಭರ್ಜರಿ ಅರ್ಧಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ (45) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 06 ವಿಕೆಟ್ ಗಳ ಗೆಲುವನ್ನು ತನ್ನದಾಗಿಸಿಕೊಂಡಿತು. 19 ಓವರ್ ಗಳಲ್ಲಿ ಭಾರತ ಗೆಲುವಿನ ಗುರಿ ಮುಟ್ಟಿತು.
ಈ ಗುರಿಯನ್ನು ಬೆನ್ನತ್ತಲಾರಂಭಿಸಿದ ಭಾರತಕ್ಕೆ ಉತ್ತಮ ಆರಂಭವೇನೂ ಲಭಿಸಲಿಲ್ಲ. ತಂಡದ ಮೊತ್ತ 16 ಆಗುವಷ್ಟರಲ್ಲಿ ರೋಹಿತ್ ಶರ್ಮಾ 07 ರನ್ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ರಾಹುಲ್ ಜೊತೆಯಾದ ವಿರಾಟ್ ಕೊಹ್ಲಿ ಕಿವೀಸ್ ಬೌಲರ್ ಗಳನ್ನು ದಂಡಿಸುತ್ತಾ ತಂಡದ ಮೊತ್ತವನ್ನು ಏರಿಸುವ ಜೊತೆಯಾಟವನ್ನು ಕಟ್ಟಿದರು. ಎರಡನೇ ವಿಕೆಟಿಗೆ ಈ ಜೋಡಿ 99 ರನ್ ಗಳನ್ನು ಕಲೆಹಾಕುವ ಮೂಲಕ ಗೆಲುವಿನ ಬುನಾದಿಯನ್ನು ಕಟ್ಟಿಕೊಟ್ಟರು.
ಈ ಸಂದರ್ಭದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದ ಕೆ.ಎಲ್. ರಾಹುಲ್ ಅವರು 56 ರನ್ ಗಳಿಸಿ ಔಟಾದರು. ಇವರು ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 56 ರನ್ ಸಿಡಿಸಿದ್ದು ವಿಶೇಷವಾಗಿತ್ತು. ರಾಹುಲ್ ಬೆನ್ನಲ್ಲೇ ವಿರಾಟ್ ಕೊಹ್ಲಿ 45 ರನ್ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ತಂಡದ ಗೆಲುವಿಗೆ 80ಕ್ಕೂ ಹೆಚ್ಚು ರನ್ ಗಳ ಅಗತ್ಯವಿತ್ತು ಬಾಕಿ ಇದ್ದಿದ್ದು 9 ಓವರ್ ಗಳು ಮಾತ್ರ. ಈ ಹಂತದಲ್ಲಿ ಶ್ರೇಯಸ್ ಅಯ್ಯರ್ ಅವರು ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇವರಿಗೆ ಶಿವಂ ದುಬೆ (13) ಮತ್ತು ಮನೀಶ್ ಪಾಂಡೆ (ಅಜೇಯ 14) ಅವರಿಂದ ಉತ್ತಮ ಬೆಂಬಲ ಲಭಿಸಿತು.
ಭಾರತವನ್ನು ಗೆಲುವಿನ ದಡ ಮುಟ್ಟಿಸಿದ ಶ್ರೇಯಸ್ ಅಯ್ಯರ್ ಅವರು ಕೇವಲ 29 ಎಸೆತಗಳಲ್ಲಿ 58 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹ ಒಳಗೊಂಡಿತ್ತು.