Advertisement

ಭಾರತ ಮಹಿಳಾ ಕಬಡ್ಡಿಗೆ ತೇಜಸ್ವಿನಿ ಕೋಚ್‌

06:15 AM Mar 09, 2018 | Team Udayavani |

ಬೆಂಗಳೂರು: ಭಾರತ ಕಬಡ್ಡಿ ಆಟಗಾರ್ತಿ ರಾಜ್ಯದ ತೇಜಸ್ವಿನಿ ಭಾಯಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಬೆನ್ನಲ್ಲೇ ಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಕೋಚ್‌ ಆಗಿ ಆಯ್ಕೆಯಾಗಿರುವ ಸಿಹಿ ಸುದ್ದಿ ಪ್ರಕಟಿಸಿದ್ದಾರೆ.

Advertisement

ತೇಜಸ್ವಿನಿ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಕೋಚ್‌ ಆಗಿ ಸವಾಲುಗಳು, ನಡೆದು ಬಂದ ದಾರಿ, ಗೆದ್ದ ಪ್ರಶಸ್ತಿಗಳನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತ ಮಹಿಳಾ ಆಟಗಾರ್ತಿಯರಿಗೆ ಸೂಕ್ತ ತರಬೇತಿ ನೀಡುವುದು, ದೇಶಕ್ಕಾಗಿ ಅವರನ್ನು ಸಜ್ಜುಗೊಳಿಸುವ ಕನಸನ್ನು ತೆರೆದಿಟ್ಟಿದ್ದಾರೆ.
ಕೋಚ್‌ ಆಗಿ ಆಯ್ಕೆಯಾಗಿರುವ ವಿಷಯವನ್ನು ಅಖೀಲ ಭಾರತೀಯ ಕಬಡ್ಡಿ ಒಕ್ಕೂಟ (ಎಕೆಎಫ್ಐ) ಬುಧವಾರ ತಿಳಿಸಿದೆ. ವಿಷಯ ಕೇಳಿ ಬಹಳ ಖುಷಿಯಾಯಿತು. 

ಮದುವೆಯಾದ ಬಳಿಕ ಜವಾಬ್ದಾರಿ ಹೆಚ್ಚಿತು ಅಂದುಕೊಂಡಿದ್ದೆ. ಈಗ ಮತ್ತೂಂದು ಜವಾಬ್ದಾರಿ ನನ್ನ ಹೆಗಲ ಮೇಲೆರಿದೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಭಗವಂತ ಕೊಟ್ಟಿದ್ದಾನೆ. ಹೀಗಾಗಿ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಆತ್ಮವಿಶ್ವಾಸವಿದೆ ಎಂದು ತೇಜಸ್ವಿನಿ ತಿಳಿಸಿದರು.

ಕಬಡ್ಡಿ ಆಟಕ್ಕೆ ವಿದಾಯ
ಹಲವಾರು ವರ್ಷದಿಂದ ಕಬಡ್ಡಿ ಆಡುತ್ತಾ ಬಂದಿದ್ದೇನೆ. ಮೊದಲು ಸ್ಥಳೀಯ, ಬಳಿಕ ರಾಜ್ಯ, ಅನಂತರ ರಾಷ್ಟ್ರೀಯ, ಕೊನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಆಡಿದೆ. ಏಶ್ಯನ್‌ ಕೂಟ ಸೇರಿದಂತೆ ಹಲವು ಪ್ರಶಸ್ತಿ ಗೆದ್ದೆ. ಇದರಿಂದ ನನಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ನನ್ನ ಸಾಧನೆ ಮೆಚ್ಚಿ ರಾಜ್ಯ ಸರಕಾರ ಸಮ್ಮಾನ ಮಾಡಿತು. ಕೇಂದ್ರ ಸರಕಾರದಿಂದ ಅರ್ಜುನ ಪ್ರಶಸ್ತಿ ಪಡೆದೆ. ಒಟ್ಟಾರೆ ವೃತ್ತಿ ಜೀವನದಲ್ಲಿ ಹಲವು ಪ್ರಶಸ್ತಿಗಳು ನನ್ನನ್ನು ಅರಸಿಕೊಂಡು ಬಂದಿರುವುದರ ಹಿಂದಿನ ದಾರಿ ಸುಗಮವಾಗಿರಲಿಲ್ಲ. ಎಲ್ಲ ಕಷ್ಟ-ಅವಮಾನವನ್ನು ಸಹಿಸಿಕೊಂಡು ತಾಳ್ಮೆಯಿಂದ ಕಾದೆ. ಕಬಡ್ಡಿ ನನ್ನ ಕೈಬಿಟ್ಟಿಲ್ಲ. ಬದುಕು ಕಟ್ಟಿಕೊಟ್ಟಿದೆ ಎಂದರು ತೇಜಸ್ವಿನಿ.

ಏಶ್ಯನ್‌ ಗೇಮ್ಸ್‌ ನನ್ನ ಗುರಿ
ಇಷ್ಟು ದಿನ ಆಟಗಾರ್ತಿಯಾಗಿ ತಂಡದಲ್ಲಿ ಆಡಿದ್ದೆ. ಕೋಚ್‌ ಆಗಿ ಹೊಸ ಜವಾಬ್ದಾರಿ ದೊಡ್ಡದು. ಸಣ್ಣ ಭಯವಿದೆ. ಈಗಾಗಲೇ ಗುಜರಾತ್‌ನಲ್ಲಿ ಭಾರತ ತಂಡದ ಶಿಬಿರ ಪ್ರಾರಂಭವಾಗಿದೆ. ಶೀಘ್ರದಲ್ಲೇ ಅಲ್ಲಿಗೆ ತೆರಳಬೇಕಿದೆ. ಅಲ್ಲಿಗೆ ವಿವಿಧ ರಾಜ್ಯದ ಆಟಗಾರ್ತಿಯರು ಬಂದಿದ್ದಾರೆ. ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಆಯ್ಕೆಯಾದ ಅಂತಿಮ ತಂಡವನ್ನು ಮುಂಬರುವ ಏಷ್ಯನ್‌ ಚಾಂಪಿಯನ್‌ಶಿಪ್‌ಗೆ ಕಳುಹಿಸಲಾಗುತ್ತದೆ. ಆ ತಂಡಕ್ಕೆ ಮಾರ್ಗದರ್ಶನ ನೀಡುವ ಹೊಣೆ ನನ್ನದಾಗಿರುತ್ತದೆ. ತಂಡವನ್ನು ಏಶ್ಯನ್‌ ಕೂಟವನ್ನು ಗೆಲ್ಲುವಂತೆ ಮಾಡುವುದು ಪ್ರಮುಖ ಗುರಿ ಎಂದು ತೇಜಸ್ವಿನಿ ತಿಳಿಸಿದರು.

Advertisement

ಮಾಜಿ ನಾಯಕಿ ಮಮತಾಗೆ ಗಂಡು ಮಗು
ಖ್ಯಾತ ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ ತಾಯಿಯಾಗಿದ್ದಾರೆ. 10 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಮಮತಾ ಪೂಜಾರಿ “ಉದಯವಾಣಿ’ಗೆ ತಿಳಿಸಿದ್ದಾರೆ. ಇದೇ ವೇಳೆ ಕಬಡ್ಡಿಗೆ ನಿವೃತ್ತಿ ನೀಡುವ ವಿಚಾರವನ್ನು ಅವರು ತಳ್ಳಿ ಹಾಕಿದ್ದಾರೆ. ಸದ್ಯಕ್ಕೆ ನಿವೃತ್ತಿ ಯೋಚನೆಯಿಲ್ಲ. ಮುಂದಿನ ವರ್ಷ ಮತ್ತೆ ಕಬಡ್ಡಿ ಕೂಟಗಳಲ್ಲಿ ಪಾಲ್ಗೊಳ್ಳುವೆ. ರಾಜ್ಯ ತಂಡವನ್ನು ರಾಷ್ಟ್ರೀಯ ಕೂಟದಲ್ಲಿ ಗೆಲ್ಲುವಂತೆ ಮಾಡುವ ಕನಸು ಇದೆ. ರೈಲ್ವೇಸ್‌ ಹೊರತುಪಡಿಸಿ ರಾಜ್ಯಕ್ಕೆ ಆಡುವ ಕನಸು ನನಸಾಗಲು ಫಿಟೆ°ಸ್‌ ಇರಬೇಕು ಎಂದು ತಿಳಿಸಿದರು.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next