Advertisement

INDwVsSAw; 3ನೇ ಟಿ20ಯಲ್ಲಿ ಕೌರ್‌ ಪಡೆ ಭರ್ಜರಿ ಜಯಭೇರಿ; ಸರಣಿ 1-1ರಿಂದ ಸಮಬಲ

10:19 PM Jul 09, 2024 | Team Udayavani |

ಚೆನ್ನೈ: ಪೂಜಾ ವಸ್ತ್ರಾಕರ್‌ ಅವರ ಜೀವನಶ್ರೇಷ್ಠ ಬೌಲಿಂಗ್‌ ಹಾಗೂ ರಾಧಾ ಯಾದವ್‌ ಅವರ ಘಾತಕ ದಾಳಿಯ ನೆರವಿನಿಂದ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಅಂತಿಮ ಟಿ20 ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಮಣಿಸಿದ ಭಾರತದ ವನಿತೆಯರು, ಸರಣಿಯನ್ನು 1-1ರಿಂದ ಸಮಬಲದಲ್ಲಿ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಭಾರತ ಸರ್ವಾಂಗೀಣ ಪ್ರದರ್ಶನದ ಮೂಲಕ ಯಶಸ್ಸು ಕಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 17.1 ಓವರ್‌ಗಳಲ್ಲಿ 84 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಭಾರತ 10.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 88 ರನ್‌ ಬಾರಿಸಿತು. ಇದು ವಿಕೆಟ್‌ ಅಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸಾಧಿಸಿದ ಅತೀ ದೊಡ್ಡ ಗೆಲುವು. ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ 12 ರನ್ನುಗಳಿಂದ ಜಯಿಸಿತ್ತು. ದ್ವಿತೀಯ ಮುಖಾಮುಖೀಗೆ ಮಳೆಯಿಂದ ಅಡಚಣೆ ಆಗಿತ್ತು.

ಪೂಜಾ ವಸ್ತ್ರಾಕರ್‌ ಕೇವಲ 13 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉಡಾಯಿಸಿದರು. ರಾಧಾ ಯಾದವ್‌ ಸಾಧನೆ 6 ರನ್ನಿಗೆ 3 ವಿಕೆಟ್‌. ಇದರಲ್ಲಿ ಒಂದು ಮೇಡನ್‌ ಓವರ್‌ ಕೂಡ ಸೇರಿತ್ತು. ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್‌ ಮತ್ತು ದೀಪ್ತಿ ಶರ್ಮ ಒಂದು ವಿಕೆಟ್‌ ಉರುಳಿಸಿದರು. 20 ರನ್‌ ಮಾಡಿದ ತಾಜ್ಮಿನ್‌ ಬ್ರಿಟ್ಸ್‌ ಅವರದೇ ದಕ್ಷಿಣ ಆಫ್ರಿಕಾ ಸರದಿಯ ಗರಿಷ್ಠ ಗಳಿಕೆ.

ಚೇಸಿಂಗ್‌ ವೇಳೆ ಸ್ಮತಿ ಮಂಧನಾ 54 ರನ್‌ (40 ಎಸೆತ, 8 ಬೌಂಡರಿ, 2 ಸಿಕ್ಸರ್‌) ಮತ್ತು ಶಫಾಲಿ ವರ್ಮ 27 ರನ್‌ ಮಾಡಿ ಅಜೇಯರಾಗಿ ಉಳಿದರು. ಡಿ ಕ್ಲರ್ಕ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಮಂಧನಾ ಭಾರತದ ಗೆಲುವನ್ನು ಸಾರಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ 17.1 ಓವರ್‌ಗಳಲ್ಲಿ 84/10 (ಬ್ರಿಟ್ಜ್ 20, ಬಾಶ್‌ 17, ಪೂಜಾ 13ಕ್ಕೆ 4, ರಾಧಾ 6ಕ್ಕೆ 3). ಭಾರತ 10.5 ಓವರ್‌ಗಳಲ್ಲಿ 84 (ಮಂಧನಾ ಅಜೇಯ 54, ಶಫಾಲಿ ಅಜೇಯ 27). ಪಂದ್ಯಶ್ರೇಷ್ಠ: ಪೂಜಾ ವಸ್ತ್ರಾಕರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next