Advertisement

ವನಿತಾ ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾ ಚಾಂಪಿಯನ್‌

10:45 PM Feb 02, 2023 | Team Udayavani |

ಈಸ್ಟ್‌ ಲಂಡನ್‌: ಕೂಟದ ಅಜೇಯ ತಂಡವಾದ ಭಾರತವನ್ನು 5 ವಿಕೆಟ್‌ಗಳಿಂದ ಮಣಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ವನಿತಾ ಟಿ20 ತ್ರಿಕೋನ ಸರಣಿಯ ಚಾಂಪಿಯನ್‌ ಆಗಿ ಮೂಡಿಬಂದಿದೆ.

Advertisement

ಗುರುವಾರದ ಪ್ರಶಸ್ತಿ ಸಮರದಲ್ಲಿ ಭಾರತ 4 ವಿಕೆಟ್‌ ನಷ್ಟಕ್ಕೆ ಕೇವಲ 109 ರನ್‌ ಗಳಿಸಿದರೆ, ದಕ್ಷಿಣ ಆಫ್ರಿಕಾ 18 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 113 ರನ್‌ ಮಾಡಿತು. ಲೀಗ್‌ ಹಂತದ ಮೊದಲ ಸುತ್ತಿನಲ್ಲಿ ಭಾರತದ ಕೈಯಲ್ಲಿ ಸೋಲನುಭವಿಸಿದ ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ಸೇಡು ತೀರಿಸಿಕೊಂಡಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಸವಾಲಿನ ಮೊತ್ತ ಪೇರಿಸುವಲ್ಲಿ ವಿಫ‌ಲವಾಯಿತು. 6 ವಿಕೆಟ್‌ ಉಳಿಸಿಕೊಂಡೂ ನೂರರ ಗಡಿ ದಾಟಲು ಪರದಾಡಿತು. ಅನುಭವಿ ಸ್ಮತಿ ಮಂಧನಾ 8 ಎಸೆತ ಎದುರಿಸಿದರೂ ರನ್‌ ಗಳಿಸಲು ವಿಫ‌ಲರಾದರು. ಜೆಮಿಮಾ ರೋಡ್ರಿಗಸ್‌ 18 ಎಸೆತಗಳಿಂದ 11 ರನ್‌ ಮಾಡಿದರು. 7 ಓವರ್‌ ಅಂತ್ಯಕ್ಕೆ ಆರಂಭಿಕರನ್ನು ಕಳೆದುಕೊಂಡ ಭಾರತ ಕೇವಲ 21 ರನ್‌ ಮಾಡಿತ್ತು.

ವನ್‌ಡೌನ್‌ನಲ್ಲಿ ಬಂದ ಹರ್ಲೀನ್‌ ದೇವಲ್‌ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೋರಾಟವೊಂದನ್ನು ಸಂಘ ಟಿಸಿದರು. ಭರ್ತಿ 8 ಓವರ್‌ ನಿಭಾಯಿಸಿ 3ನೇ ವಿಕೆಟಿಗೆ 48 ರನ್‌ ಒಟ್ಟುಗೂಡಿಸಿದರು. 46 ರನ್‌ ಮಾಡಿದ ಹರ್ಲೀನ್‌ ಭಾರತದ ಟಾಪ್‌ ಸ್ಕೋರರ್‌. ಇದಕ್ಕಾಗಿ ಅವರು 56 ಎಸೆತ ತೆಗೆದುಕೊಂಡರು. ಹೊಡೆ ದದ್ದು 4 ಬೌಂಡರಿ. ಕೌರ್‌ 22 ಎಸೆತ ಎದುರಿಸಿ 21 ರನ್‌ ಮಾಡಿದರು (2 ಬೌಂಡರಿ).

ಹರ್ಲೀನ್‌ ಹಾಗೂ ದೀಪ್ತಿ ಶರ್ಮ ಸಾಹಸದಿಂದಾಗಿ ಡೆತ್‌ ಓವರ್‌ಗಳಲ್ಲಿ ಭಾರತ 40 ರನ್‌ ಪೇರಿಸಲು ಯಶಸ್ವಿಯಾಯಿತು. ಈ ಅವಧಿಯಲ್ಲಿ ಉರುಳಿದ್ದು ಒಂದೇ ವಿಕೆಟ್‌. ದೀಪ್ತಿ ಗಳಿಕೆ ಅಜೇಯ 16 ರನ್‌.

Advertisement

ದಕ್ಷಿಣ ಆಫ್ರಿಕಾಕ್ಕೆ ಚೇಸಿಂಗ್‌ ಸುಲಭವೇನೂ ಆಗಿರಲಿಲ್ಲ. ಭಾರತದ ಬೌಲರ್ ಈ ಮೊತ್ತವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರು. 14 ಓವರ್‌ ಆಗುವಾಗ 66ಕ್ಕೆ 5 ವಿಕೆಟ್‌ ಬಿದ್ದಾಗ ಕೌರ್‌ ಪಡೆಗೂ ಗೆಲುವಿನ ಅವಕಾಶವಿತ್ತು. ಆದರೆ ಕ್ಲೋ ಟ್ರಯಾನ್‌ ಅಜೇಯ 57 ರನ್‌ (32 ಎಸೆತ, 6 ಬೌಂಡರಿ, 2 ಸಿಕ್ಸರ್‌) ಮತ್ತು ನಾಡಿನ್‌ ಡಿ ಕ್ಲರ್ಕ್‌ ಅಜೇಯ 17 ರನ್‌ ಮಾಡಿ ತಂಡವನ್ನು ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-4 ವಿಕೆಟಿಗೆ 109 (ಹರ್ಲೀನ್‌ 46, ಕೌರ್‌ 21, ದೀಪ್ತಿ 16, ಎಂಲಾಬಾ 16ಕ್ಕೆ 2). ದಕ್ಷಿಣ ಆಫ್ರಿಕಾ-18 ಓವರ್‌ಗಳಲ್ಲಿ 5 ವಿಕೆಟಿಗೆ 113 (ಟ್ರಯಾನ್‌ ಔಟಾಗದೆ 57, ಡಿ ಕ್ಲರ್ಕ್‌ ಔಟಾಗದೆ 17, ಸ್ನೇಹ್‌ 21ಕ್ಕೆ 2, ದೀಪ್ತಿ 19ಕ್ಕೆ 1, ರಾಜೇಶ್ವರಿ 25ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next