Advertisement

ವನಿತಾ ಏಕದಿನ ಪಂದ್ಯ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

11:28 PM Sep 18, 2022 | Team Udayavani |

ಹೋವ್‌: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ, ಮೊದಲ ವನಿತಾ ಏಕದಿನ ಪಂದ್ಯದಲ್ಲಿ ಇಂಗ್ಲೆಂಡನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದು ಶುಭಾರಂಭ ಮಾಡಿದೆ. ಆದರೆ ಸ್ಮೃತಿ ಮಂಧನಾ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಬೇಕಾಯಿತು.

Advertisement

ಇಂಗ್ಲೆಂಡ್‌ 7 ವಿಕೆಟಿಗೆ 227 ರನ್‌ ಗಳಿಸಿದರೆ, ಭಾರತ 44.2 ಓವರ್‌ಗಳಲ್ಲಿ 3 ವಿಕೆಟಿಗೆ 232 ರನ್‌ ಬಾರಿಸಿ ಗೆಲುವು ಸಾಧಿಸಿತು.

ಸ್ಮತಿ ಮಂಧನಾ 91 ರನ್ನಿಗೆ ಔಟಾಗಿ 6ನೇ ಶತಕದಿಂದ ವಂಚಿತರಾಗಬೇಕಾಯಿತು. 99 ಎಸೆತ ನಿಭಾಯಿಸಿದ ಅವರು 10 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದರು. ಅಮೋಘ ಬ್ಯಾಟಿಂಗ್‌ ನಡೆಸಿದ ಯಾಸ್ತಿಕಾ ಭಾಟಿಯಾ (50), ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (ಅಜೇಯ 74) ಕೂಡ ಅರ್ಧ ಶತಕ ಹೊಡೆದರು. ಕೌರ್‌ ಸಿಕ್ಸರ್‌ ಬಾರಿಸಿ ಭಾರತದ ಗೆಲುವನ್ನು ಸಾರಿದರು. ಶಫಾಲಿ ವರ್ಮ ಒಂದೇ ರನ್ನಿಗೆ ಆಟ ಮುಗಿಸಿದಾಗ ಭಾರತ ಆತಂಕಕ್ಕೆ ಒಳಗಾಯಿತಾದರೂ ಮಂಧನಾ ಎರಡು ಅತ್ಯುತ್ತಮ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಜೂಲನ್‌ ನಿಖರ ಬೌಲಿಂಗ್‌
ವಿದಾಯ ಸರಣಿಯಲ್ಲಿ ಆಡುತ್ತಿರುವ ವೇಗಿ ಜೂಲನ್‌ ಗೋಸ್ವಾಮಿ ನಿಖರ ಬೌಲಿಂಗ್‌ ದಾಳಿ ನಡೆಸಿ ಆಂಗ್ಲ ಪಡೆಯನ್ನು ಕಟ್ಟಿಹಾಕಲು ಯಶಸ್ವಿಯಾದರು. ಅವರು 10 ಓವರ್‌ಗಳಲ್ಲಿ ನೀಡಿದ್ದು ಬರೀ 20 ರನ್‌. ಇದರಲ್ಲಿ 2 ಓವರ್‌ ಮೇಡನ್‌ ಆಗಿತ್ತು. 42 ಡಾಟ್‌ ಬಾಲ್‌ಗ‌ಳಿದ್ದವು. ಎದುರಾಳಿಗೆ ಒಂದೂ ಬೌಂಡರಿ, ಸಿಕ್ಸರ್‌ ಬಾರಿಸಲು ಅವಕಾಶ ನೀಡಲಿಲ್ಲ. ಓಪನರ್‌ ಟಾಮಿ ಬ್ಯೂಮಂಟ್‌ ಅವರನ್ನು ಜೂಲನ್‌ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು.

ದೀಪ್ತಿ ಶರ್ಮ ಕೂಡ ಪರಿಣಾಮಕಾರಿ ಬೌಲಿಂಗ್‌ ನಡೆಸಿದರು. 33ಕ್ಕೆ 2 ವಿಕೆಟ್‌ ಉರುಳಿಸಿದ ಅವರಿಗೆ ಹೆಚ್ಚಿನ ಯಶಸ್ಸು ಸಿಕ್ಕಿತು. ಉಳಿದಂತೆ ಮೇಘನಾ ಸಿಂಗ್‌, ರಾಜೇಶ್ವರಿ ಗಾಯಕ್ವಾಡ್‌, ಸ್ನೇಹ್‌ ರಾಣಾ ಮತ್ತು ಹಲೀìನ್‌ ದೇವಲ್‌ ಒಂದೊಂದು ವಿಕೆಟ್‌ ಕಿತ್ತರು.

Advertisement

ಇಂಗ್ಲೆಂಡಿನ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆರಂಭಿಕರಾದ ಎಮ್ಮಾ ಲ್ಯಾಂಬ್‌ (12) ಮತ್ತು ಟಾಮಿ ಬ್ಯೂಮಂಟ್‌ (7) 21 ರನ್‌ ಆಗುವಷ್ಟರಲ್ಲಿ ಆಟ ಮುಗಿಸಿದರು. ಸೋಫಿಯಾ ಡಂಕ್ಲಿ (29), ಅಲೈಸ್‌ ಕ್ಯಾಪ್ಸಿ (19) ಅವರದು ಸಾಮಾನ್ಯ ಆಟ. ನಾಯಕಿ ಆ್ಯಮಿ ಜೋನ್ಸ್‌ ಗಳಿಕೆ ಕೇವಲ 3 ರನ್‌. ಹೀಗೆ 34ನೇ ಓವರ್‌ ವೇಳೆ ಇಂಗ್ಲೆಂಡ್‌ 128ಕ್ಕೆ 6 ವಿಕೆಟ್‌ ಉರುಳಿಸಿಕೊಂಡು ಚಡಪಡಿಸುತ್ತಿತ್ತು. ಅನಂತರವೇ ಅತಿಥೇಯರ ಬ್ಯಾಟಿಂಗ್‌ ಚೇತರಿಕೆ ಕಂಡದ್ದು. ಉಳಿದ 18 ಓವರ್‌ಗಳಲ್ಲಿ 4 ವಿಕೆಟಿಗೆ 99 ರನ್‌ ಒಟ್ಟುಗೂಡಿತು.

ಡೇನಿಯಲ್‌ ವ್ಯಾಟ್‌ 43 ರನ್‌ ಕೊಡುಗೆ ಸಲ್ಲಿಸಿದರು. ಡೇವಿಡ್‌ಸನ್‌ ರಿಚರ್ಡ್ಸ್‌ -ಸೋಫಿ (31) 7ನೇ ವಿಕೆಟಿಗೆ 50 ರನ್‌ ಪೇರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಕೊನೆಯಲ್ಲಿ ಚಾರ್ಲೋಟ್‌ ಡೀನ್‌ (ಅಜೇಯ 24) ಕೂಡ ಡೇವಿಡ್‌ಸನ್‌ಗೆ ಉತ್ತಮ ಬೆಂಬಲವಿತ್ತರು. ಮುರಿಯದ 8ನೇ ವಿಕೆಟಿಗೆ 49 ರನ್‌ ಹರಿದು ಬಂತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-7 ವಿಕೆಟಿಗೆ 227 (ಡೇವಿಡ್‌ಸನ್‌ ರಿಚರ್ಡ್ಸ್‌ ಔಟಾಗದೆ 50, ವ್ಯಾಟ್‌ 43, ಸೋಫಿ 31, ಡಂಕ್ಲಿ 29, ಡೀನ್‌ ಔಟಾಗದೆ 24, ದೀಪ್ತಿ ಶರ್ಮ 33ಕ್ಕೆ 2, ಜೂಲನ್‌ 20ಕ್ಕೆ 1, ಹಲೀìನ್‌ 25ಕ್ಕೆ 1). ಭಾರತ- 44.2 ಓವರ್‌ಗಳಲ್ಲಿ 3 ವಿಕೆಟಿಗೆ 232 (ಮಂಧನಾ 91, ಕೌರ್‌ ಔಟಾಗದೆ 74, ಯಾಸ್ತಿಕಾ 50).

Advertisement

Udayavani is now on Telegram. Click here to join our channel and stay updated with the latest news.

Next