Advertisement

ಟಿ20 ಸರಣಿ: ನಾಯಕಿ ಕೌರ್‌ ಮೇಲೆ ಒತ್ತಡ

10:23 PM Jul 08, 2021 | Team Udayavani |

ನಾರ್ತಾಂಪ್ಟನ್‌: ಮಿಥಾಲಿ ರಾಜ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ನಾಯಕತ್ವಕ್ಕೆ ಸಾಕ್ಷಿ ಯಾದ ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡರೂ ಕೊನೆಯಲ್ಲಿ ಒಂದಿಷ್ಟು ಪ್ರತಿಷ್ಠೆ ಗಳಿಸುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರ ವಾಗಿತ್ತು. ಇನ್ನೀಗ ಟಿ20 ಸರಣಿಯ ಸರದಿ. ಶುಕ್ರವಾರ ರಾತ್ರಿ ಮೊದಲ ಮುಖಾ ಮುಖೀ ನಡೆಯಲಿದೆ.

Advertisement

ಇಲ್ಲಿ ಮಿಥಾಲಿ ಇಲ್ಲ. ಜತೆಗೆ ಅನುಭವಿ ಬೌಲರ್‌ ಜೂಲನ್‌ ಗೋಸ್ವಾಮಿ ಕೂಡ ಕಾಣಿಸರು. ಬ್ಯಾಟಿಂಗ್‌ ಬರಗಾಲ ಅನುಭವಿಸುತ್ತಿರುವ, 2018ರ ಬಳಿಕ ಟಿ20 ಮಾದರಿಯಲ್ಲಿ ಒಂದೂ ಅರ್ಧ ಶತಕ ಗಳಿಸದ ಹರ್ಮನ್‌ಪ್ರೀತ್‌ ಕೌರ್‌ ನಾಯಕಿ. ಬಲಿಷ್ಠ ಇಂಗ್ಲೆಂಡ್‌ ವಿರುದ್ಧ ಭಾರತವನ್ನು ಮುನ್ನಡೆಸುವಲ್ಲಿ ಕೌರ್‌ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತಾರೆ ಹಾಗೂ ಅವರ ಬ್ಯಾಟಿನಿಂದ ರನ್‌ ಹರಿದೀತೇ ಎಂಬುದು ಭಾರತ ತಂಡವನ್ನು ಕಾಡುತ್ತಿರುವ ಸಮಸ್ಯೆ. ಇದು ಬಗೆಹರಿದರೆ 3 ಪಂದ್ಯಗಳ ಸರಣಿ ಅತ್ಯಂತ ರೋಚಕವಾಗಿ ಸಾಗುವುದರಲ್ಲಿ ಅನುಮಾನವಿಲ್ಲ.

ಟಿ20ಗೆ ಹೇಳಿಸಿದ ತಂಡ:

ಕೌರ್‌ ಫಾರ್ಮ್ನಲ್ಲಿಲ್ಲ ಎಂಬ ಚಿಂತೆ ಹೊರತುಪಡಿಸಿದರೆ ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ ಟಿ20 ಪಂದ್ಯಕ್ಕೆ ಹೇಳಿ ಮಾಡಿಸಿದಂತಿದೆ. ಮಂಧನಾ-ಶಫಾಲಿ, 17 ವರ್ಷದ ರಿಚಾ ಘೋಷ್‌, ಜೆಮಿಮಾ, 2016ರ ಬಳಿಕ ಮೊದಲ ಟಿ20 ಪಂದ್ಯ ಆಡಲಿರುವ ಆಲ್‌ರೌಂಡರ್‌ ಸ್ನೇಹ್‌ ರಾಣಾ, ದೀಪ್ತಿ, ಹೆಚ್ಚುವರಿ ಸವ್ಯಸಾಚಿ ಸಿಮ್ರಾನ್‌ ತಂಡದ ಭರವಸೆಗಳಾಗಿ ಗೋಚರಿಸುತ್ತಿದ್ದಾರೆ.

ಏಕದಿನದಲ್ಲಿ ಬಹಳಷ್ಟು ಡಾಟ್‌ ಬಾಲ್‌ ನುಂಗಿದರು ಎಂಬ ಅಪವಾದ ತಂಡದ ಬ್ಯಾಟ್ಸ್‌ಮನ್‌ಗಳ ಮೇಲಿತ್ತು. ಇಲ್ಲಿ ಸ್ಟ್ರೈಕ್‌ ರೊಟೇಟ್‌ ಮಾಡಲು ಒತ್ತು ನೀಡಬೇಕಿದೆ. ಬೌಲಿಂಗ್‌ನಲ್ಲಿ ಶಿಖಾ, ರಾಧಾ, ಪೂಜಾ, ಅರುಂಧತಿ, ಪೂನಂ ಅವರು ಆಂಗ್ಲರನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸಬೇಕಿದೆ.

Advertisement

ವ್ಯಾಟ್‌ ಆಗಮನ:

ಓಪನರ್‌ ಡೇನಿಯಲ್‌ ವ್ಯಾಟ್‌ ಇಂಗ್ಲೆಂಡ್‌ ತಂಡವನ್ನು ಸೇರಿಸಿಕೊಂಡಿರುವ ಪ್ರಮುಖ ಆಟಗಾರ್ತಿ. ಹಿಲ್‌ ಗೈರಲ್ಲಿ ಅವರು ಬ್ಯೂಮಂಟ್‌ ಜತೆ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಆದರೆ ಏಕದಿನದಲ್ಲಿ ಘಾತಕವಾಗಿ ಪರಿಣಮಿಸಿದ ಮಧ್ಯಮ ವೇಗಿ ಕೇಟ್‌ ಕ್ರಾಸ್‌ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next