Advertisement

ಭಾರತಕ್ಕೆ ಸೋಲು ಡೇನಿಯಲ್‌ ವ್ಯಾಟ್‌ ಭರ್ಜರಿ ಶತಕ

06:10 AM Mar 26, 2018 | Team Udayavani |

ಇಂಗ್ಲೆಂಡ್‌: ಆರಂಭಿಕ ಆಟಗಾರ್ತಿ ಡೇನಿಯಲ್‌ ವ್ಯಾಟ್‌ ಅವರ ಭರ್ಜರಿ ಶತಕದಿಂದಾಗಿ ಇಂಗ್ಲೆಂಡ್‌ ತಂಡವು ವನಿತಾ ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಭಾರತ ತಂಡವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದೆ.

Advertisement

ಬೃಹತ ಮೊತ್ತದ ಈ ಸೆಣಸಾಟದಲ್ಲಿ ವ್ಯಾಟ್‌ ಅವರ ಸ್ಫೋಟಕ ಆಟದಿಂದಾಗಿ ಇಂಗ್ಲೆಂಡ್‌ ಜಯಭೇರಿ ಬಾರಿಸುವಂತಾಯಿತು. ಇದು ಇಂಗ್ಲೆಂಡ ತಂಡದ ಈ ಸರಣಿಯಲ್ಲಿನ ಸತತ ಎರಡನೇ ಗೆಲುವು ಆಗಿದ್ದರೆ ಭಾರತ ಆಡಿದ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಸರಣಿಯಲ್ಲಿ ಭಾಗವಹಿಸುತ್ತಿರುವ ಮೂರನೇ ತಂಡವಾದ ಆಸ್ಟ್ರೇಲಿಯ ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ವನಿತೆಯರು ಮಿಥಾಲಿ ರಾಜ್‌ ಮತ್ತು ಸ್ಮತಿ ಮಂದನಾ ಅವರ ಉತ್ತಮ ಆಟದಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟಿಗೆ 198 ರನ್‌ ಪೇರಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್‌ ವನಿತೆಯರು ವ್ಯಾಟ್‌ ಅವರ ಭರ್ಜರಿ ಆಟದಿಂದಾಗಿ 18.4 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ ನಷ್ಟದಲ್ಲಿ ಜಯ ಸಾಧಿಸಿದೆ.

ಶತಕ ಜತೆಯಾಟ
ಮಿಥಾಲಿ ರಾಜ್‌ ಮತ್ತು ಮಂದನಾ ಅವರ ಉತ್ತಮ ಆಟದಿಂದಾಗಿ ಭಾರತ ಮೊದಲ ವಿಕೆಟಿಗೆ 129 ರನ್‌ ಪೇರಿಸಿತು. 40 ಎಸೆತಗಳಲ್ಲಿ 76 ರನ್‌ ಸಿಡಿಸಿದ ಮಂದನಾ ಮೊದಲಿಗರಾಗಿ ಪೆವಿಲಿಯನ್‌ ಸೇರಿಕೊಂಡರು.12 ಬೌಂಡರಿ ಬಾರಿಸಿದ ಅವರು 2 ಸಿಕ್ಸರ್‌ ಹೊಡೆದಿದ್ದರು. ಮಿಥಾಲಿ 53 ಮತ್ತು ಹರ್ಮನ್‌ಪ್ರೀತ್‌ ಕೌರ್‌ 30 ರನ್‌ ಹೊಡೆದರು.

ಬ್ರಬೋರ್ನ್ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದ ವ್ಯಾಟ್‌ ಕೇವಲ 64 ಎಸೆತಗಳಲ್ಲಿ 124 ರನ್‌ ಸಿಡಿಸಿ ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. 17ನೇ ಓವರ್‌ತನಕ ಕ್ರೀಸ್‌ನಲ್ಲಿದ್ದ ವ್ಯಾಟ್‌ 15 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿ ರಂಜಿಸಿದರು. ಬ್ರಿಯೋನಿ ಸ್ಮಿತ್‌ ಮತ್ತು ತಮ್ಮಿ ಬೀಮೌಂಟ್‌ ಜತೆ ಉತ್ತಮ ಜತೆಯಾಟದ ಆಟದಲ್ಲಿ  ಪಾಲ್ಗೊಂಡ ವ್ಯಾಟ್‌ ಚೇಸಿಂಗ್‌ ವೇಳೆ ಇಂಗ್ಲೆಂಡಿನ ದಾಖಲೆಯ ಮೊತ್ತದ ಗೆಲುವಿಗೆ ಕಾರಣರಾದರು. ಸ್ಮಿತ್‌ ಜತೆ 61 ಮತ್ತು ಬೀಮೌಂಟ್‌ ಜತೆ 96 ರನ್ನುಗಳ ಜತೆಯಾಟ ನಡೆಸಿದರು. ಗೆಲ್ಲಲು 16 ರನ್‌ಗಳಿರುವಾಗ ವ್ಯಾಟ್‌ ಅವರನ್ನು ದೀಪ್ತಿ ಶರ್ಮ ಔಟ್‌ ಮಾಡಿಸಿದ್ದರು.

Advertisement

ಭಾರತದ ಪರ ವೇಗದ ಅರ್ಧ ಶತಕ ಸಿಡಿಸಿದ ಮಂದನಾ 
ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ 25 ಎಸೆತದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಇದು ಭಾರತದ ಪರ ದಾಖಲಾದ ಅತಿ ವೇಗದ ಅರ್ಧ ಶತಕವಾಗಿದೆ. ವಿಶ್ವಮಟ್ಟದಲ್ಲಿ ಜಂಟಿ 3ನೇ ವೇಗದ ಅರ್ಧಶತಕವಾಗಿದೆ. ಮಂದನಾ ಒಟ್ಟು 40 ಎಸೆತದಲ್ಲಿ 76 ರನ್‌ ಬಾರಿಸಿದರು. ಅವರ ಆಟದಲ್ಲಿ 12 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು. ಇದಕ್ಕೂ ಮುನ್ನ ಇದೇ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಮಂದನಾ 30 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದು, ಭಾರತದ ಪರ ದಾಖಲಾದ ಅತೀ ವೇಗದ ಅರ್ಧ ಶತಕವಾಗಿತ್ತು. ನ್ಯೂಜಿಲ್ಯಾಂಡ್‌ನ‌ ಸೋಫಿ ಡೆವೈನ್‌ 18 ಎಸೆತದಲ್ಲಿ ಅರ್ಧಶತಕ ದಾಖಲಿಸಿದ್ದು, ವಿಶ್ವದಲ್ಲಿಯೇ ಅತೀ ವೇಗದ ಅರ್ಧಶತಕವಾಗಿದೆ.

ಸಂಕ್ಷಿಪ್ತ ಸ್ಕೋರು: ಭಾರತ ವನಿತೆಯರು 4 ವಿಕೆಟಿಗೆ 198 (ಮಿಥಾಲಿ ರಾಜ್‌ 53, ಸ್ಮತಿ ಮಂಧನಾ 76, ಹರ್ಮನ್‌ಪ್ರೀತ್‌ ಕೌರ್‌ 30); ಇಂಗ್ಲೆಂಡ್‌ ವನಿತೆಯರು 18.4 ಓವರ್‌ಗಳಲ್ಲಿ 3 ವಿಕೆಟಿಗೆ 199 (ಡೇನಿಯಲ್‌ ವ್ಯಾಟ್‌ 124, ಬೀಮೌಂಟ್‌ 35).

Advertisement

Udayavani is now on Telegram. Click here to join our channel and stay updated with the latest news.

Next