Advertisement

ಭಾರತಕ್ಕೆ ಕೊನೆಯಲ್ಲೊಂದು ಮುಖಭಂಗ

02:35 AM Feb 02, 2019 | Team Udayavani |

ಹ್ಯಾಮಿಲ್ಟನ್‌: ಪುರುಷರ ಕ್ರಿಕೆಟಿಗರಂತೆ ಭಾರತದ ಮಹಿಳಾ ಕ್ರಿಕೆಟ್ ತಂಡವೂ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿ ಗೆದ್ದ ಬಳಿಕ ಎಡವಿದೆ. ಶುಕ್ರವಾರ ಹ್ಯಾಮಿಲ್ಟನ್‌ನಲ್ಲೇ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ 8 ವಿಕೆಟ್‌ಗಳಿಂದ ಸೋಲಿಸಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿತು.

Advertisement

ಕಾಕತಾಳೀಯವೆಂಬಂತೆ, ಗುರುವಾರ ಇಲ್ಲೇ ನಡೆದ ಪುರುಷರ 4ನೇ ಏಕದಿನದಲ್ಲೂ ನ್ಯೂಜಿಲೆಂಡ್‌ 8 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತ್ತು. ಇದಕ್ಕೂ ಮಿಗಿಲಾದ ಸ್ವಾರಸ್ಯವೆಂದರೆ, ಗುರುವಾರದ್ದು ನಾಯಕ ರೋಹಿತ್‌ ಶರ್ಮ ಅವರ 200ನೇ ಏಕದಿನ ಪಂದ್ಯವಾದರೆ, ಶುಕ್ರವಾರ ನಾಯಕಿ ಮಿಥಾಲಿ ರಾಜ್‌ ಅವರ 200ನೇ ಏಕದಿನ ಪಂದ್ಯವಾಗಿತ್ತು. ಇಬ್ಬರ ಪಾಲಿಗೂ ಈ ‘ಮೈಲುಗಲ್ಲು ಪಂದ್ಯ’ ಕಹಿಯನ್ನೇ ಉಣಿಸಿತು!

ಭಾರತ ಬ್ಯಾಟಿಂಗ್‌ ಕುಸಿತ: ಸರಣಿಯಲ್ಲೇ ಮೊದಲ ಸಲ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದ ಭಾರತ 44 ಓವರ್‌ಗಳಲ್ಲಿ 149ಕ್ಕೆ ಆಲೌಟ್ ಆಯಿತು. ಜವಾಬಿತ್ತ ನ್ಯೂಜಿಲೆಂಡ್‌ 29.2 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 153 ರನ್‌ ಬಾರಿಸಿತು.

ಆರಂಭಿಕ ಆಟಗಾರ್ತಿ ಸುಝೀ ಬೇಟ್ಸ್‌ 57 ರನ್‌, ನಾಯಕಿ ಆ್ಯಮಿ ಸ್ಯಾಟರ್‌ವೇಟ್ ಅಜೇಯ 66 ರನ್‌ ಹೊಡೆದು ತಂಡದ ಸುಲಭ ಜಯಕ್ಕೆ ಕಾರಣರಾದರು.

ಭಾರತಕ್ಕೆ ಆಫ್ಸ್ಪಿನ್ನರ್‌ ಅನ್ನಾ ಪೀಟರ್‌ಸನ್‌ (28ಕ್ಕೆ 4) ಮತ್ತು ಮಧ್ಯಮ ವೇಗಿ ಲೀ ಟಹುಹು (26ಕ್ಕೆ 3) ಘಾತಕವಾಗಿ ಪರಿಣಮಿಸಿದರು. ಇವರಿಬ್ಬರ ಆರಂಭಿಕ ಸ್ಪೆಲ್‌ ಅತ್ಯಂತ ಹರಿತವಾಗಿತ್ತು. ಇನ್‌ಫಾರ್ಮ್ ಆರಂಭಿಕರಾದ ಸ್ಮತಿ ಮಂಧನಾ ಮತ್ತು ಜೆಮಿಮಾ ರೋಡ್ರಿಗಸ್‌ ಅವರನ್ನು 13 ರನ್‌ ಆಗುವಷ್ಟರಲ್ಲಿ ಪೆವಿಲಿಯನ್ನಿಗೆ ಅಟ್ಟಿದರು. ಹಿಂದಿನೆರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ಮಿಂಚು ಹರಿಸಿದ್ದ ಸ್ಮತಿ ಮಂಧನಾ ಒಂದೇ ರನ್ನಿಗೆ ಔಟಾದರೆ, ಜೆಮಿಮಾ 12 ರನ್‌ ಮಾಡಿ ನಿರ್ಗಮಿಸಿದರು. ನಾಯಕಿ ಮಿಥಾಲಿ ರಾಜ್‌ ಗಳಿಕೆ 9 ರನ್‌.

Advertisement

ವನ್‌ಡೌನ್‌ನಲ್ಲಿ ಬಂದ ದೀಪ್ತಿ ಶರ್ಮ ಮಾತ್ರ ಕಿವೀಸ್‌ ದಾಳಿಗೆ ಜಗ್ಗಲಿಲ್ಲ. 90 ಎಸೆತ ನಿಭಾಯಿಸಿ 52 ರನ್‌ ಹೊಡೆದರು (4 ಬೌಂಡರಿ). ದೀಪ್ತಿ 38ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ತಂಡದ ಹೋರಾಟವನ್ನು ಜಾರಿಯಲ್ಲಿರಿಸಿದರು. ಹರ್ಮನ್‌ಪ್ರೀತ್‌ ಕೌರ್‌ 24, ಡಿ. ಹೇಮಲತಾ 13, ಜೂಲನ್‌ ಗೋಸ್ವಾಮಿ 12 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ 44 ಓವರ್‌ಗೆ 144 (ದೀಪ್ತಿ ಶರ್ಮ 52, ಹರ್ಮನ್‌ಪ್ರೀತ್‌ 24, ಪೀಟರ್‌ಸನ್‌ 28ಕ್ಕೆ 4). ನ್ಯೂಜಿಲೆಂಡ್‌ 29.2 ಓವರ್‌ಗೆ 153/2 (ಸ್ಯಾಟರ್‌ವೇಟ್ ಔಟಾಗದೆ 66, ಬೇಟ್ಸ್‌ 57, ಪೂನಂ ಯಾದವ್‌ 31ಕ್ಕೆ 1).

ಪಂದ್ಯಶ್ರೇಷ್ಠೆ: ಅನ್ನಾ ಪೀಟರ್‌ಸನ್‌

ಮಿಥಾಲಿ: 200 ಪಂದ್ಯಗಳ ಸಾಧಕಿ

ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಶುಕ್ರವಾರ ಅಪರೂಪದ ಸಾಧನೆಯೊಂದರ ಮೂಲಕ ಗುರುತಿಸಿಕೊಂಡರು. ನ್ಯೂಜಿಲೆಂಡ್‌ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ಆಡಲಿಳಿದ 36ರ ಹರೆಯದ ಮಿಥಾಲಿ ಪಾಲಿಗೆ ಇದು 200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಮಹಿಳಾ ಏಕದಿನ ಚರಿತ್ರೆಯಲ್ಲಿ 200 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ್ತಿ ಎಂಬುದು ಮಿಥಾಲಿ ಹಿರಿಮೆ.

1999ರಲ್ಲಿ ಏಕದಿನ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಮಿಥಾಲಿ ರಾಜ್‌, 51.33 ಸರಾಸರಿಯಲ್ಲಿ 6,622 ರನ್‌ ಪೇರಿಸಿದ್ದು, 7 ಶತಕ ಬಾರಿಸಿದ್ದಾರೆ. ಅಜೇಯ 125 ರನ್‌ ಸರ್ವಾಧಿಕ ಗಳಿಕೆ. 8 ವಿಕೆಟ್ ಜತೆಗೆ 50 ಕ್ಯಾಚ್ ಕೂಡ ಸಂಪಾದಿಸಿದ್ದಾರೆ. 200 ಏಕದಿನ ಪಂದ್ಯಗಳ ಜತೆಗೆ 10 ಟೆಸ್ಟ್‌ ಮತ್ತು 85 ಟಿ20 ಪಂದ್ಯಗಳಲ್ಲೂ ಮಿಥಾಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಮಿಥಾಲಿ ರಾಜ್‌ ಹೊರತುಪಡಿಸಿದರೆ ಇಂಗ್ಲೆಂಡಿನ ಚಾರ್ಲೋಟ್ ಎಡ್ವರ್ಡ್ಸ್‌ 191 ಪಂದ್ಯಗಳನ್ನಾಡಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಆದರೆ ಎಡ್ವರ್ಡ್ಸ್‌ ಈಗಾಗಲೇ ಕ್ರಿಕೆಟಿಗೆ ವಿದಾಯ ಹೇಳಿಯಾಗಿದೆ. ಸಮಕಾಲೀನರಲ್ಲಿ ಭಾರತದವರೇ ಆದ ಜೂಲನ್‌ ಗೋಸ್ವಾಮಿ 174 ಪಂದ್ಯಗಳೊಂದಿಗೆ ಅನಂತರದ ಸ್ಥಾನದಲ್ಲಿದ್ದಾರೆ. ಈ ಮೂವರನ್ನು ಹೊರತುಪಡಿಸಿದರೆ 150 ಪಂದ್ಯಗಳ ಗಡಿ ದಾಟಿದ ಯಾವುದೇ ಆಟಗಾರ್ತಿಯರಿಲ್ಲ.

200 ಏಕದಿನ ಪಂದ್ಯಗಳನ್ನು ಪೂರೈಸಿದ ಮಿಥಾಲಿ ರಾಜ್‌ ಅವರನ್ನು ಬಿಸಿಸಿಐ ಅಭಿನಂದಿಸಿದೆ. ವಿವಿಎಸ್‌ ಲಕ್ಷ್ಮಣ್‌ ಸೇರಿದಂತೆ ಮಾಜಿ ಕ್ರಿಕೆಟಿಗರನೇಕರು ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next