ಜಿನೇವಾ: ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಗೆ ಮುಂಚಿತವಾಗಿ ಭಾರತಕ್ಕೆ ಮಹತ್ವದ ಯಶಸ್ಸು ಲಭಿಸಿದೆ.
ವಿಶ್ವಸಂಸ್ಥೆಯ ಮೂರು ಪ್ರಮುಖ ವಿಭಾಗಗಳಿಗೆ ನಡೆದ ಚುನಾವಣೆಯಲ್ಲಿ ಭಾರತ ಹ್ಯಾಟ್ರಿಕ್ ಗೆಲುವನ್ನು ಸಂಪಾದಿಸಿದೆ ಅದೂ ಸಹ ಚೀನಾವನ್ನು ಮಣಿಸಿ ಭಾರತ ಈ ಗೆಲುವನ್ನು ಸಾಧಿಸಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಬೆಳೆಯುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ವಿಶ್ವಸಂಸ್ಥೆಯ ‘ಮಹಿಳೆಯರ ಸ್ಥಾನಮಾನಕ್ಕಾಗಿರುವ ಆಯೋಗ’ (CWC) ಕ್ಕೆ ನಡೆದ ಚುನಾವಣೆಯಲ್ಲಿ ಭಾರತ ಚೀನಾವನ್ನು ಮಣಿಸಿ ನಾಲ್ಕು ವರ್ಷಗಳ ಅಧಿಕಾರವಧಿಯನ್ನು ತನ್ನದಾಗಿಸಿಕೊಂಡಿತು. ಇದು ವಿಶ್ವದ ರಾಷ್ಟ್ರಗಳ ಆರ್ಥಿಕ ಹಾಗೂ ಸಾಮಾಜಿಕ ಸಭೆಯ ಪ್ರತಿಷ್ಠಿತ ವಿಭಾಗಗಳಲ್ಲಿ ಇದೂ ಒಂದಾಗಿದೆ.
ಇದಲ್ಲದೇ ಭಾರತ ದತ್ತಿನಿಧಿ ವಿಭಾಗಕ್ಕೆ ಸಂಬಂಧಿಸಿದ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಅವುಗಳೆಂದರೆ, ಕಮಿಟಿ ಫಾರ್ ಫ್ರೋಗ್ರಾಮ್ ಆ್ಯಂಡ್ ಕೊ-ಆರ್ಡಿನೇಷನ್ ಮತ್ತು ದಿ ಕಮಿಷನ್ ಆನ್ ಪಾಪ್ಯುಲೇಷನ್ ಆ್ಯಂಡ್ ಡೆವಲಪ್ಮೆಂಟ್.
ಈ ಹುದ್ದೆಗಳ ಅಧಿಕಾರಾವಧಿಯು 2021ರಲ್ಲಿ ಪ್ರಾರಂಭಗೊಳ್ಳಲಿದೆ. ಭಾರತ ಈಗಾಗಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯನಾಗಿ ಎರಡು ವರ್ಷಗಳ ಸದಸ್ಯತ್ವವನ್ನು ಸಂಪಾದಿಸಿಕೊಂಡಿದೆ.