Advertisement
ಭಾರತೀಯ ತಂಡ ಏನು ಮಾಡಿತು ಎನ್ನುವುದಲ್ಲ, ಅದು ಹೇಗೆ ಗೆಲುವು ಸಾಧಿಸಿತು, ಎಷ್ಟು ಧೈರ್ಯದಿಂದ ಮುನ್ನುಗ್ಗಿತು ಎನ್ನುವುದು ಖುದ್ದು ಆಸ್ಟ್ರೇಲಿಯಾ ಸೇರಿದಂತೆ ಇಡೀ ಕ್ರಿಕೆಟ್ ಜಗತ್ತಿಗೇ ಪ್ರೇರಣೆಯಾಗಲಿದೆ. ಗಬ್ಟಾದಲ್ಲಿ ಭಾರತ ತೋರಿದ ಸಾಧನೆಯನ್ನು ಪುನರಾವರ್ತಿಸಲು ಪ್ರಪಂಚದ ಯಾವುದೇ ತಂಡವೂ ಧೈರ್ಯ ಮಾಡುವುದಿಲ್ಲ. ಒಟ್ಟಲ್ಲಿ ಟೆಸ್ಟ್ ಪಂದ್ಯಾವಳಿಯ ಚಿತ್ರದ ಮೇಲೆ ಭಾರತ ಟಿ20ಯ ಬಣ್ಣವನ್ನು ಬಳಿದುಬಿಟ್ಟಿತು.
Related Articles
Advertisement
ಭಾರತೀಯ ತರಬೇತುದಾರರ ತಂಡದ ಸಂದೇಶವಂತೂ ಸ್ಪಷ್ಟವಿತ್ತು. “”ಧೈರ್ಯವಾಗಿರಿ. ಆತ್ಮವಿಶ್ವಾಸದಿಂದಿರಿ. ನಿಶ್ಚಿಂತರಾಗಿರಿ. ಇಲ್ಲಿ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಎಲ್ಲರೂ ನೀವು ಸೋಲಲಿ ಎಂದು ನಿರೀಕ್ಷಿಸುತ್ತಿದ್ದಾರೆ. ನೀವು ಮನಸ್ಸು ಮಾಡಿದರೆ ಗೆಲ್ಲಲೂಬಹುದು” ಎಂಬ ಸಂದೇಶವದು. ಇದರ ಪರಿಣಾಮ 32 ವರ್ಷಗಳ ಅನಂತರ ಆಸ್ಟ್ರೇಲಿಯಾ ಗಬ್ಟಾ ಕ್ರೀಡಾಂಗಣದಲ್ಲಿ ಸೋತಿದೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಸೇರಿದಂತೆ ವಿಶ್ವ ಕ್ರಿಕೆಟ್‌ನ ಅನೇಕ ಸೂಪರ್ ಸ್ಟಾರ್‌ಗಳು ಆ ಸ್ಟೇಡಿಯಂನಲ್ಲಿ ಆಡಿದ್ದಾರೆ. ಆದರೆ ಕೇವಲ 3 ಟೆಸ್ಟ್‌ಗಳ ಅನುಭವವಿರುವ ಹೊಸ ಆಟಗಾರರ ಈಗಿನ ತಂಡದಂತೆ, ಹಿಂದೆ ಯಾರೂ ಸಹ ಇಂಥದ್ದೊಂದು ಮನೋಭಾವದಿಂದ ಮೈದಾನಕ್ಕೆ ಇಳಿದಿರಲೇ ಇಲ್ಲ.
ಭಾರತೀಯ ತಂಡದ ಈ ಗೆಲುವನ್ನು ಅಸಾಧಾರಣ, ಅಮೋಘ ಹಾಗೂ ನಂಬಲಸಾಧ್ಯ ಗೆಲುವೆಂದೇ ವರ್ಣಿಸಬೇಕಾಗುತ್ತದೆ. ಗಬ್ಟಾ ಕ್ರೀಡಾಂಗಣವು ಇನ್ನೂ 90 ವರ್ಷ ಟೆಸ್ಟ್ ಕ್ರಿಕೆಟ್‌ಗಳನ್ನು ಆಯೋಜಿಸಬಹುದು, ಆದರೆ ಇಂಥದ್ದೊಂದು ಗೆಲುವಿಗೆ ಅದು ಮತ್ತೆಂದೂ ಸಾಕ್ಷಿಯಾಗಲಾರದೆನಿಸುತ್ತದೆ.
ಒಟ್ಟಲ್ಲಿ ಈ ಸರಣಿಯು ಜಾಗತಿಕ ಕ್ರಿಕೆಟ್‌ನ ಶಕ್ತಿ ಸಮತೋಲನವನ್ನು ಬದಲಿಸಿಬಿಟ್ಟಿದೆ. ಇನ್ಮುಂದೆ ಆಸ್ಟ್ರೇಲಿಯಾ ಎದುರಾಳಿಗಳನ್ನು ಬೆದರಿಸುವ ತಂಡವಾಗಿ ಉಳಿದಿಲ್ಲ. ಭಾರತೀಯ ತಂಡದ ಕಠೊರ ಹಾಗೂ ಅಚಲ ಶಕ್ತಿಯು ಆಸ್ಟ್ರೇಲಿಯನ್ನರ ಕಣ್ಣಲ್ಲಿ ದುರುಗುಟ್ಟಿ ನೋಡಿ ಅವರನ್ನು ತೆಪ್ಪಗಾಗಿಸಿದೆ. 90 ವರ್ಷಗಳ ಗಬ್ಟಾ ಟೆಸ್ಟ್ ಇತಿಹಾಸದಲ್ಲಿ ಯಾವೊಂದು ತಂಡವೂ 235 ರನ್‌ಗಳನ್ನು ದಾಟಿ ಗೆಲುವು ಸಾಧಿಸಿರಲಿಲ್ಲ. ಆದರೆ ಭಾರತದ ಈ ಯುವಪಡೆಯು ಆಸ್ಟ್ರೇಲಿಯನ್ ಕ್ರಿಕೆಟ್ ಇತಿಹಾಸದಲ್ಲೇ ಬಲಿಷ್ಠ ಬೌಲಿಂಗ್ ಯೂನಿಟ್ ಎಂದು ಕರೆಸಿಕೊಳ್ಳುವ ಆಟಗಾರರ ವಿರುದ್ಧ 7 ವಿಕೆಟ್ ನಷ್ಟಕ್ಕೆ 329 ರನ್ ಬಾರಿಸಿ ಗೆಲುವು ಸಾಧಿಸಿತು.
ಯಾವುದೇ ಹಂತದಲ್ಲೂ ಭಾರತ “”ಪಂದ್ಯವನ್ನು ಡ್ರಾ ಮಾಡಿಕೊಂಡುಬಿಡೋಣ, ಆಗ ಟ್ರೋಫಿ ನಮ್ಮ ಬಳಿಯೇ ಉಳಿಯುತ್ತದೆ” ಎನ್ನಲಿಲ್ಲ. ಅವರಿಗೆ ಗೆಲುವೊಂದೇ ಆಯ್ಕೆಯಾಗಿ ಬದಲಾಗಿತ್ತು. ಬಹುತೇಕರಿಗೆ ಈ ಗೆಲುವಿನ ನಿಜ ವ್ಯಾಪ್ತಿ ಎಷ್ಟಿದೆ
ಎನ್ನುವುದು ಅರಿವಿರಲಿಕ್ಕಿಲ್ಲ. ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದೆಂದರೆ, ಕ್ಲೇ ಪಿಚ್‌ನಲ್ಲಿ ರಫೇಲ್ ನಡಾಲ್‌ನನ್ನು ಸೋಲಿಸುವುದಕ್ಕೆ ಸಮ! ಕ್ರಿಕೆಟ್ ಜಗತ್ತಿಗೆ ಭಾರತ ತಂಡದ ಈ ಪ್ರದರ್ಶನ ಅನೇಕ ರೀತಿಯಲ್ಲಿ ಪ್ರೇರಣೆ ನೀಡಲಿದೆ. ಆಸ್ಟ್ರೇಲಿಯಾ ತಂಡದ ಮೇಲೆ ತಿರುಗಿ ಬೀಳುವುದು, ಸವಾಲೆಸೆಯುವುದು, ಮಾತಿನ ಬದಲು ಚೆಂಡಿನ ಜತೆ ಆಟವಾಡುವುದೇ ಅದನ್ನು ಸೋಲಿಸುವ ಅತ್ಯುತ್ತಮ ಮಾರ್ಗ ಎನ್ನುವ ಪಾಠವನ್ನೂ ಈ ಪಂದ್ಯ ಕಲಿಸಿಕೊಟ್ಟಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಟೆಸ್ಟ್ ಕ್ರಿಕೆಟ್ ಎಂಬ ಹಿರಿಯಣ್ಣ, ಉಳಿದ ಎಲ್ಲ ಪಂದ್ಯಾವಳಿಗಳನ್ನೂ ಮರೆಮಾಚುವಷ್ಟು ದೊಡ್ಡದು ಎನ್ನುವ ಸತ್ಯವನ್ನು ಭಾರತೀಯ ತಂಡದ ಈ ಗೆಲುವು ರುಜುವಾತು ಮಾಡಿದೆ.
ರಾಬರ್ಟ್ ಕ್ರಾಡಾಕ್, ಮಾಜಿ ಕ್ರಿಕೆಟಿಗ, ಕ್ರೀಡಾ ವಿಶ್ಲೇಷಕ, ಇಂಗ್ಲೆಂಡ್