ಹೊಸದಿಲ್ಲಿ: ರಮಣ್‌ದೀಪ್ ಸಿಂಗ್ ಮತ್ತು ಚಿಂಗ್ಲೆನ್‌ಸನಾ ಸಿಂಗ್ ಅವರ ಅವಳಿ ಗೋಲಿನ ನೆರವಿನಿಂದ ಭಾರತೀಯ ಪುರುಷ ಹಾಕಿ ತಂಡವು ಆಸ್ಟ್ರಿಯಾ ವಿರುದ್ಧ ನಡೆದ ಐದನೇ ಮತ್ತು ಅಂತಿಮ ಪಂದ್ಯದಲ್ಲಿ 4-3 ಗೋಲುಗಳಿಂದ ರೋಚಕ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಭಾರತ ಯುರೋಪ್ ಪ್ರವಾಸವನ್ನು ಸ್ಮರಣೀಯವಾಗಿ ಅಂತ್ಯಗೊಳಿಸಿತು.
ಇನ್ನೇನು ಪಂದ್ಯ ಮುಗಿಯುವಷ್ಟರಲ್ಲಿ ಚಿಂಗ್ಲೆನ್‌ಸನಾ ಹೊಡೆದ ಗೋಲಿನಿಂದ ಭಾರತ ಜಯಭೇರಿ ಬಾರಿಸುವಂತಾಯಿತು. ಈ ಮೊದಲು 3-1 ಮುನ್ನಡೆ ಸಾಧಿಸಿ ಗೆಲುವಿನ ಕನಸಿನಲ್ಲಿದ್ದ ಭಾರತ ಕೊನೆ ಹಂತದಲ್ಲಿ ಆಸ್ಟ್ರಿಯಾಕ್ಕೆ ಎರಡು ಗೋಲು ಹೊಡೆಯುವ ಅವಕಾಶ ಕಲ್ಪಿಸಿಕೊಟ್ಟ ಕಾರಣ ಪಂದ್ಯ ತೀವ್ರ ರೋಚಕ ಕ್ಷಣ ಎದುರಿಸುವಂತಾಯಿತು.
ವಿಶ್ವದ ನಾಲ್ಕನೇ ರ್‍ಯಾಂಕಿನ ಹಾಲೆಂಡ್ ತಂಡ ವನ್ನು ಸತತ ಎರಡು ಪಂದ್ಯಗಳಲ್ಲಿ ಸೋಲಿಸಿ ಸಾಹಸ ಮೆರೆದ ಭಾರತ ಆಸ್ಟ್ರಿಯಾ ವಿರುದ್ಧವೂ ಜಯ ಸಾಧಿಸಿ ಗೆಲುವಿನ ಅಂತರವನ್ನು ಮೂರ ಕ್ಕೇರಿಸಿತು. ಮನ್‌ಪ್ರೀತ್ ಸಿಂಗ್ ನೇತೃತ್ವದ ಯುವ ಆಟಗಾರರನ್ನು ಒಳಗೊಂಡ ಭಾರತ ತಂಡ 3 ಗೆಲುವು ಮತ್ತು 2 ಸೋಲಿನೊಂದಿಗೆ ಐದು ಪಂದ್ಯಗಳ ಯುರೋಪ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿತು. ಭಾರತ ಸರಣಿಯ ಆರಂಭದ ಎರಡು ಪಂದ್ಯಗಳಲ್ಲಿ ಐದನೇ ರ್‍ಯಾಂಕಿನ ಬೆಲ್ಜಿಯಂಗೆ ಶರಣಾಗಿತ್ತು.
ಮೊದಲ ಕ್ವಾರ್ಟರ್ ಆಟದ ವೇಳೆ ಆಸ್ಟ್ರಿಯಾ ಮುನ್ನಡೆ ಸಾಧಿಸಿತ್ತು. ಆದರೆ ರಮಣ್‌ದೀಪ್ ಎರಡನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಹೊಡೆದು ಸಮಬಲ ಸಾಧಿಸಿ ದರು. ಪಂದ್ಯ ಸಾಗುತ್ತಿದ್ದಂತೆ ಮಿಡ್‌ಫಿàಲ್ಡ್‌ನಲ್ಲಿ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ ಭಾರತೀಯರು ಆಸ್ಟ್ರಿಯಾ ತಂಡದ ಮೇಲೆ ಒತ್ತಡ ಹೇರಿದರು. ಆದರೆ ಗೋಲು ಹೊಡೆ ಯಲು ಭಾರತೀಯರಿಂದ ಸಾಧ್ಯವಾಗಲಿಲ್ಲ. ಹಾಗಾಗಿ ಮೊದಲಾರ್ಧದ ಆಟ ಮುಗಿದಾಗ 1-1 ಸಮಬಲದಲ್ಲಿತ್ತು.
ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಆಕ್ರಮಣ ಕಾರಿಯಾಗಿ ಆಡಿತು. ರಮಣ್‌ದೀಪ್ ರಿವರ್ಸ್ ಹಿಟ್ ಮೂಲಕ ಇನ್ನೊಂದು ಗೋಲು ಹೊಡೆದ ಬಳಿಕ ಚಿಂಗ್ಲೆನ್‌ಸನಾ ಅವರು ವರುಣ್ ಕುಮಾರ್ ನೀಡಿದ ಪಾಸ್‌ನ ಲಾಭ ಪಡೆದು ಗೋಲು ದಾಖಲಿಸಿದರು. ಇದರಿಂದ ಭಾರತ 3-1 ಮುನ್ನಡೆ ಸಾಧಿಸುವಂತಾಯಿತು. ಪಂದ್ಯ ಮುಗಿಯಲು 10 ನಿಮಿಷಗಳಿರುವಾಗ ಆಸ್ಟ್ರಿಯಾ ಎರಡು ಗೋಲು ಹೊಡೆದು ಸಮಬಲ ಸ್ಥಾಪಿಸಿದಾಗ ಭಾರತ ಆಘಾತಕ್ಕೆ ಒಳಗಾಗಿತ್ತು. ಆದರೆ ಚಿಂಗ್ಲೆನ್‌ಸನಾ ಪಂದ್ಯ ಮುಗಿಯಲು 10 ಸೆಕೆಂಡ್‌ಗಳಿರುವಾಗ ಗೋಲು ಹೊಡೆದು ಭಾರತಕ್ಕೆ ಸ್ಮರಣೀಯ ಜಯ ಒದಗಿಸಿದರು.