ನವದೆಹಲಿ: ಕೋವಿಡ್ ವೈರಸ್ ಸಂಬಂಧಿತ ಲಾಕ್ ಡೌನ್ ಕಾರಣದಿಂದ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆ ಮೇ 7ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸರಕಾರ ಸೋಮವಾರ ಸ್ಪಷ್ಟಪಡಿಸಿದೆ.
ಹಂತ ಹಂತವಾಗಿ ಭಾರತೀಯರನ್ನು ಕರೆತರಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ವಿಮಾನ ಹಾಗೂ ನೌಕೆಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ಪಾವತಿ-ಆಧಾರದಲ್ಲಿ ಈ ಸೇವೆ ನೀಡಲಾಗುತ್ತದೆ.
ಕರೆತರುವ ಮುನ್ನ ಎಲ್ಲ ಪ್ರಯಾಣಿಕರನ್ನೂ ವೈದ್ಯಕೀಯ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ. ಕೋವಿಡ್ 19 ವೈರಸ್ ಸೋಂಕಿನ ಯಾವುದೇ ಲಕ್ಷಣ ಕಂಡುಬಾರದೇ ಇರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ವಿದೇಶದಲ್ಲಿ ಸಿಲುಕಿರುವಂಥ ಭಾರತೀಯರ ಪಟ್ಟಿಯನ್ನು ರಾಯಭಾರ ಕಚೇರಿಗಳು ಹಾಗೂ ಹೈಕಮಿಷನ್‌ಗಳು ಸಿದ್ಧಪಡಿಸುತ್ತಿವೆ. ಮೇ 7ರಿಂದ ಹಂತಹಂತವಾಗಿ ವಿಮಾನ ಹಾಗೂ ನೌಕೆಗಳ ಮೂಲಕ ಭಾರತೀಯರನ್ನು ಕರೆತರುತ್ತೇವೆ ಎಂದು ಸರಕಾರ ಹೇಳಿದೆ.
ಭಾರತಕ್ಕೆ ಬಂದು ತಲುಪುತ್ತಿದ್ದಂತೆ, ಎಲ್ಲ ಪ್ರಯಾಣಿಕರೂ ಆರೋಗ್ಯ ಸೇತು ಅಪ್ಲಿಕೇಷನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಅನಂತರ ಅವರನ್ನು ಮತ್ತೂಮ್ಮೆ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ.
ಬಳಿಕ ಆಯಾ ರಾಜ್ಯ ಸರಕಾರಗಳು ಆಸ್ಪತ್ರೆಯಲ್ಲಿ ಅಥವಾ ಬೇರೆಡೆ 14 ದಿನಗಳ ಕಾಲ ಅವರೆಲ್ಲರನ್ನೂ ಪಾವತಿ ಆಧಾರದಲ್ಲಿ ಕ್ವಾರಂಟೈನ್‌ಗೆ ಕಳುಹಿಸಬೇಕು. 14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರನ್ನು ಸೋಂಕಿನ ಪರೀಕ್ಷೆಗೆ ಒಳಪಡಿಸಬೇಕು.
ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ ಎಂದೂ ಕೇಂದ್ರ ಸರಕಾರ ಹೇಳಿದೆ.