ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಸಾಮಾನ್ಯ ಸಭೆ ಇಂದು ಮುಂಬೈನಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಲ್ಲದೆ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಮಾಡಲಾಗಿದೆ.
ಮುಂದಿನ ಏಷ್ಯಾ ಕಪ್ ಕೂಟವು ಪಾಕಿಸ್ಥಾನದಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್ ಗೆ ಮೊದಲ ಏಕದಿನ ಮಾದರಿಯಲ್ಲೇ ಏಷ್ಯಾ ಕಪ್ ನಡೆಯಲಿದೆ. ಸಾಂಪ್ರದಾಯಿ ಎದುರಾಳಿ ದೇಶದಲ್ಲಿ ಆಯೋಜಿಸುವ ಕೂಟಕ್ಕೆ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ಈ ಮೊದಲು ಒಲವು ತೋರಿತ್ತು. ಕೇಂದ್ರ ಸರ್ಕಾರ ಅನುಮತಿಸಿದರೆ ತಂಡ ಕಳುಹಿಸಲಾಗುವುದು ಎಂದಿತ್ತು. ಆದರೆ ಇಂದಿನ ಸಭೆಯಲ್ಲಿ ಪಾಲ್ಗೊಳ್ಳದೆ ಇರಲು ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ:ದೀಪಾವಳಿ: ಹಲಾಲ್ ಉತ್ಪನ್ನ ಬಹಿಷ್ಕರಿಸಲು ಹಿಂದೂ ಸಂಘಟನೆಗಳ ಕರೆ; ಶಿವಮೊಗ್ಗದಲ್ಲಿ ಪ್ರತಿಭಟನೆ
ಭಾರತ ತಂಡವು ಏಷ್ಯಾ ಕಪ್ ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಅಲ್ಲದೆ ಪಂದ್ಯಾವಳಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಲಾಗಿದೆ.
“ಏಷ್ಯಾ ಕಪ್‌ಗೆ ತಟಸ್ಥ ಸ್ಥಳವು ಹೊಸದೇನಲ್ಲ. ನಾವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಾವು ತಟಸ್ಥ ಸ್ಥಳದಲ್ಲಿ ಆಡುತ್ತೇವೆ” ಎಂದು ಬಿಸಿಸಿಐ ಕಾರ್ಯದರ್ಶಿ ಮತ್ತು ಎಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ.
ಇಂದಿನ ಬಿಸಿಸಿಐ ಸಭೆಯಲ್ಲಿ ಐಸಿಸಿ ಚುನಾವಣೆಯ ಬಗ್ಗೆ ಚರ್ಚೆ ನಡೆದಿಲ್ಲ ಎನ್ನಲಾಗಿದೆ. ಐಸಿಸಿಗೆ ಬಿಸಿಸಿಐ ಪ್ರತಿನಿಧಿಯ ವಿಷಯವನ್ನು ಸಹ ಪದಾಧಿಕಾರಿಗಳಿಗೆ ಬಿಡಲಾಗಿದೆ. ಕಾರ್ಯದರ್ಶಿ ಜಯ್ ಶಾ ಇದಕ್ಕೆ ಮೊದಲ ಆಯ್ಕೆಯಾಗುವ ಸಾಧ್ಯತೆ ಇದೆ.