Advertisement

RCEPಗೆ ನೋ ಎಂದ ಪ್ರಧಾನಿ ಮೋದಿ ತನ್ನ ಭಾಷಣದಲ್ಲಿ ಹೇಳಿದ್ದೇನು?

10:01 AM Nov 05, 2019 | Hari Prasad |

ನವದೆಹಲಿ: ದೇಶಾದ್ಯಂತ ಕೋಟ್ಯಂತರ ರೈತರ, ಸಣ್ಣ ವ್ಯಾಪಾರಿಗಳ ಮತ್ತು ಕೃಷಿಕರ ಆತಂಕಕ್ಕೆ ಕಾರಣವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP) ಒಪ್ಪಂದಕ್ಕೆ ಸಹಿ ಹಾಕದೇ ಇರಲು ನಿರ್ಧರಿಸುವ ಮೂಲಕ ಭಾರತ ಜಗತ್ತೇ ಕಾತರದಿಂದ ಎದುರು ನೋಡುತ್ತಿದ್ದ ಬಹುದೊಡ್ಡ ಆರ್ಥಿಕ ಪಾಲುದಾರಿಕೆ ಕೂಟದಿಂದ ಸದ್ಯಕ್ಕೆ ದೂರ ಉಳಿದಂತಾಗಿದೆ. ಆಸಿಯಾನ್ ಒಕ್ಕೂಟದ 10 ದೇಶಗಳು ಮತ್ತು ಇವುಗಳ ಮುಕ್ತ ವ್ಯಾಪಾರ ಒಪ್ಪಂದದ ಪಾಲುದಾರ ರಾಷ್ಟ್ರಗಳಾಗಿರುವ ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ದೇಶಗಳ ನಡುವೆ ಸರಕುಗಳ ಮುಕ್ತ ವ್ಯವಹಾರಕ್ಕೆ ಈ ಒಪ್ಪಂದ ಅನುವು ಮಾಡಿಕೊಡುತ್ತಿತ್ತು.

Advertisement

ಇದರಿಂದ ಭಾರತದ ಹೈನುಗಾರಿಕೆ ಕ್ಷೇತ್ರ ಮತ್ತು ಸರಕು ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿತ್ತು. ಹಾಗಾಗಿ ಈ ಒಕ್ಕೂಟದ ಪಾಲುದಾರನಾಗದಂತೆ ಮತ್ತು ಈ ಆರ್.ಸಿ.ಇ.ಪಿ. ಒಪ್ಪಂದಕ್ಕೆ ಸಹಿ ಹಾಕದಂತೆ ಕೇಂದ್ರ ಸರಕಾರದ ಮೇಲೆ ದೇಶಾದ್ಯಂತ ಭಾರೀ ಒತ್ತಡ ಉಂಟಾಗಿತ್ತು.

ಕೊನೆಗೂ ದೇಶವಾಸಿಗಳ ಮನವಿಗೆ ಬೆಲೆ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಆರ್.ಸಿ.ಇ.ಪಿ. ಶೃಂಗದಲ್ಲಿ ಭಾರತದ ನಿಲುವನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಈ ಒಪ್ಪಂದದ ಕುರಿತಾಗಿ ಭಾರತ ಎತ್ತಿದ್ದ ಕೆಲ ಸಂಶಯಗಳಿಗೆ ಸಮಾಧಾನ ನೀಡುವಲ್ಲಿ ಇದು ವಿಫಲವಾಗಿರುವ ಕಾರಣ ಭಾರತ ಸರಕಾರ ಈ ಒಪ್ಪಂದಕ್ಕೆ ಸಹಿಹಾಕುತ್ತಿಲ್ಲ ಎಂದು ಪ್ರಧಾನಿ ಮೋದಿ ವಿಶ್ವ ನಾಯಕರು ಸೇರಿದ್ದ ಸಭೆಯಲ್ಲಿ ತಾವು ಮಾಡಿದ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

‘RCEP ಒಪ್ಪಂದದ ಸದ್ಯದ ರೂಪುರೇಶೆಯು ಅದರ ಮೂಲ ಪ್ರಸ್ತಾವನೆಯಲ್ಲಿದ್ದ ಅಂಶಗಳನ್ನು ಸಂಪೂರ್ಣವಾಗಿ ಒಳಗೊಳ್ಳುವಲ್ಲಿ ವಿಫಲವಾಗಿದೆ. ಮತ್ತು ಭಾರತ ಎತ್ತಿದ್ದ ಕೆಲವೊಂದು ಆಕ್ಷೇಪಗಳು ಮತ್ತು ಸಂದೇಹಗಳಿಗೆ ಸಮಾಧಾನಕರ ಸಮಜಾಯಿಸಿ ನೀಡುವಲ್ಲಿಯೂ ಇಲ್ಲಿ ಮಂಡಿಸಲಾದ RCEP ಒಪ್ಪಂದದ ಪ್ರತಿ ವಿಫಲವಾಗಿದೆ’ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಮೂಲ ಆರ್.ಸಿ.ಇ.ಪಿ. ಒಪ್ಪಂದ ಕರಡಿನಲ್ಲಿ 16 ದೇಶಗಳ ಸಹಭಾಗಿತ್ವದೊಂದಿಗೆ ವಿಶ್ವದ ಬೃಹತ್ ಮುಕ್ತ ವ್ಯಾಪಾರ ಪ್ರದೇಶವನ್ನು ಸೃಷ್ಟಿ ಮಾಡುವ ಉದ್ದೇಶ ಒಳಗೊಂಡಿತ್ತು. ಇದರಿಂದಾಗಿ ವಿಶ್ವದ ಅರ್ಧದಷ್ಟು ಅಂದರೆ ಸುಮಾರು 3.6 ಬಿಲಿಯನ್ ಜನರು ಈ ಮುಕ್ತ ವ್ಯಾಪಾರದ ಫಲಾನುಭವಿಗಳಾಗುವ ನಿರೀಕ್ಷೆ ಇದರಲ್ಲಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಕೆಲವೊಂದು ಮೂಲಭೂತ ಪ್ರಶ್ನೆಗಳನ್ನು ಎತ್ತಿತ್ತು.

Advertisement

ಇದರ ಹಿಂದೆ ತನ್ನ ದೇಶೀಯ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಮತ್ತು ತನ್ನ ಕೆಲವೊಂದು ನಿರ್ಧಿಷ್ಟ ಉತ್ಪನ್ನಗಳ ಹಿತರಕ್ಷಣೆ ಮಾಡುವ ಉದ್ದೇಶದಿಂದ ಭಾರತವು ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲವು ಸಂಶಯಗಳನ್ನು ವ್ಯಕ್ತಪಡಿಸಿತ್ತು. ಇದರಲ್ಲಿ ಚೀನಾ ದೇಶದ ಕಳಪೆ ಗುಣಮಟ್ಟದ ಕೃಷಿ ಮತ್ತು ಉದ್ಯಮ ಉತ್ಪನ್ನಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಆತಂಕವನ್ನು ಭಾರತ ವ್ಯಕ್ತಪಡಿಸಿತ್ತು.

‘ಒಂದು ನಿರ್ಧಿಷ್ಟ ಕಾನೂನಿಗೆ ಬದ್ಧವಾಗಿರುವ ಪ್ರಾದೇಶಿಕ ಒಕ್ಕೂಟ ಮತ್ತು ಮುಕ್ತ ವ್ಯಾಪಾರ ವಹಿವಾಟನ್ನು ಭಾರತವು ಯಾವತ್ತೂ ಬೆಂಬಲಿಸುತ್ತದೆ. ಆರ್.ಸಿ.ಇ.ಪಿ.ಯ ಪ್ರಸ್ತಾವನೆಯಾದ ದಿನದಿಂದಲೇ ಭಾರತ ಈ ವಿಚಾರದಲ್ಲಿ ಸಕ್ರಿಯವಾಗಿ, ಕ್ರಿಯಾಶೀಲವಾಗಿ ಮತ್ತು ಅರ್ಥಪೂರ್ಣವಾಗಿ ತನ್ನ ಭಾಗೀದಾರಿಕೆಯನ್ನು ಪ್ರದರ್ಶಿಸುತ್ತಾ ಬಂದಿದೆ. ಮತ್ತು ಈ ಒಪ್ಪಂದದ ಮೂಲ ಆಶಯವಾಗಿರುವ ಕೊಡು-ಕೊಳ್ಳು ವ್ಯವಹಾರಕ್ಕೆ ಭಾರತ ಈಗಲೂ ಬದ್ಧವಾಗಿದೆ’ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

‘ಆರ್.ಸಿ.ಇ.ಪಿ. ಒಪ್ಪಂದ ಪ್ರಸ್ತಾವನೆಗೊಂಡು ಕಳೆದ ಏಳು ವರ್ಷಗಳಿಂದ ಮಾತುಕತೆಗಳು ಸಾಗುತ್ತಿರುವಂತೆ ಜಗತ್ತಿನ ಆರ್ಥಿಕತೆ ಸೇರಿದಂತೆ ವ್ಯಾಪಾರ ಸನ್ನಿವೇಶಗಳು ಬದಲಾವಣೆಗೊಂಡಿವೆ. ಆದರೆ ಈ ಒಪ್ಪಂದ ಇದೆಲ್ಲಾ ಬದಲಾವಣೆಗಳನ್ನು ಗಮನಿಸುವಲ್ಲಿ ವಿಫಲವಾಗಿದೆ ಎಂದು ಆರ್.ಸಿ.ಇ.ಪಿ.ಗೆ ಭಾರತ ಸಹಿ ಹಾಕದಿರುವುದಕ್ಕೆ ಪ್ರಧಾನಿ ಮೋದಿ ಕೊಟ್ಟ ಸಮರ್ಥನೆಯಾಗಿತ್ತು.

‘2012ರಲ್ಲಿ ಆರ್.ಸಿ.ಎ.ಪಿ. ಒಪ್ಪಂದದ ಪ್ರಸ್ತಾವನೆಯಾದಾಗ ಆಸಿಯಾನ್ ಸದಸ್ಯ ರಾಷ್ಟ್ರಗಳು ಹಾಗೂ ಇವುಗಳ ಮುಕ್ತ ವ್ಯಾಪಾರ ಒಪ್ಪಂದ ರಾಷ್ಟ್ರಗಳ ನಡುವೆ ಆಧುನಿಕ, ಸಮಗ್ರ, ಉನ್ನತ ಗುಣಮಟ್ಟದ ಮತ್ತು ಪ್ರಾಕೃತಿಕವಾಗಿ ಲಾಭದಾಯಕವಾಗಿರುವ ಆರ್ಥಿಕ ಸಹಭಾಗಿತ್ವದ ಮೂಲ ಉದ್ದೇಶವನ್ನು ಇದು ಹೊಂದಿತ್ತು. ಆದರೆ ನನ್ನ ದೇಶದ ಜನರ ಹಿತಾಸಕ್ತಿಯೊಂದಿಗೆ ಈ ಒಪ್ಪಂದವನ್ನು ತುಲನೆ ಮಾಡಿದಾಗ ನನಗೆ ಯಾವುದೇ ಹಂತದಲ್ಲೂ ಧನಾತ್ಮಕ ಉತ್ತರ ಸಿಗಲೇ ಇಲ್ಲ. ಹಾಗಾಗಿ ಮಹಾತ್ಮಾ ಗಾಂಧೀಜಿಯ ಮೂಲ ಉದ್ದೇಶವಾಗಲೀ ಅಥವಾ ನನ್ನ ಆತ್ಮಸಾಕ್ಷಿಯಾಗಲಿ ಆರ್.ಸಿ.ಇ.ಪಿ.ಯಲ್ಲಿ ಭಾರತವನ್ನು ಭಾಗೀದಾರನನ್ನಾಗಿಸಲು ಒಪ್ಪುತ್ತಿಲ್ಲ.’ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಅವರು ಈ ಒಪ್ಪಂದದಲ್ಲಿ ಭಾರತ ಭಾಗಿಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿದರು.

ಭಾರತವನ್ನು ಹೊರತುಪಡಿಸಿ ಉಳಿದ 15 ಆರ್.ಸಿ.ಇ.ಪಿ. ಸದಸ್ಯ ರಾಷ್ಟ್ರಗಳು ಈ ಒಪ್ಪಂದವನ್ನು ಅಂತಿಮಗೊಳಿಸಲು ತಮ್ಮ ಆಸಕ್ತಿಯನ್ನು ತೋರಿಸಿವೆ. ಭಾರತ ಎತ್ತಿದ್ದ ವಿಚಾರಗಳನ್ನು ಬಗೆಹರಿಸುವಲ್ಲಿ 16 ಆರ್.ಸಿ.ಇ.ಪಿ. ಸದಸ್ಯ ರಾಷ್ಟ್ರಗಳ ವಾಣಿಜ್ಯ ಸಚಿವರು ವಿಫಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next