ನವದೆಹಲಿ:ದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಯ 12ನೇ ವರ್ಷದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 2008ರಲ್ಲಿ ಮುಂಬೈ ಮೇಲೆ ನಡೆದ ಉಗ್ರ ದಾಳಿಯ ನೋವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅಲ್ಲದೇ ಭಾರತ ಭಯೋತ್ಪಾದಕ ಕೃತ್ಯವನ್ನು ಹೊಸ ನೀತಿಯ ಮೂಲಕ ಹುಟ್ಟಡಗಿಸಲು ಮುಂದಾಗಿರುವುದಾಗಿ ತಿಳಿಸಿದರು.
ಗುರುವಾರ(ನವೆಂಬರ್ 26, 2020) ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪೊಲೀಸರು, ಪ್ರಾಣ ಕಳೆದುಕೊಂಡಿದ್ದ ಜನರನ್ನು ಸ್ಮರಿಸಿ ಗೌರವ ಸಲ್ಲಿಸಿದರು.
2008ರಲ್ಲಿ ಪಾಕಿಸ್ತಾನ ಮುಂಬೈ ನೆಲದಲ್ಲಿ ನಡೆಸಿದ ಭಯೋತ್ಪಾದಕ ದಾಳಿ ಕೃತ್ಯದಲ್ಲಿ ಹಲವಾರು ಭಾರತೀಯರು ಸಾವನ್ನಪ್ಪಿದ್ದರು. ವಿವಿಧ ದೇಶಗಳ ಪ್ರಜೆಗಳು ಕೂಡಾ ಪ್ರಾಣ ಕಳೆದುಕೊಂಡಿದ್ದರು. ನಾನು ಈ ಸಂದರ್ಭದಲ್ಲಿ ಅವರೆಲ್ಲರಿಗೂ ಗೌರವ ಸಲ್ಲಿಸುವುದಾಗಿ ಪ್ರಧಾನಿ ಹೇಳಿದರು.
2008ರ ನವೆಂಬರ್ 26ರಂದು ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ ಮುಂಬೈ ನಗರಿಯಲ್ಲಿ ನಾಲ್ಕು ದಿನಗಳ ಕಾಲ 12 ಕಡೆ ಶೂಟೌಟ್ ಮತ್ತು ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಆರು ಅಮೆರಿಕನ್ ಪ್ರಜೆಗಳು, 9 ಉಗ್ರರು ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು.
ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಹೋಟೆಲ್, ದ ಒಬೆರಾಯ್ ಹೋಟೆಲ್, ದ ಲಿಯೋಪೋಲ್ಡ್ ಕೆಫೆ, ನಾರಿಮನ್ ಹೌಸ್ ಮತ್ತು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು.