Advertisement
ಅಂಕಿಗಳ ಆಧಾರದಲ್ಲಿ ಬ್ಯಾಟಿಂಗ್ ಪ್ರಬಲ!ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಅವರಿರುವ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಮೇಲ್ನೋಟಕ್ಕಂತೂ ಈ ಬ್ಯಾಟಿಂಗ್ ಪಡೆಯನ್ನು ಭೇದಿಸುವುದು ಜಗತ್ತಿನ ಯಾವುದೇ ಬೌಲಿಂಗ್ ಬಳಗಕ್ಕೂ ಸವಾಲಿನ ಕೆಲಸವಾಗಿದೆ. ಹಾಗಂತ ದೊಡ್ಡದೊಡ್ಡ ಹೆಸರುಗಳಿದ್ದ ತತ್‌ಕ್ಷಣ ಕೆಲಸ ಸರಾಗವಾಗುತ್ತದೆ, ಎಲ್ಲವೂ ತಂತಾನೆ ನಡೆದುಬಿಡುತ್ತದೆ ಎನ್ನಲು ಸಾಧ್ಯವಿಲ್ಲ. ಅವರ ವರ್ತಮಾನದ ಸ್ಥಿತಿಯನ್ನು ಗಮನಿಸಬೇಕಾಗುತ್ತದೆ. ಇಲ್ಲಿನ ಅಂಕಿಗಳು ಬೇರೆಯ ಸಂಗತಿಯನ್ನೇ ಹೇಳುತ್ತವೆ.
ವೇಗಿ ಮೊಹಮ್ಮದ್ ಸಿರಾಜ್, ಲೆಗ್‌ಸ್ಪಿನ್ನರ್ ಕುಲದೀಪ್ ಯಾದವ್ ಏಷ್ಯಾ ಕಪ್‌ನಲ್ಲಿ ಮಿಂಚಿದ್ದಾರೆ. ಹೀಗಾಗಿ ಈ ಇಬ್ಬರು ಬುಮ್ರಾ ಜತೆ ಬೌಲಿಂಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅನುಭವಿ ವೇಗಿ ಮೊಹಮ್ಮದ್ ಶಮಿ, ಇನ್ನೊಬ್ಬ ವೇಗಿ ಶಾರ್ದೂಲ್ ಠಾಕೂರ್ ಕಣಕ್ಕಿಳಿಯುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಂಡದ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಇತರೆ ಆಟಗಾರರ ಲಯ, ಪಿಚ್ ಪರಿಸ್ಥಿತಿ, ಗಾಯಾಳುಗಳ ಸ್ಥಿತಿಯನ್ನೆಲ್ಲ ಗಮನಿಸಿ ನಿರ್ಧರಿಸಲಾಗುತ್ತದೆ. ಹೀಗೆ ನೋಡಿದರೆ ಲಯದಲ್ಲಿರುವ ಸಿರಾಜ್, ಕುಲದೀಪ್ ಆಯ್ಕೆ ಖಚಿತ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಕುಲದೀಪ್ ತಂಡದ ಪ್ರಮುಖ ಅಸ್ತ್ರ. ಪಂದ್ಯದ ಮಧ್ಯಾವಧಿಯಲ್ಲಿ ಇವರ ಪಾತ್ರ ನಿರ್ಣಾಯಕವಾಗುತ್ತದೆ. ರೋಹಿತ್, ಕೊಹ್ಲಿ, ರಾಹುಲ್ ಅಸ್ಥಿರ ಆಟ
ಪ್ರಸ್ತುತ ಏಕದಿನ ವಿಶ್ವ ರ್‍ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮ 11, ವಿರಾಟ್ ಕೊಹ್ಲಿ 9ನೇ ರ್‍ಯಾಂಕಿಂಗ್‌ನಲ್ಲಿದ್ದಾರೆ. ಕೆ.ಎಲ್.ರಾಹುಲ್ 33ನೇ ಸ್ಥಾನದಲ್ಲಿದ್ದಾರೆ. 2019ರ ವಿಶ್ವಕಪ್ ಹೊತ್ತಿಗೆ ಇವರೆಲ್ಲ ಅಗ್ರಸ್ಥಾನದಲ್ಲಿದ್ದರು. ಇದು ಅಂದಿಗೂ, ಇಂದಿಗೂ ಬ್ಯಾಟಿಂಗ್‌ನಲ್ಲಿ ಆಗಿರುವ ವ್ಯತ್ಯಾಸವನ್ನು ಸೂಚಿಸುತ್ತದೆ. ರೋಹಿತ್, ಕೊಹ್ಲಿ ಈ ಹಿಂದಿನಂತೆ ಸ್ಥಿರವಾದ ಬ್ಯಾಟಿಂಗ್ ಮಾಡುತ್ತಿಲ್ಲ. ಇತ್ತೀಚೆಗೆ ನಡೆದ ಏಷ್ಯಾಕಪ್, ಆಸೀಸ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಈ ಇಬ್ಬರೂ ಕೆಲವು ಉತ್ತಮ ಇನಿಂಗ್ಸ್ ಆಡಿದ್ದಾರೆ. ಹಾಗಂತ ಎಲ್ಲ ಪಂದ್ಯಗಳಲ್ಲೂ ಅವರಿಂದ ಅದು ಸಾಧ್ಯವಾಗಿಲ್ಲ. ಪ್ರಸ್ತುತ ವಿಶ್ವಕಪ್‌ನಲ್ಲೂ ಇವರ ಸ್ಥಿರ/ಅಸ್ಥಿರವಾದ ಆಟ ತಂಡದ ಪರಿಸ್ಥಿತಿಯನ್ನೇ ಬದಲಿಸುತ್ತದೆ. ಏಷ್ಯಾಕಪ್‌ನಲ್ಲಿ ರೋಹಿತ್ 194, ಕೊಹ್ಲಿ 129 ರನ್ ಗಳಿಸಿದ್ದಾರೆ. ರಾಹುಲ್ ಗಾಯದಿಂದ ಚೇತರಿಸಿಕೊಂಡ ಮೇಲೆ ಉತ್ತಮ ಎನ್ನುವಂತೆ ಕಾಣಿಸುತ್ತಿದ್ದಾರೆ. ಖಚಿತವಾಗಿ ಹೀಗೆಯೇ ಆಡುತ್ತಾರೆ ಎನ್ನುವ ಸ್ಥಿತಿಯಲ್ಲಿ ಮೂವರೂ ಇಲ್ಲ.
Related Articles
Advertisement
ಬಲಿಷ್ಠ ಆಲ್ರೌಂಡರ್ಗಳುಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್.ಅಶ್ವಿನ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬರುತ್ತಾರೆ. ಈ ಪೈಕಿ ಹಾರ್ದಿಕ್, ಜಡೇಜ ಪಕ್ಕಾ ಆಲ್‌ರೌಂಡರ್‌ಗಳು. ಆರ್.ಅಶ್ವಿನ್ ಬ್ಯಾಟಿಂಗ್ ಮಾಡಬಲ್ಲರಾದರೂ ಅವರನ್ನು ಆಯ್ಕೆ ಮಾಡಿದ್ದು ಬೌಲಿಂಗ್‌ಗಾಗಿಯೇ! ಅದೂ ಗಾಯಾಳು ಅಕ್ಷರ್ ಪಟೇಲ್ ಜಾಗದಲ್ಲಿ. ಅವರು ಹತ್ತಿರಹತ್ತಿರ 2 ವರ್ಷದ ಅನಂತರ ಏಕದಿನವಾಡಿದ್ದಾರೆ. ಈ ಮೂವರೂ ಈ ಹಿಂದೆ ಸಾಕಷ್ಟು ಬಾರಿ ಅನಿವಾರ್ಯ ಸಂದರ್ಭಗಳಲ್ಲಿ ತಂಡದ ಕೈಹಿಡಿದ್ದಾರೆ. ಈಗ ತಮ್ಮ ಆಲ್‌ರೌಂಡ್ ಸಾಮರ್ಥ್ಯವನ್ನು ಪೂರ್ಣವಾಗಿ ಹೊರ ತೆಗೆಯಬೇಕಾ ಗಿದೆ. ಇವರ ಆಟ ನಿರ್ಣಾಯಕವಾಗಿದೆ. ಇವರು ಬ್ಯಾಟರ್, ಬೌಲರ್‌ಗಳ ಮೇಲಿನ ಹೊರೆಯನ್ನು ತಗ್ಗಿಸಲಿದ್ದಾರೆ. ಬುಮ್ರಾ ನಿರ್ಣಾಯಕ, ಆದರೆ…
ತಮ್ಮ ವಿಶಿಷ್ಟ ಬೌಲಿಂಗ್ ಶೈಲಿಯಿಂದಾಗಿ ಜಸ್‌ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್‌ನ ಪ್ರಮುಖ ವೇಗಿಯಾಗಿದ್ದಾರೆ. ಆದರೆ ಅದೇ ವಿಶಿಷ್ಟ ಶೈಲಿಯಿಂದಾಗಿ ಸೊಂಟದ ನೋವಿಗೆ ಸಿಲುಕಿ ಹಲವು ತಿಂಗಳು ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ವಿಶ್ವಕಪ್ ಹೊತ್ತಿಗೆ ಏಷ್ಯಾಕಪ್, ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದಾರೆ. ಇಲ್ಲಿ ಅವರಿಗೆ ಅಭ್ಯಾಸ ಸಿಕ್ಕಿದೆ. ಆದರೆ ವಿಕೆಟ್‌ಗಳು ಸಿಕ್ಕಿಲ್ಲ. ಇವರು ತಂಡದ ಪ್ರಮುಖ ಬೌಲಿಂಗ್ ಅಸ್ತ್ರ. ನಿರ್ಣಾಯಕ ಹಂತದಲ್ಲಿ ಇವರ ತೀಕ್ಷ್ಣ ಯಾರ್ಕರ್‌ಗಳು ಎದುರಾಳಿಗಳನ್ನು ಕಂಗಾಲಾಗಿಸುತ್ತವೆ. ಪ್ರಸ್ತುತ ಭಾರತಕ್ಕೆ ಇಂತಹ ಪ್ರದರ್ಶನ ಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಬಂದೇ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಭಾರತದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಿರುವುದೇ ಇದಕ್ಕೆ ಕಾರಣ. ಗೆಲ್ಲಲು ಅದೃಷ್ಟವೂ ಬೇಕು!
ವಿಶ್ವಕಪ್ ಸಿಂಹಾಸನ ಏರಲು ಎಲ್ಲ ತಂಡಗಳು ಹಾತೊರೆಯುತ್ತವೆ. ಜಾಗತಿಕ ಕ್ರಿಕೆಟಿನ ಈ ಪರಮೋಚ್ಚ ಗೌರವ ಸಂಪಾದಿಸುವುದೇ ಕ್ರಿಕೆಟ್ ತಂಡಗಳ ಹೆಗ್ಗುರಿ ಹಾಗೂ ಕನಸು. ಒಮ್ಮೆ ಈ ಕನಸು ಸಾಕಾರಗೊಳ್ಳದೇ ಹೋದರೆ ಮತ್ತೆ 4 ವರ್ಷಗಳ ಸುದೀರ್ಘ ಕಾಯುವಿಕೆ ಅನಿವಾರ್ಯ. ಹೀಗಾಗಿ ಪ್ರತಿಯೊಂದು ತಂಡವೂ ಈ ವಿಶ್ವ ಸಮರದ ವೇಳೆ ಪಕ್ವಗೊಂಡಿರುತ್ತದೆ; ಹುರಿಗೊಂಡಿರುತ್ತವೆ. ಆದರೆ ವಿಶ್ವಕಪ್ ಗೆಲುವಿಗೆ ಸಾಧನೆಯೊಂದೇ ಮಾನದಂಡವಲ್ಲ, ಇಲ್ಲಿ ಅದೃಷ್ಟದ ಪಾತ್ರವೂ ಮುಖ್ಯ. ಇಡೀ ತಂಡಕ್ಕೆ ಅಲ್ಲದೇ ಹೋದರೂ ನಾಯಕನಾಗಿದ್ದವನಿಗೆ ಲಕ್ ಇರಲೇಬೇಕು.
ಒಂದು ಕಾಲದ ದೈತ್ಯ ತಂಡವಾದ ವೆಸ್ಟ್ ಇಂಡೀಸ್ ಇಲ್ಲದ ವಿಶ್ವಕಪ್ ಪಂದ್ಯಾವಳಿ ಇದೆಂಬುದನ್ನು ನಂಬಲಾಗುತ್ತಿಲ್ಲ. ಇದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಇದಕ್ಕೇನು ಕಾರಣ? ಐಸಿಸಿಯ ಅಸ್ಥಿರ ಮಾದರಿಯೇ? ಅಥವಾ ಕೆರಿಬಿಯನ್ ಕ್ರಿಕೆಟಿನ ಅಧಃಪತನವೇ? ಎರಡೂ ಹೌದು. 1975ರಲ್ಲಿ ಆರಂಭಗೊಂಡ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇಂದಿಗೂ ನಿರ್ದಿಷ್ಟ ಮಾದರಿ ಹೊಂದಿಲ್ಲದಿರುವುದು ವಿಪರ್ಯಾಸ. ಹಾಗೆಯೇ ಇಲ್ಲಿ ಎಷ್ಟು ತಂಡಗಳನ್ನು ಆಡಿಸಬೇಕೆಂಬ ಸ್ಪಷ್ಟತೆ ಇಲ್ಲದಿರುವುದೂ ಇನ್ನೊಂದು ಎಡವಟ್ಟು. ಪದೇಪದೆ ಮಾದರಿಯನ್ನು ಬದಲಾಯಿಸಲಾಯಿತು. ಕೆಲವು ಕೂಟಗಳಿಂದ ರ್‍ಯಾಂಕಿಂಗ್ ಕಳಪೆಯಿರುವ ತಂಡಗಳು ಅರ್ಹತಾಸುತ್ತಿನಲ್ಲಿ ಆಡಬೇಕಾದ ನಿಯಮ ಮಾಡಲಾಗಿದೆ. ಇಲ್ಲಿ ವಿಂಡೀಸ್ ವಿಫಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತೀವ್ರ ಆರ್ಥಿಕ ದುಸ್ಥಿತಿಗೆ ತಲುಪಿದೆ. ಹಾಗಾಗಿ ಅಲ್ಲಿನ ಕ್ರಿಕೆಟಿಗರು ದೇಶದ ಪರವಾಗಿ ಆಡುವುದನ್ನು ನಿಲ್ಲಿಸಿದ್ದಾರೆ. ಬದಲಿಗೆ ವಿಶ್ವದ ಟಿ20 ಲೀಗ್‌ಗಳಲ್ಲಿ ಆಡುತ್ತಾರೆ. ಇವೆಲ್ಲದರ ಪರಿಣಾಮ ಅಲ್ಲೀಗ ಪ್ರೇಕ್ಷಕರ ಅಭಿಮಾನವೂ ಕಡಿಮೆಯಾಗಿದೆ. ಗಿಲ್ ಅತ್ಯುತ್ತಮ, ಅಯ್ಯರ್, ಸೂರ್ಯ, ಕಿಶನ್ ಅನುಮಾನ
ತಂಡದಲ್ಲಿರುವ ಶುಭಮನ್ ಗಿಲ್ ಏಕದಿನ ರ್‍ಯಾಂಕಿಂಗ್‌ನಲ್ಲಿ ವಿಶ್ವ ನಂ.2 ಆಟಗಾರ. ಏಷ್ಯಾ ಕಪ್‌ನಲ್ಲಿ 302, ಆಸೀಸ್ ವಿರುದ್ಧದ ಸರಣಿಯಲ್ಲಿ 178 ರನ್ ಗಳಿಸಿದ್ದಾರೆ. ಇನ್ನೂ 23 ವರ್ಷದ ಇವರು ತಂಡದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಏಕೈಕ ಬ್ಯಾಟರ್. ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಬಂದಿದ್ದಾರೆ, ಆಸೀಸ್ ವಿರುದ್ಧ ಅಬ್ಬರಿಸಿದ್ದಾರೆ. ಸೂರ್ಯಕುಮಾರ್ ಕೂಡ ಆಸೀಸ್ ವಿರುದ್ಧ ಸಿಡಿದಿದ್ದಾರೆ. ಆದರೆ ಏಕದಿನದಲ್ಲಿ ಸೂರ್ಯ ಬ್ಯಾಟಿಂಗ್ ಬಹುತೇಕ ಬಾರಿ ಕೈಕೊಟ್ಟಿದೆ. ಇದೊಂದು ಆತಂಕದ ವಿಚಾರ. ಎಲ್ಲಕ್ಕಿಂತ ಮುಖ್ಯವೆಂದರೆ ಆಡುವ ಬಳಗದಲ್ಲಿ ಇವರು ಸ್ಥಾನ ಸಂಪಾದಿಸುವುದು ಅನುಮಾನ. ಇನ್ನು ಕಿಶನ್ ಕೂಡ ಹೆಚ್ಚುವರಿ ಆಟಗಾರನಾಗಿಯೇ ಇರಲಿದ್ದಾರೆ.
ರೋಹಿತ್ ಶರ್ಮ, ಕೊಹ್ಲಿ, ಅಶ್ವಿನ್, ಬುಮ್ರಾ, ರಾಹುಲ್ ಇವರೆಲ್ಲ ಅತ್ಯಂತ ಅನುಭವಿಗಳು. ಇವರನ್ನೆಲ್ಲ ಹಿಂದಿನ ಪ್ರದರ್ಶನದ ಆಧಾರದಲ್ಲೇ ಆಯ್ಕೆ ಮಾಡಿರುವುದು. ಈ ಅನುಭವವೇ ದೊಡ್ಡ ಶಕ್ತಿಯಾಗಿದೆ.
ತಂಡದ ಆಲ್‌ರೌಂಡ್ ವಿಭಾಗ ಹಾರ್ದಿಕ್, ಜಡೇಜ ಹಾಜರಿಯೊಂದಿಗೆ ಬಲಿಷ್ಠವಾಗಿದೆ. ಇವರು ಸಕಾಲದಲ್ಲಿ ಮಿನುಗಬೇಕಷ್ಟೇ.
ಸೂರ್ಯಕುಮಾರ್, ಗಿಲ್, ಕಿಶನ್ ಅಸಾಮಾನ್ಯ ಪ್ರತಿಭಾವಂತರು. ಅದರಲ್ಲಿ ಅನುಮಾನವೇ ಇಲ್ಲ.
ಬೌಲಿಂಗ್‌ನಲ್ಲಿ ಬುಮ್ರಾ, ಸಿರಾಜ್, ಕುಲದೀಪ್ ಪ್ರಬಲ ಅಸ್ತ್ರಗಳಾಗಿದ್ದಾರೆ. ಸಂದೇಹಗಳು
ತಂಡದಲ್ಲಿ ರೋಹಿತ್, ಕೊಹ್ಲಿ, ಅಶ್ವಿನ್‌ರಂತಹ ಅನುಭವಿಗಳಿದ್ದರೂ ಇವರು ಸ್ಥಿರವಾಗಿ ಆಡುತ್ತಾರೆಂಬ ಬಗ್ಗೆ ನಂಬಿಕೆ ಇಲ್ಲ.
ಸೂರ್ಯಕುಮಾರ್ ಅದ್ಭುತ ಆಟಗಾರನೇ ಆದರೂ, ಏಕದಿನದಲ್ಲಿ ಇವರ ಸಾಧನೆ ಕಳಪೆ. ಕಿಶನ್‌ಗೆ ಸ್ಥಾನ ಸಿಕ್ಕುವುದೇ ಕಷ್ಟ.
ಬೌಲಿಂಗ್‌ನಲ್ಲಿ ಬುಮ್ರಾ ಮೇಲೆ ಬಹಳ ಒತ್ತಡವಿದೆ. ಸಿರಾಜ್ ಅದನ್ನು ಕಡಿಮೆ ಮಾಡುವ ಶಕ್ತಿ ಹೊಂದಿದ್ದಾರಾ ಎಂಬ ಪ್ರಶ್ನೆಗಳಿವೆ.
ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿಭಾರತೀಯ ಬೌಲರ್‌ಗಳಿಂದ ಬಹಳ ನಿರೀಕ್ಷಿಸಲು ಕಷ್ಟವಿದೆ. ಅಂತಿಮ ಓವರ್‌ಗಳಲ್ಲಿ ಇವರ ಪ್ರದರ್ಶನ ನಿರ್ಣಾಯಕವಾಗಲಿದೆ. ಅಲ್ಲಿ ಏನು ಮಾಡುತ್ತಾರೆ ಎಂಬುದು ಈಗಿನ ವಿಚಾರ.