Advertisement

ಭಾರತ ಮತ್ತೆ ವಿಶ್ವಗುರುವಾಗಿಸಿ

11:12 AM Dec 18, 2018 | Team Udayavani |

ಕಲಬುರಗಿ: ಇಂದಿನ ಯುವ ವಿಜ್ಞಾನಿಗಳಿಗೆ ಸೌಲಭ್ಯ ಮತ್ತು ಅವಕಾಶಗಳು ಹೆಚ್ಚಿದ್ದು, ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಭಾರತವನ್ನು ಮತ್ತೆ ವಿಶ್ವಗುರುವಾಗಿಸಬೇಕು ಎಂದು ಇಸ್ರೋ ನಿಕಟಪೂರ್ವ ಅಧ್ಯಕ್ಷ ಎ.ಎಸ್‌. ಕಿರಣಕುಮಾರ ಕರೆ ನೀಡಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ 26ನೇ ರಾಜ್ಯ ಮಟ್ಟದ ಮಕ್ಕಳ
ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಅವರು
ಮಾತನಾಡಿದರು. 

ಭಾರತ ಸಾವಿರಾರು ವರ್ಷಗಳ ಹಿಂದೆ ಜಗತ್ತಿನ ಅಗ್ರಗಣ್ಯ ದೇಶ ಎನಿಸಿತು ಎಂಬುದು ಸಂಶೋಧನೆಗಳಿಂದ
ತಿಳಿದಿದೆ ಎಂದು ಹೇಳಿದರು. ಪಾಶ್ಚಿಮಾತ್ಯ ಮತ್ತು ಯುರೋಪ ರಾಷ್ಟ್ರಗಳಲ್ಲಿ ಅಲ್ಲಿನ ಯುವಕರಿಗೆ ಸೌಲಭ್ಯಗಳು ಹೆಚ್ಚೆಚ್ಚು ಸಿಗುತ್ತಿವೆ ಎಂದು ಭಾವಿಸಲಾಗುತ್ತಿದೆ. ನಮ್ಮಲ್ಲೂ ಪ್ರತಿ ಕ್ಷಣವೂ ಅವಕಾಶಗಳು ಇರುತ್ತವೆ. ನಮ್ಮಲ್ಲಿನ ಬುದ್ಧಿಯನ್ನು ಬೆಳೆಸಿಕೊಂಡು ಪ್ರಶ್ನೆಗಳನ್ನು ಹಾಕಿ ವೈಜ್ಞಾನಿಕವಾಗಿ ಉತ್ತರ ಕಂಡುಕೊಳ್ಳಬೇಕು. ಇಚ್ಛಾ ಶಕ್ತಿ ಇದ್ದರೆ ಸಾಧನೆ ಸಾಧ್ಯ ಎಂಬುವುದು ಈಗಾಗಲೇ ಭಾರತದ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವಿಶ್ವವೇ ಬೆರಗಾಗುವ ಮಾದರಿಯಲ್ಲಿ ಸಾಧನೆ ಮಾಡುತ್ತಿದೆ. ಭಾರತದ ವೈಜ್ಞಾನಿಕ ಕ್ಷಮತೆ, ತಂತ್ರಜ್ಞಾನದ ಕ್ಷಮತೆ ಜಗತ್ತಿನ ಬೇರೆ ದೇಶಗಳ ತಂತ್ರಜ್ಞಾನದ ವಿಸ್ತಾರಕ್ಕೂ ನೆರವಾಗುತ್ತಿದೆ. ಬಾಹ್ಯಾಕಾಶ
ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಮೂಲಕ ಪ್ರಪಂಚದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಜಗತ್ತಿನಲ್ಲಿ 31 ರಾಷ್ಟ್ರಗಳು ಉಪಗ್ರಹಗಳ ಉಡಾವಣೆ ಮಾಡುತ್ತಿವೆ. ಕಳೆದ ವರ್ಷ ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳ ಉಡಾವಣೆ ಮಾಡಿದಾಗ ಇಡೀ ಜಗತ್ತು ನಮ್ಮತ್ತ ತಿರುಗಿ ನೋಡಿದೆ. ಇಷ್ಟೊಂದು ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಲು ಹೇಗೆ ಸಾಧ್ಯವಾಯಿತು ಎಂಬ ಉದ್ಘಾರಗಳು ಜಗತ್ತಿನಲ್ಲಿ ಎದ್ದಿದ್ದವು.

Advertisement

ನಾವು ಮಂಗಳಯಾನ ತಡವಾಗಿ ಆರಂಭಿಸಿದ್ದರೂ ಒಂದೇ ಯತ್ನದಲ್ಲಿ ಯಶಸ್ವಿಯಾಗಿ ಸಾಧಿಸಬಹುದು ಎಂದು ಪ್ರಪಂಚಕ್ಕೆ ಸಾರಿದ್ದೇ ಎಂದು ಹೇಳಿದರು.

ಪ್ರತಿ 15 ನಿಮಿಷಕ್ಕೊಮ್ಮೆ ವಾತಾವರಣದ ಮಾಹಿತಿ: ಇಸ್ರೋ ಉಡಾವಣೆಗೊಳಿಸಿರುವ ನ್ಯಾವಿಗೇಶನ್‌ ಉಪಗ್ರಹದ ಮೂಲಕ ಭಾರತದ ಸುತ್ತ-ಮುತ್ತಲಿನ ವಾತಾವರಣ ಮತ್ತು ಮೋಡ ಚಲನೆಗಳ ಮಾಹಿತಿಯನ್ನು ಪ್ರತಿ 15 ನಿಮಿಷಕ್ಕೊಮ್ಮೆ ತಿಳಿಯಬಹುದಾಗಿದೆ. ಯಾವ ಸ್ಥಳಕ್ಕೆ ಚಂಡಮಾರುತ ಅಪ್ಪಿಳಿಸುತ್ತಿದೆ ಎಂದು ಐದಾರು ದಿನಗಳ ಮುಂಚೆ ತಿಳಿಯಬಹುದಾಗಿದೆ. ಇದರಿಂದ ಚಂಡಮಾರುತಕ್ಕೆ ಸಿಲುಕಿ ಸಾವನ್ನಪ್ಪುತ್ತಿದ್ದ ಸಹಸ್ರಾರು ಜನರ ಜೀವ ಉಳಿಸಬಹುದಾಗಿದೆ ಎಂದು ಹೇಳಿದರು.

ಸಮುದ್ರದ ಯಾವ ಸ್ಥಳದಲ್ಲಿ ಮೀನುಗಳಿವೆ ಎಂಬುವುದು ಮೀನುಗಾರರಿಗೆ ಸ್ಥಳೀಯ ಭಾಷೆಯಲ್ಲೇ ತಿಳಿಸುವ ತಂತ್ರಜ್ಞಾನ ಹೊಂದಿದೆ. ಜತೆಗೆ ಸೇನೆ, ವೈದ್ಯಕೀಯ ಕ್ಷೇತ್ರ, ಗ್ರಾಪಂ ಮಟ್ಟದಲ್ಲೂ ನೆರವಾಗುವ ಮಾಹಿತಿ ತಿಳಿಯಬಹುದಾಗಿದೆ. ನಮ್ಮ ಬಾಹ್ಯಾಕಾಶ ತಂತ್ರಜ್ಞಾನ ದೈನಂದಿನ ಜೀವನಕ್ಕೆ ಉಪಯೋಗವಾಗುವ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next