Advertisement

ಇಂದಿನಿಂದ ಭಾರತ-ವೆಸ್ಟ್‌ ಇಂಡೀಸ್‌ ಟಿ-20 ಸರಣಿ

11:05 PM Aug 02, 2023 | Team Udayavani |

ಟರೂಬ (ಟ್ರಿನಿಡಾಡ್‌ ಆ್ಯಂಡ್‌ ಟೊಬೆಗೊ): ಟೀಮ್‌ ಇಂಡಿಯಾದ ವೆಸ್ಟ್‌ ಇಂಡೀಸ್‌ ಪ್ರವಾಸ 3ನೇ ಹಂತಕ್ಕೆ ಕಾಲಿಟ್ಟಿದೆ. ಟೆಸ್ಟ್‌ ಹಾಗೂ ಏಕದಿನ ಸರಣಿಗಳ ಬಳಿಕ ಇದೀಗ ಎಲ್ಲರೂ ಕಾತರದಿಂದ ಕಾಯುತ್ತಿರುವ ಟಿ20 ಸರಣಿ ಎದುರಾಗಿದೆ. ಗುರುವಾರಿಂದ 5 ಪಂದ್ಯಗಳ ಹೊಡಿಬಡಿ ಕ್ರಿಕೆಟ್‌ನಲ್ಲಿ ಇತ್ತಂಡಗಳು ಸೆಣಸಲಿವೆ. ಕೊನೆಯ ಎರಡು ಪಂದ್ಯಗಳು ಅಮೆರಿಕದ ಫ್ಲೋರಿಡಾ ದಲ್ಲಿ ನಡೆಯುತ್ತಿರುವುದು ವಿಶೇಷ. ಇವೆಲ್ಲವೂ ಹಗಲು ಪಂದ್ಯಗಳಾಗಿದ್ದು, ಭಾರತದಲ್ಲಿ ರಾತ್ರಿ 8 ಗಂಟೆಗೆ ಆರಂಭ ವಾಗುವ ರೀತಿಯಲ್ಲಿ ನಿಗದಿಗೊಳಿಸಲಾಗಿದೆ.

Advertisement

ಟಿ20 ಸರಣಿಯಿಂದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜ ಮೊದಲಾದ ಸೀನಿಯರ್ ಆಟಗಾರರನ್ನು ಹೊರಗಿಡಲಾಗಿದ್ದು, ಡೈನಾಮಿಕ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸು ತ್ತಿದ್ದಾರೆ. ಕೇವಲ ಟಿ20ಯಲ್ಲಷ್ಟೇ ಮಿಂಚುತ್ತಿರುವ 360 ಡಿಗ್ರಿ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಉಪನಾಯಕರಾಗಿದ್ದಾರೆ.
ಮುಂದಿನ ವರ್ಷದ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಎಳೆಯರ ಸಮರ್ಥ ತಂಡವೊಂದನ್ನು ರೂಪುಗೊಳಿಸುವ ಉದ್ದೇಶ ಭಾರತದ್ದು.

ಹೀಗಾಗಿ ಅಜಿತ್‌ ಅಗರ್ಕರ್‌ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಆರಿಸಿದ ಈ ಮೊದಲ ತಂಡದಲ್ಲಿ ಬಹಳಷ್ಟು ಯುವ ಹಾಗೂ ಪ್ರತಿಭಾನ್ವಿತ ಆಟಗಾರರು ತುಂಬಿದ್ದಾರೆ. ಎಲ್ಲರೂ ಅವಕಾಶವನ್ನು ಸಾರ್ಥಕಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇವರಲ್ಲಿ ಐಪಿಎಲ್‌ ಹೀರೋಗಳಾದ ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ಮುಕೇಶ್‌ ಕುಮಾರ್‌ ಪ್ರಮುಖರು. ಮರಳಿ ಬಂದ ಸಂಜು ಸ್ಯಾಮ್ಸನ್‌ ಮೇಲೂ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ತಂಡದಲ್ಲಿ ಸ್ಪಿನ್‌ ಸೇನೆಯೇ ಇದೆ. ಚಹಲ್‌, ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ಜತೆಗೆ 4ನೇ ಸ್ಪಿನ್ನರ್‌ ಆಗಿ ಬಿಷ್ಣೋಯಿ ಇದ್ದಾರೆ. ಆವೇಶ್‌ ಖಾನ್‌, ಅರ್ಷದೀಪ್‌ ವೇಗದ ಬೌಲಿಂಗ್‌ ವಿಭಾಗಕ್ಕೆ ಸೇರ್ಪಡೆಗೊಂಡಿದ್ದಾರೆ. ಗಿಲ್‌, ಜೈಸ್ವಾಲ್‌ ಮತ್ತು ಇಶಾನ್‌ ಕಿಶನ್‌ ಭಾರತದ ಬ್ಯಾಟಿಂಗ್‌ ವಿಭಾಗದ ಪ್ರಮುಖರಾಗಿದ್ದಾರೆ.
ಟೆಸ್ಟ್‌ ಹಾಗೂ ಏಕದಿನ ಸರಣಿಗಳೆರಡನ್ನೂ ಗೆದ್ದ ಭಾರತ ಟಿ20ಯಲ್ಲೂ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು ಎಂದೇ ವಿಶ್ಲೇಷಿಸಲಾಗುತ್ತಿದೆ.

ಜೋಶ್‌ ತೋರಲಿ ವಿಂಡೀಸ್‌
ಇನ್ನೊಂದೆಡೆ ಟೆಸ್ಟ್‌ ಹಾಗೂ ಏಕದಿನ ಸರಣಿಗಳಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ ವೆಸ್ಟ್‌ ಇಂಡೀಸ್‌ ಟಿ ಟ್ವೆಂಟಿಯಲ್ಲಾದರೂ ಜೋಶ್‌ ತೋರಲಿ ಎಂಬುದು ಎಲ್ಲರ ಹಾರೈಕೆ. ಬಿಗ್‌ ಹಿಟ್ಟರ್‌ ಶಿಮ್ರನ್‌ ಹೆಟ್‌ಮೈರ್‌, ಮೊನ್ನೆ ಡಲ್ಲಾಸ್‌ನಲ್ಲಿ ಮುಂಬೈ ಇಂಡಿಯನ್ಸ್‌ ನ್ಯೂಯಾರ್ಕ್‌ ತಂಡಕ್ಕೆ ಮೇಜರ್‌ ಲೀಗ್‌ ಚಾಂಪಿಯನ್‌ಶಿಪ್‌ ಕಿರೀಟ ತೊಡಿಸಿದ ನಿಕೋಲಸ್‌ ಪೂರಣ್‌ ತಂಡದಲ್ಲಿದ್ದಾರೆ. ಶೈ ಹೋಪ್‌, ಒಶೇನ್‌ ಥಾಮಸ್‌ ಮೊದಲಾದವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರೆಲ್ಲ ಲೀಗ್‌ ಕ್ರೇಜ್‌ ಬಿಟ್ಟು “ವೆಸ್ಟ್‌ ಇಂಡೀಸ್‌ ತಂಡ’ಕ್ಕಾಗಿ ಬದ್ಧತೆಯಿಂದ ಆಡಿದರೆ ಸರಣಿ ರೋಚಕ ವಾಗಿ ಸಾಗುವುದು ಖಂಡಿತ.

Advertisement
Advertisement

Udayavani is now on Telegram. Click here to join our channel and stay updated with the latest news.

Next