Advertisement
ಸಾಮಾನ್ಯವಾಗಿ ಸೀಮಿತ ಓವರ್‌ಗಳ ಸರಣಿ ಎಂದೊಡನೆ ಅಲ್ಲಿ ಹೊಡಿ-ಬಡಿ ಆಟವೇ ವಿಜೃಂಭಿಸಬೇಕು. ಇದಕ್ಕಾಗಿ ಎಲ್ಲ ಟ್ರ್ಯಾಕ್‌ಗಳನ್ನೂ ರನ್ ಪ್ರವಾಹ ಹರಿದು ಬರುವ ರೀತಿಯಲ್ಲೇ ಸಿದ್ಧಪಡಿಸಲಾಗುತ್ತದೆ. ಗುವಾಹಟಿ ಹಾಗೂ ವಿಶಾಖಪಟ್ಟಣದಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ರನ್ನಿನ ಸುರಿಮಳೆಯೇ ಆಗಿತ್ತು. ಇಲ್ಲಿನ ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ 320 ಪ್ಲಸ್ ರನ್ ಒಟ್ಟುಗೂಡಿದ್ದೇ ಇದಕ್ಕೆ ಸಾಕ್ಷಿ. ಹೀಗಾಗಿ ಪುಣೆ ಟ್ರ್ಯಾಕ್ ಕೂಡ ಇದಕ್ಕಿಂತ ಭಿನ್ನವಾಗುವ ಸಾಧ್ಯತೆ ಇಲ್ಲ.
ಭಾರತದ ಪಾಲಿಗೆ ಇಲ್ಲಿ ಸಮಾಧಾನಕರ ಸಂಗತಿ ಯೊಂದಿದೆ. ಅದೆಂದರೆ ಪೇಸ್ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ಪುನ ರಾಗಮನ. ಹಿಂದಿನೆರಡು ಪಂದ್ಯಗಳಲ್ಲಿ ಮೊಹಮ್ಮದ್ ಶಮಿ-ಉಮೇಶ್ ಯಾದವ್ ಜೋಡಿ ಮುನ್ನೂರರಷ್ಟು ರನ್ ಬಿಟ್ಟುಕೊಟ್ಟು ದುಬಾರಿಯಾಗಿತ್ತು. ಇಬ್ಬರೂ ಡೆತ್ ಓವರ್‌ಗಳಲ್ಲಿ ಎಡವಿದ್ದರು. ಭುವಿ-ಬುಮ್ರಾ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಅಬ್ಬರಕ್ಕೆ ಕಡಿವಾಣ ಹಾಕಬಹುದೆಂಬುದು ಎಲ್ಲರ ನಿರೀಕ್ಷೆ. ಸ್ಪಿನ್ ವಿಭಾಗ ನೋಡಿಕೊಳ್ಳಲು ಕುಲದೀಪ್ ಯಾದವ್, ಚಾಹಲ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಇದ್ದಾರೆ. ಹೆಟ್‌ಮೈರ್, ಹೋಪ್ ಭರವಸೆ
ಟೆಸ್ಟ್ ಕ್ರಿಕೆಟಿಗೆ ಹೋಲಿಸಿದರೆ ಕೆರಿಬಿಯನ್ನರ ಬ್ಯಾಟಿಂಗ್ ವಿಭಾಗ ಹೆಚ್ಚು ಬಲಿಷ್ಠ ಎಂಬುದು ಈಗಾಗಲೇ ಸಾಬೀತಾಗಿದೆ. ಶಿಮ್ರನ್ ಹೆಟ್‌ಮೈರ್, ಶೈ ಹೋಪ್ ಈಗಾಗಲೇ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಹೆಟ್‌ಮೈರ್ ಅವರಂತೂ ಸತತ 2 ಶತಕಗಳ ಅವಕಾಶವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು. ಜತೆಗೆ ಆರಂಭಕಾರ ಕೈರನ್ ಪೊವೆಲ್ ಕೂಡ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅನುಭವಿ ಮಾರ್ಲಾನ್ ಸಾಮ್ಯುವೆಲ್ಸ್, ರೋವ್‌ಮನ್ ಪೊವೆಲ್ ಫಾರ್ಮ್ ಕಂಡುಕೊಂಡರೆ ವಿಂಡೀಸ್ ಬ್ಯಾಟಿಂಗ್ ಸಾಮರ್ಥ್ಯ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ತುಸು “ಸೀರಿಯಸ್‌ನೆಸ್’ ತೋರ್ಪಡಿಸಿ, ಫಿನಿಶಿಂಗ್ ಕಾರ್ಯತಂತ್ರದಲ್ಲಿ ಯಶಸ್ಸು ಸಾಧಿಸಿದರೆ ಹೋಲ್ಡರ್ ಪಡೆ ಗೆಲುವಿನ ಮುಖ ಕಂಡೀತು.
Related Articles
Advertisement
ಭಾರತಕ್ಕೆ ಕಡಿವಾಣ ಕಷ್ಟವೆಸ್ಟ್ ಇಂಡೀಸ್ ಬೌಲಿಂಗ್ ಬಗ್ಗೆ ಇದೇ ಮಾತನ್ನು ಹೇಳಲಾಗದು. ಯಾರೇ ದಾಳಿಗಿಳಿದರೂ ಭಾರತದ ಬ್ಯಾಟಿಂಗಿಗೆ ಕಡಿವಾಣ ಹಾಕುವುದು ಕಷ್ಟ. ಅವರು ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿಕೊಂಡರೂ ಸಿಡಿದು ನಿಲ್ಲಬಲ್ಲ ಇನ್ನಷ್ಟು ಬ್ಯಾಟ್ಸ್‌ಮನ್‌ಗಳು ಟೀಮ್ ಇಂಡಿಯಾದಲ್ಲಿದ್ದಾರೆ. ರೋಹಿತ್ ಶರ್ಮ, ಅಂಬಾಟಿ ರಾಯುಡು, ರಿಷಬ್ ಪಂತ್ ಇವರಲ್ಲಿ ಪ್ರಮುಖರು. ಆದರೂ ಮುಂದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಭಾರತ ತಂಡದ ಕೆಲವು ಕೊರತೆಗಳು ನೀಗಬೇಕಾದುದು ಸುಳ್ಳಲ್ಲ. ಇದರಲ್ಲಿ ಆರಂಭಕಾರ ಶಿಖರ್ ಧವನ್, ಕೀಪರ್ ಧೋನಿ ಅವರ ಫಾರ್ಮ್ ಪ್ರಮುಖವಾದದ್ದು. ಇವರಿಬ್ಬರಲ್ಲೂ ಈಗ ಮೊದಲಿನ ಚಾರ್ಮ್ ಇಲ್ಲ. ಆದರೂ ಕೆ.ಎಲ್. ರಾಹುಲ್ ಅವರಿಗೆ ಅವಕಾಶ ನೀಡದೆ ಸತತವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ರಾಹುಲ್ ಅನಿವಾರ್ಯತೆ ಏಕದಿನಕ್ಕೇ ಹೊರತು ಟೆಸ್ಟ್ ಪಂದ್ಯಗಳಿಗಲ್ಲ ಎಂಬುದು ಕಣ್ಣೆದುರಿನ ಸತ್ಯ. ಮಧ್ಯಮ ಕ್ರಮಾಂಕದ ಮತ್ತೂಬ್ಬ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಕೂಡ ಪ್ರೇಕ್ಷಕನಾಗಿಯೇ ಉಳಿದಿದ್ದಾರೆ. ವಿಂಡೀಸಿಗೆ ಕೊಹ್ಲಿ ಫ್ಯಾಕ್ಟರ್
ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿ ವಿಶ್ವದ ಕಣ್ಣು ಕುಕ್ಕುವಂತೆ ಮಾಡಿರುವ ವಿರಾಟ್ ಕೊಹ್ಲಿ ಭಾರತ ತಂಡದ “ಸೂಪರ್‌ಮ್ಯಾನ್’ ಆಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 10 ಸಾವಿರ ರನ್ ಪೇರಿಸಿ ಮೆರೆದ ಕೊಹ್ಲಿ, 2 ಪಂದ್ಯಗಳಿಂದ 297 ರನ್ ಸೂರೆಗೈದದ್ದು ಅಸಾಮಾನ್ಯ ಸಾಧನೆಯಾಗಿದೆ. ಪುಣೆಯಲ್ಲೂ ಕೊಹ್ಲಿ ಉತ್ತಮ ದಾಖಲೆ ಹೊಂದಿರುವುದರಿಂದ ಮತ್ತೂಂದು ರಂಜನೀಯ ಸರದಿಯ ನಿರೀಕ್ಷೆಯಲ್ಲಿರಬಹುದು. ಪುಣೆಯ “ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ’ನಲ್ಲಿ ಈವರೆಗೆ 3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದು, ಭಾರತ ಎರಡನ್ನು ಗೆದ್ದು ಒಂದರಲ್ಲಿ ಸೋಲನುಭವಿಸಿದೆ. ಭಾರತ-ವೆಸ್ಟ್ ಇಂಡೀಸ್ ಇಲ್ಲಿ ಮುಖಾಮುಖೀ ಆಗುತ್ತಿರುವುದು ಇದೇ ಮೊದಲು. ಸೋಲಿನ ಆರಂಭ
ಇಲ್ಲಿ ಮೊದಲ ಏಕದಿನ ನಡೆದದ್ದು 2013ರಲ್ಲಿ. ಎದುರಾಳಿ ಆಸ್ಟ್ರೇಲಿಯ. 7 ಪಂದ್ಯಗಳ ಸರಣಿಯ ಈ ಆರಂಭಿಕ ಪಂದ್ಯದಲ್ಲಿ ಜಾರ್ಜ್ ಬೈಲಿ ಪಡೆ 72 ರನ್ನುಗಳಿಂದ ಭಾರತವನ್ನು ಮಣಿಸಿತ್ತು. ಆಸ್ಟ್ರೇಲಿಯ 8 ವಿಕೆಟಿಗೆ 304 ರನ್ ಪೇರಿಸಿದರೆ, ಧೋನಿ ಸಾರಥ್ಯದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ 49.4 ಓವರ್‌ಗಳಲ್ಲಿ 232ಕ್ಕೆ ಆಲೌಟ್ ಆಗಿತ್ತು. ವಿರಾಟ್ ಕೊಹ್ಲಿ ಸರ್ವಾಧಿಕ 61 ರನ್ ಮಾಡಿದ್ದರು. ಆಸೀಸ್ ಪರ ಕಪ್ತಾನನ ಆಟವಾಡಿ 85 ರನ್ ಬಾರಿಸಿದ ಬೈಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಆರನ್ ಫಿಂಚ್ 72, ಫಿಲಿಪ್ ಹ್ಯೂಸ್ 47 ರನ್ ಹೊಡೆದರು. ಸತತ 2 ಗೆಲುವು
ಕಳೆದ ವರ್ಷ ಇಲ್ಲಿ ಆಡಲಾದ ಎರಡೂ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು. ಇದರಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯ ಅತ್ಯಂತ ರೋಮಾಂಚನಕಾರಿಯಾಗಿತ್ತು. ಇಂಗ್ಲೆಂಡ್ 7ಕ್ಕೆ 350 ರನ್ ಪೇರಿಸಿದರೆ, ಭಾರತ ಆರಂಭಿಕ ಆಘಾತದಿಂದ ಅಮೋಘ ರೀತಿಯಲ್ಲಿ ಚೇತರಿಸಿಕೊಂಡು 48.1 ಓವರ್‌ಗಳಲ್ಲಿ 7ಕ್ಕೆ 356 ರನ್ ಪೇರಿಸಿ ಜಯಭೇರಿ ಮೊಳಗಿಸಿತ್ತು. 63 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೇದಾರ್ ಜಾಧವ್ ಅವರ 200 ರನ್ನುಗಳ ಜತೆಯಾಟ ಹೊಸ ಚೈತನ್ಯ ತುಂಬಿತು. ಕೊಹ್ಲಿ 122, ಜಾಧವ್ 120 ರನ್ ಬಾರಿಸಿ ಮೆರೆದರು. ಜಾಧವ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು. ನ್ಯೂಜಿಲ್ಯಾಂಡ್ 9ಕ್ಕೆ 239 ರನ್ ಗಳಿಸಿದರೆ, ಭಾರತ 46 ಓವರ್‌ಗಳಲ್ಲಿ 4 ವಿಕೆಟಿಗೆ 232 ರನ್ ಬಾರಿಸಿ ಗೆದ್ದು ಬಂದಿತು. 45ಕ್ಕೆ 3 ವಿಕೆಟ್ ಕಿತ್ತ ಭುವನೇಶ್ವರ್ ಪಂದ್ಯಶ್ರೇಷ್ಠರೆನಿಸಿದರು. ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಂಬಾಟಿ ರಾಯುಡು, ರಿಷಬ್ ಪಂತ್, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ. ವೆಸ್ಟ್ ಇಂಡೀಸ್: ಕೈರನ್ ಪೋಲಾರ್ಡ್, ಚಂದರ್‌ಪಾಲ್ ಹೇಮರಾಜ್/ಎವಿನ್ ಲೆವಿಸ್, ಶೈ ಹೋಪ್, ಮಾರ್ಲಾನ್ ಸಾಮ್ಯುಯೆಲ್ಸ್, ಶಿಮ್ರನ್ ಹೆಟ್‌ಮೈರ್, ರೋವ್‌ಮನ್ ಪೊವೆಲ್/ಸುನೀಲ್ ಆ್ಯಂಬ್ರಿಸ್, ಜಾಸನ್ ಹೋಲ್ಡರ್, ಆ್ಯಶೆ ನರ್ಸ್, ಕೆಮರ್ ರೋಚ್, ದೇವೆಂದ್ರ ಬಿಶೂ, ಕೀಮೊ ಪೌಲ್/ಅಲ್ಜಾರಿ ಜೋಸೆಫ್.
ಆರಂಭ: 1.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್