ಹೊಸದಿಲ್ಲಿ: ಸುಳ್ಳು ಸುದ್ದಿಗಳ ತಡೆಗೆ ಕ್ರಮ ಕೈಗೊಳ್ಳಲು ಮುಂದಾಗಿರುವ ವಾಟ್ಸ್ ಆ್ಯಪ್, ಕಳುಹಿಸಲಾದ ಸಂದೇಶ ಫಾರ್ವರ್ಡ್ ಆಗಿದ್ದೇ ಅಥವಾ ಅಲ್ಲವೇ ಎಂಬುದನ್ನು ಖಚಿತ ಪಡಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಯಾರಿಂದ ಸಂದೇಶ ಬಂದಿದೆ ಎಂಬುದು ಗೊತ್ತಾಗುತ್ತದೆ ಎಂದಿದೆ. ಕರ್ನಾಟಕ, ಮಹಾರಾಷ್ಟ್ರ ಸಹಿತ ದೇಶದ ಹಲವು ಭಾಗಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಮಕ್ಕಳ ಕಳ್ಳರ ಬಗ್ಗೆ ಹರಿದಾಡಿದ ಸುಳ್ಳು ಸುದ್ದಿಯಿಂದ ಆಗಿರುವ ಅನಾಹುತಗಳ ಹಿನ್ನೆಲೆಯಲ್ಲಿ ಸರಕಾರ ನೀಡಿದ ನೋಟಿಸ್‌ಗೆ ಉತ್ತರವಾಗಿ ಸಂಸ್ಥೆ ಈ ಮಾಹಿತಿ ನೀಡಿದೆ.
ಇದೇ ವೇಳೆ ಫೇಕ್ ನ್ಯೂಸ್ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಿಂದಲೇ “ಬೂಮ್ ಲೈವ್’ ಎಂಬ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿತ್ತು. ಇತ್ತೀಚಿನ ಅವಾಂತರಗಳಿಗೆ ಕಾರಣವಾದ ಸುದ್ದಿಯ ಮೂಲಗಳನ್ನೂ ಅದು ಪತ್ತೆ ಹಚ್ಚಿದೆ ಎಂದು ಅದು ಹೇಳಿದೆ. ಸುಳ್ಳು ಸುದ್ದಿ ಹರಡುವುದನ್ನು ತಡೆಯುವುದರ ವಿರುದ್ಧ ಕೈಗೊಂಡಿರುವ ಕ್ರಮಗಳನ್ನೂ ವಿವರಿಸಿದೆ.
ಸುಳ್ಳು ಸುದ್ದಿಯನ್ನು ಹರಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗ್ರೂಪ್‌ನಲ್ಲಿ ಯಾರು ಸಂದೇಶ ಕಳುಹಿಸಬಹುದು ಮತ್ತು ಯಾರು ಸಂದೇಶ ಕಳುಹಿಸಬಾರದು ಎಂಬುದನ್ನು ನಿಯಂತ್ರಿಸುವ ಅವಕಾಶವನ್ನು ಗ್ರೂಪ್ ಅಡ್ಮಿನ್‌ಗೆ ನೀಡಲಾಗಿದೆ. ಇನ್ನೊಂದೆಡೆ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಗುರುತಿಸಲು ಅನುವಾಗುವಂತೆ ಪ್ರತಿ ಸಂದೇಶ ಗಳಿಗೂ ಫಾರ್ವರ್ಡೆಡ್ ಎಂಬ ಲೇಬಲ್ ಪ್ರದರ್ಶನವನ್ನೂ ಆರಂಭಿಸಲಾಗಿದೆ.
ಸರಕಾರ, ಸಮಾಜದ ಸಹಭಾಗಿತ್ವದಲ್ಲಿ ಕ್ರಮ ಕೈಗೊಳ್ಳುವ ಭರವಸೆ
ವಾಟ್ಸ್‌ಆ್ಯಪ್ ಪರಿಣತರ ಜತೆ ಸೇರಿಕೊಂಡು ತಪ್ಪು ಮಾಹಿತಿ ಗುರುತಿಸಲು ಕ್ರಮ