Advertisement

ದ್ವಿತೀಯ ಏಕದಿನ: ಜೋಶ್‌ ತೋರೀತೇ ಜಿಂಬಾಬ್ವೆ?

11:10 PM Aug 19, 2022 | Team Udayavani |

ಹರಾರೆ: ಜಿಂಬಾಬ್ವೆ ಎದುರಿನ ಏಕದಿನ ಸರಣಿಯನ್ನು ಭಾರತ ಜಬರ್ದಸ್ತ್ ಆಗಿಯೇ ಆರಂಭಿಸಿದೆ. ಗುರುವಾರದ “ನೋಲಾಸ್‌ ವಿಕ್ಟರಿ’ಯೇ ಇದಕ್ಕೆ ಸಾಕ್ಷಿ. ಶನಿವಾರ ಹರಾರೆ ಅಂಗಳದಲ್ಲೇ ದ್ವಿತೀಯ ಮುಖಾಮುಖಿ ಏರ್ಪಡಲಿದೆ. ಇದೇ ಲಯದಲ್ಲಿ ಸಾಗಿದರೆ ರಾಹುಲ್‌ ಪಡೆಗೆ ಸರಣಿ ಗೆಲುವು ಖಂಡಿತ ಅಸಾಧ್ಯವಲ್ಲ.

Advertisement

ಜಿಂಬಾಬ್ವೆಯನ್ನು ಮಣಿಸುವುದು, ಸರಣಿ ವಶಪಡಿಸಿಕೊಳ್ಳುವುದು ಭಾರತಕ್ಕೆ ದೊಡ್ಡ ಸವಾಲೇ ಅಲ್ಲ ಎಂದು ಭಾವಿಸಲಡ್ಡಿಯಿಲ್ಲ. ಆದರೆ ಇಲ್ಲಿಗೆ ಭಾರತದ ಸಮಸ್ಯೆಗಳೆಲ್ಲ ಪರಿಹಾರಗೊಂಡವು ಎಂಬುದಾಗಿ ಭಾವಿಸಬೇಕಿಲ್ಲ. ಸರಣಿ ರೋಚಕವಾಗಿ ಸಾಗುವುದು ಮುಖ್ಯ. ಆಗ ಎಲ್ಲರ ಸಾಮರ್ಥ್ಯವನ್ನೂ ಅಳೆದು ತೂಗಿ ನೋಡಲು ಸಾಧ್ಯ. ಮುಖ್ಯವಾಗಿ ಕೆ.ಎಲ್‌. ರಾಹುಲ್‌ ಅವರ ಫಿಟ್‌ನೆಸ್‌ ಮತ್ತು ಬ್ಯಾಟಿಂಗ್‌ ಫಾರ್ಮ್ ಹೇಗಿದೆ ಎಂಬುದನ್ನು ಅರಿಯಬೇಕಿದೆ. ಮುಂಬ ರುವ ಏಷ್ಯಾ ಕಪ್‌ ಹಿನ್ನೆಲೆಯಲ್ಲಿ ಇದು ಅತ್ಯಗತ್ಯ. ಈ ಸವಾಲು ಜಿಂಬಾಬ್ವೆ ಸವಾಲಿಗಿಂತ ಎಷ್ಟೋ ಪಟ್ಟು ಹೆಚ್ಚು.

ಗುರುವಾರದ ರನ್‌ ಚೇಸಿಂಗ್‌ ಕರ್ತವ್ಯವನ್ನು ಶಿಖರ್‌ ಧವನ್‌ ಮತ್ತು ಶುಭಮನ್‌ ಗಿಲ್‌ ಇಬ್ಬರೇ ಸೇರಿ ನಿಭಾಯಿಸಿದರು. ಹೀಗಾಗಿ ನಾಯಕ ರಾಹುಲ್‌ಗೆ ಬ್ಯಾಟಿಂಗ್‌ ಅವಕಾಶವೇ ಸಿಗಲಿಲ್ಲ. ಅವರು ಆರಂಭಿಕನಾಗಿ ಇಳಿದಿದ್ದರೆ ಫಾರ್ಮ್ ನೋಡಬಹುದಿತ್ತು. ತಂಡದ ಆಡಳಿತ ಮಂಡಳಿಯ ಮೊದಲ ಯೋಜನೆ ಪ್ರಕಾರ ಧವನ್‌ ಜತೆ ರಾಹುಲ್‌ ಅವರೇ ಓಪನರ್‌ ಆಗಿ ಇಳಿಯಬೇಕಿತ್ತು. ಶುಭಮನ್‌ ಗಿಲ್‌ ಅವರಿಗೆ ವನ್‌ಡೌನ್‌ ಸ್ಥಾನ ಮೀಸಲಾಗಿತ್ತು.

ಆದರೆ ಗುರುವಾರದ ಪಂದ್ಯದಲ್ಲಿ ನಿರೀಕ್ಷೆ ತಲೆಕೆಳಗಾಯಿತು. ಇನ್‌ ಫಾರ್ಮ್ ಗಿಲ್‌ ಅವರೇ ಧವನ್‌ ಜೋಡಿ ಯಾಗಿ ಬಂದರು. ರಾಹುಲ್‌ ತಮ್ಮನ್ನು 4ನೇ ಕ್ರಮಾಂಕಕ್ಕೆ ಮೀಸಲಿರಿಸಿದರು. ಧವನ್‌-ಗಿಲ್‌ ಬ್ಯಾಟಿಂಗ್‌ ಕಮಾಲ್‌ ಮಾಡಿದ್ದರಿಂದ ಉಳಿದವರಿಗೆ ಕ್ರೀಸ್‌ ಇಳಿಯುವ ಅವಕಾಶವೇ ಸಿಗಲಿಲ್ಲ. ರಾಹುಲ್‌ ಅವರಂತೆ ಇಶಾನ್‌ ಕಿಶನ್‌ ಅವರ ಬ್ಯಾಟಿಂಗ್‌ ಕೂಡ ಭಾರತಕ್ಕೆ ಮುಖ್ಯವಾಗಿದೆ. ಅವರು ವನ್‌ಡೌನ್‌ ಕ್ರಮಾಂಕದಲ್ಲಿದ್ದರು. ಹಾಗೆಯೇ ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌ ಆಟವನ್ನೂ ಗಮನಿಸಬೇಕಿದೆ.

ಹೀಗೆ… ರಾಹುಲ್‌, ಇಶಾನ್‌ ಕಿಶನ್‌ ಅವರ ಬ್ಯಾಟಿಂಗ್‌ ಫಾರ್ಮ್ ಹೇಗಿದೆ ಎಂಬುದನ್ನು ಅರಿಯಬೇಕಾದರೆ ಜಿಂಬಾಬ್ವೆ ಜೋಶ್‌ ತೋರುವುದು ಅತ್ಯಗತ್ಯ. ಕಳೆದ ಬಾಂಗ್ಲಾದೇಶ ಎದು ರಿನ ಸರಣಿಯಲ್ಲಿ ನೀಡಿದಂಥ ಭರ್ಜರಿ ಪ್ರದರ್ಶನವನ್ನು ಪುನರಾವರ್ತಿಸ ಬೇಕಿದೆ. ಇದಕ್ಕೆ ಆತಿಥೇಯ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡೂ ಹರಿತಗೊಳ್ಳಬೇಕು.

Advertisement

ಜಿಂಬಾಬ್ವೆಯ ತೀರಾ ಸಾಮಾನ್ಯ ಮಟ್ಟದ ಆಟ ಭಾರತದ ಸಾಮರ್ಥ್ಯಕ್ಕೆ ಖಂಡಿತ ಮಾನದಂಡವಲ್ಲ. ಇದರಿಂದ ಅಪಾಯವೇ ಜಾಸ್ತಿ. ದೊಡ್ಡ ಕೂಟಕ್ಕೆ ತೆರಳುವ ಮುನ್ನ ಯಾವತ್ತೂ ಬಲಿಷ್ಠ ತಂಡದೊಂಡನೆ ಆಡಿ ಅಭ್ಯಾಸ ನಡೆಸ ಬೇಕೇ ಹೊರತು ಜಿಂಬಾಬ್ವೆಯಂಥ ಸಾಮಾನ್ಯ ತಂಡದೆದುರು ಅಲ್ಲ.

ಚೇಸಿಂಗ್‌ ಸಾಮರ್ಥ್ಯ…
ಭಾರತಕ್ಕೆ ಬೌಲಿಂಗ್‌ ಬಗ್ಗೆ ಚಿಂತೆ ಇತ್ತು. ಏಕೆಂದರೆ, ಬಾಂಗ್ಲಾ ವಿರುದ್ಧ ಹರಾರೆ ಅಂಗಳದಲ್ಲೇ ಜಿಂಬಾಬ್ವೆ 5ಕ್ಕೆ 307 ರನ್‌, 5ಕ್ಕೆ 291 ರನ್‌ ಚೇಸ್‌ ಮಾಡಿ ಸರಣಿ ವಶಪಡಿಸಿಕೊಂಡಿತ್ತು. ಭಾರತದ ಬಳಿ ಅಷ್ಟೇನೂ ಘಾತಕ ಹಾಗೂ ಅನುಭವಿ ಬೌಲರ್‌ಗಳಿಲ್ಲದ ಕಾರಣ ರೇಗಿಸ್‌ ಬಳಗ ಇಂಥದೇ ಬ್ಯಾಟಿಂಗ್‌ ಪರಾಕ್ರಮ ತೋರಬಹುದೆಂಬ ನಿರೀಕ್ಷೆ ಇತ್ತು. ಆದರೆ ಏಕದಿನಕ್ಕೆ ಮರಳಿದ ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌, ಪ್ರಸಿದ್ಧ್ ಕೃಷ್ಣ ಸೇರಿಕೊಂಡು ಜಿಂಬಾಬ್ವೆ ಬ್ಯಾಟಿಂಗ್‌ ಸರದಿಯನ್ನು ಸೀಳಿಹಾಕಿದರು.

ಶನಿವಾರ ಜಿಂಬಾಬ್ವೆಯನ್ನರ ಬ್ಯಾಟ್‌ ಮಾತಾಡೀತೇ? ಪಂದ್ಯ “ಫೈಟ್‌’ ಕಂಡೀತೇ? ಕುತೂಹಲ ಸಹಜ.

ಆರಂಭ:
ಅಪರಾಹ್ನ 12.45
ಪ್ರಸಾರ:
ಸೋನಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next