Advertisement
ಬಾಂಗ್ಲಾದೇಶವನ್ನು ಭರ್ಜರಿ ಚೇಸಿಂಗ್ ಮೂಲಕ ಬಗ್ಗುಬಡಿದ ಜಿಂಬಾಬ್ವೆ ಪರಾಕ್ರಮವನ್ನು ಕಂಡಾಗ ಭಾರತಕ್ಕೂ ಕಠಿನ ಸವಾಲು ಎದುರಾ ಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅದು ಎರಡೂ ಪಂದ್ಯಗಳಲ್ಲಿ ಸೊಲ್ಲೆತ್ತದೆ ಶರಣಾದುದನ್ನು ಕಂಡಾಗ ಸರಣಿ ಅತ್ಯಂತ ನೀರಸವಾಗಿ ಕಂಡದ್ದು ಸುಳ್ಳಲ್ಲ. ಅಂತಿಮ ಪಂದ್ಯದಲ್ಲಾದರೂ ಜಿಂಬಾಬ್ವೆ ತಿರುಗಿ ಬಿದ್ದೀತೇ? ಪ್ರತಿಷ್ಠೆ ಉಳಿಸಿಕೊಂಡೀತೇ? ಈ ನಿರೀಕ್ಷೆ ಅವರದ್ದಲ್ಲ, ನಮ್ಮದು!
ಈವರೆಗಿನ ಎರಡೂ ಪಂದ್ಯಗಳು ಒಂದೇ ರೀತಿಯಲ್ಲಿ ನಡೆದುದನ್ನು ಗಮನಿಸಿಬಹುದು. ಜಿಂಬಾಬ್ವೆಯೇ ಮೊದಲು ಬ್ಯಾಟಿಂಗ್ ನಡೆಸಿದ್ದು, ಇನ್ನೂರರೊಳಗೆ ಕುಸಿದದ್ದು, ಭಾರತ ಸುಲಭದಲ್ಲಿ ಚೇಸ್ ಮಾಡಿದ್ದೆಲ್ಲ ಈವರೆಗಿನ ಪುನರಾವರ್ತಿತ ವಿದ್ಯಮಾನ. ಕೊನೆಯ ಪಂದ್ಯದಲ್ಲಾದರೂ ಭಾರತ ಮೊದಲು ಬ್ಯಾಟಿಂಗ್ ನಡೆಸಿ ತನ್ನ ಬ್ಯಾಟಿಂಗ್ ಆಳವನ್ನು ಪ್ರದರ್ಶಿಸಬೇಕಿದೆ. ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ ಬಹುತೇಕ ಎಲ್ಲ ಬ್ಯಾಟರ್‌ಗಳ ಒಂದು ಹಂತದ ಫಾರ್ಮ್ ನ ಸ್ಪಷ್ಟ ಚಿತ್ರಣ ಸಿಗಲಿದೆ. ಯಾರಿಗೆಲ್ಲ ವಿಶ್ರಾಂತಿ?
ಭಾರತವಿಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆ ಇದೆ. ಈವರೆಗೆ ಅವಕಾಶ ಪಡೆಯದ ರಾಹುಲ್ ತ್ರಿಪಾಠಿ, ಆವೇಶ್ ಖಾನ್, ಶಾಬಾಜ್ ಅಹ್ಮದ್ ರೇಸ್‌ನಲ್ಲಿದ್ದಾರೆ. ಹಾಗೆಯೇ ಕೆ.ಎಲ್. ರಾಹುಲ್ ನಾಯಕನಾಗಿ ಯಶಸ್ವಿಯಾದರೂ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ಮತ್ತೊಮ್ಮೆ ಅವರು ಆರಂಭಿಕನಾಗಿ ಇಳಿದು ರನ್ ಬರಗಾಲವನ್ನು ನೀಗಿಸಿಕೊಳ್ಳುವ ಅಗತ್ಯವಿದೆ. ಹಾಗೆಯೇ ಇಶಾನ್ ಕಿಶನ್ ಅವರ ಬ್ಯಾಟ್ ಕೂಡ ಇತ್ತೀಚಿನ ಪಂದ್ಯಗಳಲ್ಲಿ ಮುಷ್ಕರ ಹೂಡುತ್ತ ಇದೆ. ಇದಕ್ಕೊಂದು ಪರಿಹಾರ ಕಾಣಬೇಕಿದೆ.
Related Articles
Advertisement
ಬೌಲಿಂಗ್ ಮ್ಯಾಜಿಕ್ಭಾರತದ ಬೌಲರ್ ಎರಡೂ ಪಂದ್ಯಗಳಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಜಿಂಬಾಬ್ವೆಯ ಬ್ಯಾಟಿಂಗ್ ದುರ್ಬಲವೆಂದು ಭಾವಿಸಿ ನಮ್ಮವರ ಬೌಲಿಂಗ್ ಸಾಮರ್ಥ್ಯವನ್ನು ಕಡೆಗಣಿಸುವುದು ತಪ್ಪಾಗುತ್ತದೆ. ಭಾರತದ ಬೌಲಿಂಗ್ ಲೈನ್‌ಅಪ್‌ನಲ್ಲಿ ಅನುಭವಿಗಳು ಗೈರಾಗಿರುವಾಗ ಇವರು ತೋರಿದ ನಿರ್ವಹಣೆ ನಿಜಕ್ಕೂ ಅಮೋಘ. ದೀಪಕ್ ಚಹರ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಅವರೆಲ್ಲ ಲಭಿಸಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಹೀಗಾಗಿ ಆವೇಶ್ ಖಾನ್ ಮತ್ತು ಶಾಬಾಜ್ ಅಹ್ಮದ್ ಅವರಿಗೆ ಧಾರಾಳವಾಗಿ ಒಂದು ಅವಕಾಶ ನೀಡಬಹುದು. ಜಿಂಬಾಬ್ವೆಯ ಸಮಸ್ಯೆ
ಜಿಂಬಾಬ್ವೆಯ ಸಮಸ್ಯೆ ಹಲವು. ಇವುಗಳಲ್ಲಿ ದೊಡ್ಡದೆಂದರೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನದ್ದು. ಮೊದಲ ನಾಲ್ಕೈದು ವಿಕೆಟ್‌ಗಳಿಂದ ನಿರೀಕ್ಷಿತ ಮಟ್ಟದ ರನ್ ಹರಿದು ಬರುತ್ತಿಲ್ಲ. ಮೊದಲ ಪಂದ್ಯದಲ್ಲಿ 66ಕ್ಕೆ 5, ದ್ವಿತೀಯ ಪಂದ್ಯದಲ್ಲಿ 72ಕ್ಕೆ 5 ವಿಕೆಟ್ ಉದುರಿ ಹೋಗಿತ್ತು. ಮಧ್ಯಮ ಸರದಿಯಲ್ಲಿ ಸೀನ್ ವಿಲಿಯಮ್ಸ್, ಸಿಕಂದರ್ ರಾಜ ಅವರಂಥ ಅನುಭವಿಗಳಿದ್ದರೂ ಒತ್ತಡ ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ. ಮೊದಲು ಬ್ಯಾಟಿಂಗ್ ನಡೆಸಿದರೂ ತಂಡದ ಸ್ಕೋರ್ ಇನ್ನೂರರ ಗಡಿಯನ್ನೂ ಸಮೀಪಿಸದಿರುವುದು ಜಿಂಬಾಬ್ವೆಯ ದುರಂತ. ಸೋಮವಾರ ಈ ಸಂಕಟದಿಂದ ಪಾರಾಗಲು ಇರುವ ಕೊನೆಯ ಅವಕಾಶ. ಸೋಲನ್ನೇ ಕಾಣದ ದೀಪಕ್ ಹೂಡಾ!
ಹಾರ್ಡ್ ಹಿಟ್ಟಿಂಗ್ ಆಲ್‌ರೌಂಡರ್ ದೀಪಕ್ ಹೂಡಾ ಟೀಮ್ ಇಂಡಿಯಾದ “ಲಕ್ಕಿ ಚಾರ್ಮ್’ ಎನಿಸಿದ್ದಾರೆ. ಇದಕ್ಕೆ ಕಾರಣವೆಂದರೆ, ಅವರು ಆಡಿದ ಎಲ್ಲ 16 ಪಂದ್ಯಗಳಲ್ಲೂ ಭಾರತ ಗೆದ್ದಿರುವುದು ಹಾಗೂ ಇದೊಂದು ವಿಶ್ವದಾಖಲೆ ಆಗಿರುವುದು! ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೀಪಕ್ ಹೂಡಾ 9 ಟಿ20 ಮತ್ತು 7 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಎಲ್ಲದರಲ್ಲೂ ಭಾರತ ಗೆದ್ದು ಬಂದಿದೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್‌ಗ್ೂ ಹೂಡಾ ಅವರನ್ನು ಆರಿಸಿ, ಭಾರತ ಟ್ರೋಫಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂಬುದು ಕ್ರಿಕೆಟ್ ಅಭಿಮಾನಗಳ ಸಲಹೆ! ಸದ್ಯ ಅವರು ಏಷ್ಯಾ ಕಪ್‌ಗಾಗಿ ಆರಿಸಿದ ಭಾರತ ತಂಡದಲ್ಲಿದ್ದಾರೆ. ಈವರೆಗಿನ ದಾಖಲೆ ರೊಮೇನಿಯಾದ ಸಾತ್ವಿಕ್ ನಾಡಿಗೊಟ್ಲಾ ಹೆಸರಲ್ಲಿತ್ತು. ಅವರು ಆಡಿದ ಮೊದಲ 15 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೊಮೇನಿಯಾ ಗೆಲುವು ಸಾಧಿಸಿತ್ತು. ಆರಂಭ: ಅ. 12.45
ಪ್ರಸಾರ: ಸೋನಿ ಸ್ಪೋರ್ಟ್ಸ್