Advertisement

ಸರಣಿ ಗೆಲುವಿನ ಉತ್ಸಾಹದಲ್ಲಿ ರೋಹಿತ್‌ ಪಡೆ; ರಾಹುಲ್‌ಗೆ ಯಾವ ಸ್ಥಾನ?

11:34 PM Feb 08, 2022 | Team Udayavani |

ಅಹ್ಮದಾಬಾದ್‌: ಮೇಲ್ನೋಟಕ್ಕೆ ದೈತ್ಯ ತಂಡವಾಗಿರುವ ವೆಸ್ಟ್‌ ಇಂಡೀಸನ್ನು ರವಿವಾರದ ಮೊದಲ ಏಕದಿನ ಪಂದ್ಯದಲ್ಲಿ ಸುಲಭದಲ್ಲಿ ಮಣಿಸಿದ ಭಾರತವೀಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಎರಡನೇ ಪಂದ್ಯ ಬುಧವಾರ ಇಲ್ಲಿ ನಡೆಯಲಿದ್ದು, ಮೊನ್ನೆಯ ಲಯದಲ್ಲೇ ಸಾಗಿದರೆ ಸರಣಿ ರೋಹಿತ್‌ ಪಡೆಯ ವಶ ವಾಗಲಿದೆ. ವಿಂಡೀಸ್‌ ತಿರುಗಿ ಬಿದ್ದರೆ ಸರಣಿ ರೋಚಕ ಘಟ್ಟ ಮುಟ್ಟಲಿದೆ.

Advertisement

ಈ ಪಂದ್ಯಕ್ಕೆ ಕೆ.ಎಲ್‌. ರಾಹುಲ್‌ ಅವರ ಪುನರಾಗಮನ ಆಗುತ್ತಿರುವುದು ಭಾರತದ ಪಾಲಿಗೊಂದು ಖುಷಿಯ ಸಮಾಚಾರ. ಆದರೆ ಇವರಿಗೆ ಯಾವ ಕ್ರಮಾಂಕ ನೀಡುವುದೆನ್ನುವುದೇ ಇಲ್ಲಿನ ಪ್ರಶ್ನೆ. ಮಾಮೂಲು ಓಪನಿಂಗ್‌ ಕ್ರಮಾಂಕದಲ್ಲಿ ಆಡುತ್ತಾರೋ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿಯುತ್ತಾರೋ ಎಂಬುದನ್ನು ನಿರ್ಧರಿಸಬೇಕಿದೆ. ಓಪನಿಂಗ್‌ ಬಂದರೆ, ಕಳೆದ ಪಂದ್ಯದಲ್ಲಿ ಆಡಿದ್ದ ಇಶಾನ್‌ ಕಿಶನ್‌ ಹೊರಗುಳಿಯಬೇಕಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಾದರೆ ದೀಪಕ್‌ ಹೂಡಾ ಜಾಗ ಬಿಡಬೇಕಾಗುತ್ತದೆ.

ಆಯ್ಕೆಗೆ ವಿಪುಲ ಅವಕಾಶ
ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ತಂಡವನ್ನು ಮುನ್ನಡೆಸಿದ್ದ ರಾಹುಲ್‌ ಯಶಸ್ಸು ಕಾಣುವಲ್ಲಿ ವಿಫ‌ಲರಾಗಿದ್ದರು. ಒಂದು ಅರ್ಧ ಶತಕ ಬಾರಿಸಿದರೆ, ಉಳಿದೆರಡರಲ್ಲಿ ಬ್ಯಾಟಿಂಗ್‌ ಕೈಕೊಟ್ಟಿತ್ತು. ಆದರೀಗ ಸಾರಥಿಯಾಗಿ ರೋಹಿತ್‌ ಶರ್ಮ ಇರುವುದರಿಂದ ರಾಹುಲ್‌ ಯಾವುದೇ ಒತ್ತಡವಿಲ್ಲದೆ ಬ್ಯಾಟಿಂಗ್‌ ನಡೆಸಬಹುದು. ಹಳೆಯ ಫಾರ್ಮ್ಗೆ ಮರಳಿದರಂತೂ ಅದು ಭಾರತಕ್ಕೊಂದು ಬಂಪರ್‌ ಎಂದೇ ಹೇಳಬೇಕು. ಉಳಿದಂತೆ ಭಾರತದ ಟೀಮ್‌ ಕಾಂಬಿನೇಶನ್‌ನಲ್ಲಿ ಯಾವುದೇ ಗೊಂದಲವಿಲ್ಲ.

ಈ ನಡುವೆ ಶಿಖರ್‌ ಧವನ್‌, ಶ್ರೇಯ್‌ ಆಯ್ಯರ್‌ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಲಘು ಅಭ್ಯಾಸ ನಡೆಸಿದ್ದಾರೆ. ಹೆಚ್ಚುವರಿಯಾಗಿ ಬಂದ ಹಾರ್ಡ್‌ ಹಿಟ್ಟರ್‌ ಶಾರೂಖ್‌ ಖಾನ್‌ ಕೂಡ ರೇಸ್‌ನಲ್ಲಿದ್ದಾರೆ. ಹೀಗಾಗಿ ಭಾರತದ ಮುಂದೆ ಆಯ್ಕೆಯ ವಿಪುಲ ಅವಕಾಶಗಳಿವೆ.

ಪಂತ್‌ಗೆ ಭಡ್ತಿ ಬೇಕೇ?
ಸುದೀರ್ಘ‌ ವಿಶ್ರಾಂತಿ ಬಳಿಕ ತಂಡವನ್ನು ಕೂಡಿಕೊಂಡ ರೋಹಿತ್‌ ಶರ್ಮ ಪಂದ್ಯದಲ್ಲೇ ಸರ್ವಾಧಿಕ 60 ರನ್‌ ಬಾರಿಸಿ ಮಿಂಚಿದ್ದರು. ಆದರೆ ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಹಳಿ ತಪ್ಪಿದಂತಿದೆ. ಇದರಿಂದ ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆ ಕೂಡ ಬಿಗಡಾಯಿಸಿದೆ. ಇಂಥ ಸ್ಥಿತಿಯಲ್ಲಿ ಮತ್ತೆ ಮತ್ತೆ ಪಂತ್‌ ಅವರಿಗೆ ಭಡ್ತಿ ನೀಡುವುದರ ಔಚಿತ್ಯ ಅರ್ಥವಾಗುತ್ತಿಲ್ಲ. ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌ ಅವರಂಥ ಮಿಡ್ಲ್ ಆರ್ಡರ್‌ ಆಟಗಾರರೇ ಇರುವಾಗ ಇವರನ್ನು ಮೊದಲು ಬ್ಯಾಟಿಂಗಿಗೆ ಕಳುಹಿಸುವುದು ಸೂಕ್ತ; ಹಾಗೆಯೇ ಪಂತ್‌ ಫಿನಿಶರ್‌ ಆಗಿ ಬಂದರೆ ಹೆಚ್ಚು ಲಾಭ ಎಂಬುದು ಬಹುತೇಕರ ಅಭಿಪ್ರಾಯ.

Advertisement

ಆಲ್‌ರೌಂಡರ್ ಬಳಕೆ
ಆಲ್‌ರೌಂಡರ್‌ಗಳನ್ನು ಸರಿಯಾಗಿ ಬಳಸಿ ಕೊಳ್ಳುವಲ್ಲಿ ಭಾರತ ಎಡವುತ್ತಿದೆ ಎಂಬ ದೂರು ಕೂಡ ಕೇಳಿಬರುತ್ತಿದೆ. ಇದು ಸುಳ್ಳಲ್ಲ. ರವೀಂದ್ರ ಜಡೇಜ ಗೈರಲ್ಲಿ ಬಂದ ವೆಂಕಟೇಶ್‌ ಅಯ್ಯರ್‌ಗೆ ಸರಿಯಾದ ಬೌಲಿಂಗ್‌ ಅವಕಾಶ ನೀಡದೆ ತಂಡದಿಂದ ಹೊರಗಟ್ಟಲಾಯಿತು. ಇದೀಗ ದೀಪಕ್‌ ಹೂಡಾ ಸರದಿ. ಇವರನ್ನೂ ಮೊದಲ ಪಂದ್ಯದಲ್ಲಿ ಬೌಲಿಂಗ್‌ಗೆ ಇಳಿಸಲಿಲ್ಲ. ವಿಂಡೀಸ್‌ 44 ಓವರ್‌ ಒಳಗೆ ಆಲೌಟ್‌ ಆಯಿತೇನೋ ನಿಜ, ಆದರೂ ಹೂಡಾಗೆ ಒಂದೆರಡು ಓವರ್‌ ನೀಡಬಹುದಿತ್ತು. ಹೊಸಬರನ್ನು ತಂಡಕ್ಕೆ ಆರಿಸಿಕೊಂಡ ಮೇಲೆ ಆರಂಭದಲ್ಲೇ ಅವರ ಆತ್ಮ ವಿಶ್ವಾಸವನ್ನು ಕುಗ್ಗಿಸುವುದು ಸರಿಯಲ್ಲ.

ಘಾತಕ ಬೌಲಿಂಗ್‌
ಮೊಟೇರಾ ಟ್ರ್ಯಾಕ್‌ನಲ್ಲಿ ಭಾರತದ ಬೌಲರ್ ಅಮೋಘ ಪ್ರದರ್ಶನ ನೀಡಿದ್ದರು. ಅದರಲ್ಲೂ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್‌, ವಾಷಿಂಗ್ಟನ್‌ ಸುಂದರ್‌ ಘಾತಕವಾಗಿ ಪರಿಣಮಿಸಿದ್ದರು. ಅನುಭವಿಗಳನ್ನು ಹೊಂದಿಲ್ಲದ ವೇಗದ ವಿಭಾಗ ಕೂಡ ಪರಿಣಾಮಕಾರಿ ಪ್ರದರ್ಶನ ನೀಡಿತ್ತು. ತ್ರಿವಳಿ ಸ್ಪಿನ್‌ ದಾಳಿಯೇನಾದರೂ ನಡೆಸುವುದಿದ್ದರೆ ಕುಲದೀಪ್‌ ಯಾದವ್‌ ಬಂದಾರು.

ಅಪಾಯಕಾರಿ ವಿಂಡೀಸ್‌
ಒಂದು ಪಂದ್ಯದಲ್ಲಿ 170 ರನ್ನಿಗೆ ಕುಸಿದು ಸೋತಿತು ಅಂದಮಾತ್ರಕ್ಕೆ ವೆಸ್ಟ್‌ ಇಂಡೀಸನ್ನು ಯಾವ ಕಾರಣಕ್ಕೂ ಕಡೆಗಣಿಸಬಾರದು. ಇದೊಂದು ಅತ್ಯಂತ ಅಪಾಯಕಾರಿ ತಂಡ. ಮುಂದಿನ ಪಂದ್ಯದಲ್ಲೇ ಇದರ ಎರಡರಷ್ಟು ರನ್‌ ಪೇರಿಸುವ ಸಾಮರ್ಥ್ಯವನ್ನು ಈ ತಂಡ ಹೊಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next