Advertisement
ಮೊದಲ ಪಂದ್ಯದಲ್ಲಿ ಆತಿಥೇಯ ಲಂಕೆಗೆ ಸೋತ ಭಾರತ, ಬಳಿಕ ಬಾಂಗ್ಲಾದೇಶವನ್ನು ಮಣಿಸಿ ಗೆಲುವಿನ ಲಯಕ್ಕೆ ಮರಳಿದ ಉಮೇದಿನಲ್ಲಿದೆ. ಇನ್ನೊಂದೆಡೆ ಶನಿವಾರ ಬಾಂಗ್ಲಾದೇಶ ವಿರುದ್ಧ 214 ರನ್ ಪೇರಿಸಿಯೂ ಸೋಲನುಭವಿಸಿದ ಸಂಕಟ ಲಂಕೆಯದ್ದಾಗಿದೆ. ಹೀಗಾಗಿ ದ್ವಿತೀಯ ಸುತ್ತಿನಲ್ಲಿ ಗೆಲುವಿನ ಆರಂಭ ಪಡೆದ ತಂಡಕ್ಕೆ ಫೈನಲ್ ಬಹುತೇಕ ಖಚಿತ.
ಟಿ-ಟ್ವೆಂಟಿಯಲ್ಲಿ ಯಾವುದೇ ತಂಡವನ್ನು ಫೇವರಿಟ್ ಎಂದು ಪರಿಗಣಿಸುವ ಹಾಗಿಲ್ಲ. ಆದ್ದರಿಂದ ಮೊದಲ ಸುತ್ತಿನ ಫಲಿತಾಂಶವನ್ನೆಲ್ಲ ಮರೆತು ಹೋರಾಟಕ್ಕೆ ಇಳಿಯುವುದೇ ಬುದ್ಧಿವಂತಿಕೆ ಎನ್ನಬಹುದು. ಆದರೂ ಹಿಂದಿನ ಸಲ ಮಾಡಿದ ತಪ್ಪುಗಳು, ಆಟಗಾರರ ಕಳಪೆ ಫಾರ್ಮ್, ವಿಫಲ ಕಾರ್ಯತಂತ್ರಗಳೆಲ್ಲ ಪ್ರತಿಯೊಂದು ತಂಡಕ್ಕೂ ಹೊಸ ಸವಾಲಾಗಿ ಪರಿಣಮಿಸುವುದು ಸುಳ್ಳಲ್ಲ. ಭಾರತದ ಮಟ್ಟಿಗೆ ಹೇಳುವುದಾದರೆ ಉಸ್ತುವಾರಿ ನಾಯಕ ರೋಹಿತ್ ಶರ್ಮ ಅವರ ಕೈಕೊಟ್ಟ ಫಾರ್ಮ್, ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಎಂದೇ ಪರಿಗಣಿಸಲ್ಪಟ್ಟಿರುವ ರಿಷಬ್ ಪಂತ್ ಅವರ ವೈಫಲ್ಯ ಹೆಚ್ಚು ಚಿಂತಿಸುವಂತೆ ಮಾಡಿದೆ. ರೋಹಿತ್ ಶರ್ಮ ಅವರ ಫಾರ್ಮ್ ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೇ ಕೈಕೊಟ್ಟಿತ್ತು. ಏಕದಿನದಲ್ಲಿ ಒಂದು ಶತಕ ಬಾರಿಸಿದ್ದನ್ನು ಬಿಟ್ಟರೆ ರೋಹಿತ್ ಗಳಿಕೆ ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ. ಇದು ಶ್ರೀಲಂಕಾದಲ್ಲೂ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಹೋದ ರೋಹಿತ್, ಬಾಂಗ್ಲಾ ವಿರುದ್ಧ 17 ರನ್ ಮಾಡಿ ನಿರ್ಗಮಿಸಿದರು. ಕಳೆದ 5 ಟಿ20 ಪಂದ್ಯಗಳಲ್ಲಿ ರೋಹಿತ್ ಗಳಿಕೆ ಹೀಗೆ ಸಾಗುತ್ತದೆ: 21, 0, 11, 0 ಮತ್ತು 17 ರನ್.
Related Articles
ಇನ್ನೊಂದೆಡೆ ಪಂತ್ ಲಂಕಾ ವಿರುದ್ಧ ಎಸೆತಕ್ಕೊಂದರಂತೆ 23 ರನ್ ಮಾಡಿ ತೀವ್ರ ಟೀಕೆಗೆ ಗುರಿಯಾದರು. ಬಾಂಗ್ಲಾ ಎದುರು ಏಳರ ಗಡಿ ದಾಟಲಿಲ್ಲ. ಹೀಗಾಗಿ ರೋಹಿತ್ ತಮ್ಮ ಆರಂಭಿಕನ ಸ್ಥಾನವನ್ನು ಕೆ.ಎಲ್. ರಾಹುಲ್‌ಗೆ ಬಿಟ್ಟುಕೊಟ್ಟು, ತಾನು 4ನೇ ಕ್ರಮಾಂಕದಲ್ಲಿ ಆಡಲಿಳಿಯುವ ಸಾಧ್ಯತೆಯೊಂದಿದೆ. ಆಗ ಪಂತ್ ಅವರನ್ನು ಹೊರಗುಳಿಸಬೇಕಾಗುತ್ತದೆ.
Advertisement
ಭಾರತದ ಬ್ಯಾಟಿಂಗ್ ಸರದಿಯಲ್ಲಿ ಎಡಗೈ ಆರಂಭಕಾರ ಶಿಖರ್ ಧವನ್ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ಧವನ್ 72, 24, 47, 90 ಮತ್ತು 55 ರನ್ ಬಾರಿಸಿ ಅಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. ವಿರಾಟ್ ಕೊಹ್ಲಿ ಗೈರಲ್ಲಿ ಧವನ್ ಅವರ ಈ ಚೇತೋಹಾರಿ ಪ್ರದರ್ಶನ ಭಾರತಕ್ಕೂ ಅನಿವಾರ್ಯ. ಉಳಿದಂತೆ ಮನೀಷ್ ಪಾಂಡೆ ಅವರದು ಪರಾÌಗಿಲ್ಲ ಎಂಬಂಥ ಆಟ (37, 27 ರನ್). ಆದರೆ ಸುರೇಶ್ ರೈನಾ, ದಿನೇಶ್ ಕಾರ್ತಿಕ್ ತಂಡದ ಮಧ್ಯಮ ಸರದಿಗೆ ಶಕ್ತಿ ತುಂಬುವಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಅಂದಹಾಗೆ ಟಿ20 ಪಂದ್ಯದ ಚಿತ್ರಣವನ್ನು ಬದಲಿಸಲು ಕೇವಲ ಒಬ್ಬ ಬ್ಯಾಟ್ಸ್‌ಮನ್ ಸಾಕು. ನಿಗದಿತ ದಿನದಂದು ಯಾರೂ ಸಿಡಿದು ನಿಲ್ಲಬಹುದು!
ಭಾರತದ ಬೌಲಿಂಗ್ ವಿಭಾಗ ಸಾಮಾನ್ಯ ಎಂಬಂತಿದ್ದರೂ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಹಿಡಿದ ನಿಲ್ಲಿಸಿದ ರೀತಿ ಪ್ರಶಂಸನೀಯ. ಶನಿವಾರ ಲಂಕಾ ದಾಳಿಯನ್ನು ಬಾಂಗ್ಲಾ ಪುಡಿಗುಟ್ಟಿ 215 ರನ್ ಬೆನ್ನಟ್ಟುವಲ್ಲಿ ಯಶಸ್ವಿಯಾದುದನ್ನು ಕಂಡಾಗ ಭಾರತದ ಬೌಲಿಂಗಿಗೆ ಹೆಚ್ಚುವರಿ ಅಂಕ ಮೀಸಲಿಡಬೇಕಾಗುತ್ತದೆ. 4 ವಿಕೆಟ್ ಉರುಳಿಸಿರುವ ಎಡಗೈ ಪೇಸರ್ ಜೈದೇವ್ ಉನಾದ್ಕತ್ ರನ್ ನಿಯಂತ್ರಣ ಸಾಧಿಸಿದಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿ ಆಗಬಲ್ಲರು. ವಾಷಿಂಗ್ಟನ್ ಸುಂದರ್, ವಿಜಯ್ ಶಂಕರ್ ಅನುಭವಕ್ಕೆ ತಕ್ಕಂತಿದ್ದಾರೆ. ಚಾಹಲ್ ಮ್ಯಾಜಿಕ್ ಮಾಡಬೇಕಿದೆ.
ಲಂಕಾ ಮೇಲೆ ಒತ್ತಡಭಾರತವನ್ನು ಮೊದಲ ಪಂದ್ಯದಲ್ಲಿ ಹಿಂದಿಕ್ಕಿದರೂ ಶನಿವಾರ ರಾತ್ರಿ ಬಾಂಗ್ಲಾದೇಶ ವಿರುದ್ಧ 214 ರನ್ ಪೇರಿಸಿಯೂ ಪಂದ್ಯವನ್ನು ಉಳಿಸಿಕೊಳ್ಳಲಾಗದಿದ್ದುದು ಶ್ರೀಲಂಕಾಕ್ಕೆ ಎದುರಾಗಿರುವ ಭಾರೀ ಹಿನ್ನಡೆ ಎಂದೇ ಹೇಳಬೇಕಾಗುತ್ತದೆ. ಇದು ಲಂಕೆಯ ಬೌಲಿಂಗ್ ವೈಫಲ್ಯವನ್ನು ತೆರೆದಿಟ್ಟಿದೆ. ಈವರೆಗೆ 165ಕ್ಕಿಂತ ಹೆಚ್ಚು ರನ್ನನ್ನು ಬೆನ್ನಟ್ಟದ ಬಾಂಗ್ಲಾದೇಶ 5 ವಿಕೆಟಿಗೆ 215 ರನ್ ಪೇರಿಸಿ ಗೆದ್ದದ್ದು ಅಸಾಮಾನ್ಯ ಸಾಧನೆಯೇ ಆಗಿದೆ. ಬಾಂಗ್ಲಾದ ಈ ಬ್ಯಾಟಿಂಗ್ ಅಬ್ಬರ ಭಾರತಕ್ಕೆ ಸ್ಫೂರ್ತಿಯಾಗಬೇಕಿದೆ! ಶ್ರೀಲಂಕಾ ಬ್ಯಾಟಿಂಗ್ ಲೈನ್‌ಅಪ್ ಭಾರತಕ್ಕಿಂತ ಹೆಚ್ಚು ಬಲಿಷ್ಠ. “ಕುಸಲ’ದ್ವಯರು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅಗ್ರ ಕ್ರಮಾಂಕದ ಈ ಇಬ್ಬರನ್ನು ನಿಯಂತ್ರಿಸಿದರೆ ಭಾರತದ ಯೋಜನೆ ಅರ್ಧ ಯಶಸ್ವಿಯಾದಂತೆ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ರಿಷಬ್ ಪಂತ್/ಕೆ.ಎಲ್. ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್, ಶಾದೂìಲ್ ಠಾಕೂರ್, ಜೈದೇವ್ ಉನಾದ್ಕತ್, ಯಜುವೇಂದ್ರ ಚಾಹಲ್. ಶ್ರೀಲಂಕಾ: ದನುಷ್ಕ ಗುಣತಿಲಕ, ಕುಸಲ್ ಮೆಂಡಿಸ್, ಕುಸಲ್ ಪೆರೆರ, ದಸುನ್ ಶಣಕ, ದಿನೇಶ್ ಚಂಡಿಮಾಲ್ (ನಾಯಕ), ಉಪುಲ್ ತರಂಗ, ತಿಸರ ಪೆರೆರ, ಜೀವನ್ ಮೆಂಡಿಸ್, ಅಖೀಲ ಧನಂಜಯ, ದುಷ್ಮಂತ ಚಮೀರ, ನುವಾನ್ ಪ್ರದೀಪ್. ಆರಂಭ: ಸಂಜೆ 7.00
ಪ್ರಸಾರ: ಡಿ ನ್ಪೋರ್ಟ್ ಟಿ20 ತ್ರಿಕೋನ ಸರಣಿ ಅಂಕಪಟ್ಟಿ
ತಂಡ ಪಂದ್ಯ ಗೆಲುವು ಸೋಲು ಅಂಕ ರನ್‌ರೇಟ್
ಶ್ರೀಲಂಕಾ 2 1 1 2 0.297
ಭಾರತ 2 1 1 2 -0.035
ಬಾಂಗ್ಲಾದೇಶ 2 1 1 2 -0.231