Advertisement

ಭಾರತ-ದಕ್ಷಿಣ ಆಫ್ರಿಕಾ ಫೈನಲ್‌ ಮುಖಾಮುಖೀ

12:22 AM Jun 15, 2019 | Sriram |

ಭುವನೇಶ್ವರ್‌: ಅಮೋಘ ಆಟದ ಪ್ರದರ್ಶನ ನೀಡಿದ ಭಾರತೀಯರು ಹಾಲಿ ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಜಪಾನ್‌ ತಂಡವನ್ನು 7-2 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿ ಎಫ್ಐಎಚ್‌ ಹಾಕಿ ಸೀರೀಸ್‌ನ ಫೈನಲ್‌ ಹಂತಕ್ಕೇರಿತಲ್ಲದೇ ವರ್ಷಾಂತ್ಯದ ಒಲಿಂಪಿಕ್‌ ಅರ್ಹತಾ ಕೂಟದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿತು.

Advertisement

ಗಾಯದಿಂದಾಗಿ ದೀರ್ಘ‌ ಸಮಯದ ಬಳಿಕ ತಂಡಕ್ಕೆ ಮರಳಿದ ರಮಣ್‌ದೀಪ್‌ ಸಿಂಗ್‌ ಅವಳಿ ಗೋಲು ಹೊಡೆದು ಸಂಭ್ರಮಿಸಿದರೆ ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಹಾರ್ದಿಕ್‌ ಸಿಂಗ್‌, ಗುರುಸಹಿಬ್ಜಿತ್‌ ಸಿಂಗ್‌ ಮತ್ತು ವಿವೇಕ್‌ ಸಾಗರ್‌ ಪ್ರಸಾದ್‌ ತಲಾ ಒಂದೊಂದು ಗೋಲು ಹೊಡೆದು ಭಾರತದ ಬೃಹತ್‌ ಗೆಲುವಿಗೆ ಕಾರಣರಾದರು.
ಶನಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ದಿನದ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಅಮೆರಿಕ ತಂಡವನ್ನು 2-1 ಗೋಲುಗಳಿಂದ ಸೋಲಿಸಿದೆ. ಜಪಾನ್‌ ಮತ್ತು ಅಮೆರಿಕ ಮೂರನೇ ಸ್ಥಾನಕ್ಕಾಗಿ ಕಾದಾಡಲಿದೆ.

ಈ ಕೂಟದಲ್ಲಿ ಮೊದಲ ಬಾರಿಗೆ ಭಾರತದ ರಕ್ಷಣಾ ಆಟಗಾರರು ಆರಂಭದಲ್ಲಿ ಪ್ರಬಲ ಸವಾಲನ್ನು ಎದುರಿಸಿದರು. ಪಂದ್ಯ ಆರಂಭವಾಗಿ ಎರಡನೇ ನಿಮಿಷದಲ್ಲಿ ಜಪಾನ್‌ ಗೋಲು ಹೊಡೆದಾಗ ಭಾರತ ಆಘಾತಗೊಂಡಿತು. ಕೆಂಜಿ ಕಿಟಜಾಟೊ ಮೊದಲ ಗೋಲು ಹೊಡೆದರು. ವರುಣ್‌ ಕುಮಾರ್‌ 14ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲ ಸಾಧಿಸಿದರು.

20ನೇ ನಿಮಿಷದಲ್ಲಿ ಕೋಟ ವಟನಾಬೆ ಇನ್ನೊಂದು ಗೋಲು ಹೊಡೆದು ಜಪಾನ್‌ಗೆ ಮುನ್ನಡೆ ಒದಗಿಸಿದರು. ಮುಂದಿನ ಐದನೇ ನಿಮಿಷದಲ್ಲಿ ಹಾರ್ದಿಕ್‌ ಅದ್ಭುತ ಗೋಲು ಹೊಡೆದು ಮತ್ತೆ ಸಮಬಲಗೊಳಿಸಿದರು. ಇಲ್ಲಿಂದ ಭಾರತದ ದಿಗ್ವಿಜಯ ಆರಂಭಗೊಂಡಿತು. ಒಂದು ಕಡೆಯಿಂದ ಗೋಲ್‌ಕೀಪರ್‌ ಶ್ರೀಜೇಶ್‌ ಅಮೋಘ ನಿರ್ವಹಣೆ ನೀಡಿ ಜಪಾನ್‌ಗೆ ಗೋಲು ನಿರಾಕರಿಸಿದರು. ಇನ್ನೊಂದಡೆ ಭಾರತೀಯರು ಬೆನ್ನುಬೆನ್ನಿಗೆ ಗೋಲು ಸಿಡಿಸಿ ಮುನ್ನಡೆಯನ್ನು ವಿಸ್ತರಿಸುತ್ತ ಹೋದರು. ಆಟ ಮುಗಿದಾಗ ಭಾರತ 7-2 ಮುನ್ನಡೆ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next