Advertisement

ಎಲ್ಲ ವಿಭಾಗದಲ್ಲೂ ಮಿಂಚಿದರೆ ಒಲಿದೀತು ರಾಂಚಿ; ಇಂದು ದ್ವಿತೀಯ ಏಕದಿನ

11:03 PM Oct 08, 2022 | Team Udayavani |

ರಾಂಚಿ: ಲಕ್ನೋದಲ್ಲಿ ಅದೃಷ್ಟವಂಚಿತ ಭಾರತವೀಗ ಧೋನಿ ನಾಡಾದ ರಾಂಚಿಯಲ್ಲಿ ಸರಣಿ ಸಮಬಲದ ಒತ್ತಡದೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಟಕ್ಕಿಳಿಯಲಿದೆ.

Advertisement

ರವಿವಾರ ಇಲ್ಲಿ ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಶಿಖರ್‌ ಧವನ್‌ ಬಳಗ ಇದನ್ನು ಗೆದ್ದರಷ್ಟೇ ಸರಣಿ ಸಮಬಲಕ್ಕೆ ಬರಲಿದೆ. ಇಲ್ಲವಾದರೆ ಹರಿಣಗಳ ಪಡೆ ಟಿ20 ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡು ಸಂಭ್ರಮಿಸಲಿದೆ.

ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿ ರುವ ದಕ್ಷಿಣ ಆಫ್ರಿಕಾಕ್ಕೆ ಭಾರತದ ದ್ವಿತೀಯ ದರ್ಜೆಯ ತಂಡವನ್ನು ಸೋಲಿಸಿ ಸರಣಿ ವಶಪಡಿಸಿಕೊಳ್ಳುವುದು ಸಮಸ್ಯೆಯೇ ಅಲ್ಲ. ಅದು ಎಲ್ಲ ವಿಭಾಗಗಳಲ್ಲೂ ಟೀಮ್‌ ಇಂಡಿಯಾಗಿಂತ ಮಿಗಿಲಾಗಿದೆ.

ಅಗ್ರ ಕ್ರಮಾಂಕದ ವೈಫಲ್ಯ
ಲಕ್ನೋದಲ್ಲಿ 40 ಓವರ್‌ಗಳಲ್ಲಿ 250 ರನ್‌ ತೆಗೆಯುವ ಕಠಿನ ಸವಾಲು ಭಾರತಕ್ಕೆ ಎದುರಾಗಿತ್ತು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ, ಅದರಲ್ಲೂ ನಿಧಾನ ಗತಿಯ ಬ್ಯಾಟಿಂಗ್‌ ಭಾರತಕ್ಕೆ ಕಂಟಕವಾಗಿ ಕಾಡಿತು. ಧವನ್‌, ಗಿಲ್‌, ಗಾಯಕ್ವಾಡ್‌, ಇಶಾನ್‌ ಕಿಶನ್‌ ಆರಂಭದಲ್ಲಿ ಉತ್ತಮ ಅಡಿಪಾಯ ನಿರ್ಮಿಸಿದ್ದೇ ಆದರೆ ಪಂದ್ಯ ನಮ್ಮದಾಗುತ್ತಿತ್ತು. ಇದಕ್ಕೆ ಶ್ರೇಯಸ್‌ ಅಯ್ಯರ್‌, ಶಾರ್ದೂಲ್ ಠಾಕೂರ್, ಕೊನೆಯಲ್ಲಿ ಸಂಜು ಸ್ಯಾಮ್ಸನ್‌ ಸಿಡಿದು ನಿಂತದ್ದೇ ಸಾಕ್ಷಿ. ಸ್ಯಾಮ್ಸನ್‌ ಹೇಳಿದಂತೆ, ಎರಡೇ ಶಾಟ್‌ಗಳಿಂದ ಗೆಲುವು ದೂರವೇ ಉಳಿಯಿತು.

ಬೌಲಿಂಗ್‌ ಕೂಡ ದುರ್ಬಲ
ಭಾರತದ ಬೌಲಿಂಗ್‌ ವಿಭಾಗ ಕೂಡ ದುರ್ಬಲ. ಅದರಲ್ಲೂ ರಾಂಚಿಯಲ್ಲಿ ಆಡುವ ಎಲ್ಲ ಸಾಧ್ಯತೆ ಹೊಂದಿದ್ದ ಸೀಮರ್‌ ದೀಪಕ್‌ ಚಹರ್‌ ಗಾಯಾಳಾಗಿ ಹೊರಗುಳಿದದ್ದು ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ. ಮೊಹಮ್ಮದ್‌ ಸಿರಾಜ್‌, ಆವೇಶ್‌ ಖಾನ್‌ ಅವರಿಗೆ ಹರಿಣಗಳ ಅಬ್ಬರವನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಬಂಗಾಲದ ಪೇಸರ್‌ ಮುಕೇಶ್‌ ಕುಮಾರ್‌ ರಾಂಚಿಯಲ್ಲಿ ಒನ್‌ಡೇ ಕ್ಯಾಪ್‌ ಧರಿಸುವ ಸಾಧ್ಯತೆ ಇದೆ. ಆಲ್‌ರೌಂಡರ್‌ ಶಾಬಾಜ್‌ ಅಹ್ಮದ್‌ ಕೂಡ ರೇಸ್‌ನಲ್ಲಿದ್ದಾರೆ.

Advertisement

ನಾಯಕ ಬವುಮ ಬರಗಾಲ
ದಕ್ಷಿಣ ಆಫ್ರಿಕಾ ತಂಡದ ಏಕೈಕ ಸಮಸ್ಯೆಯೆಂದರೆ ನಾಯಕ ಟೆಂಬ ಬವುಮ ಅವರ ಬ್ಯಾಟಿಂಗ್‌ ಫಾರ್ಮ್. ಟಿ20 ಸರಣಿಯಲ್ಲಿ ಅವಳಿ ಸೊನ್ನೆ ಬಳಿಕ 3 ರನ್‌, ಮೊದಲ ಏಕದಿನದಲ್ಲಿ 8 ರನ್‌ ಮಾಡಿದ್ದಷ್ಟೇ ಬವುಮ ಸಾಧನೆ. ಆದರೆ ಕಪ್ತಾನನ ವೈಫಲ್ಯವನ್ನು ಹೋಗಲಾಡಿಸಲು ಹರಿಣಗಳ ಸರದಿಯಲ್ಲಿ ಬಿಗ್‌ ಗನ್ಸ್‌ ಇರುವುದೊಂದು ಹೆಚ್ಚುಗಾರಿಕೆ. ಮಲಾನ್‌, ಡಿ ಕಾಕ್‌, ಮಿಲ್ಲರ್‌, ಕ್ಲಾಸೆನ್‌… ಹೀಗೆ ಇನ್ನಿಂಗ್ಸ್‌ ಬೆಳೆಸಬಲ್ಲ ಆಟಗಾರರ ದೊಡ್ಡ ಸಾಲೇ ಇದೆ.

ಚಹರ್‌ ಬದಲು ವಾಷಿಂಗ್ಟನ್‌ ಸುಂದರ್‌
ರಾಂಚಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಇನ್ನುಳಿದ ಎರಡು ಏಕದಿನ ಪಂದ್ಯಗಳಿಗಾಗಿ ಗಾಯಗೊಂಡಿರುವ ದೀಪಕ್‌ ಚಹರ್‌ ಬದಲಿಗೆ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ದೀಪಕ್‌ ಚಹರ್‌ ಪಾದದ ನೋವಿಗೆ ಒಳಗಾಗಿದ್ದರು. ಇದರಿಂದಾಗಿ ಅವರು ಲಕ್ನೋದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆಟವಾಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರ ಬದಲಿಗೆ ವಾಷಿಂಗ್ಟನ್‌ ಸುಂದರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಸೀನಿಯರ್‌ ಆಯ್ಕೆ ಸಮಿತಿ ತಿಳಿಸಿದೆ. ಸುಂದರ್‌ ಈ ಹಿಂದೆ ಫೆಬ್ರವರಿಯಲ್ಲಿ ಏಕದಿನ ಪಂದ್ಯವೊಂದನ್ನು ಆಡಿದ್ದರು.

ಉಭಯ ತಂಡಗಳು
ಭಾರತ:
ಶಿಖರ್‌ ಧವನ್‌ (ನಾಯಕ), ಶುಭ್‌ಮನ್‌ ಗಿಲ್‌, ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ಶಾರ್ದೂಲ್ ಠಾಕೂರ್, ಕುಲದೀಪ್‌ ಯಾದವ್‌, ಆವೇಶ್‌ ಖಾನ್‌, ರವಿ ಬಿಷ್ಣೋಯಿ, ಮೊಹಮ್ಮದ್‌ ಸಿರಾಜ್‌, ದೀಪಕ್‌ ಚಹರ್‌, ಮುಕೇಶ್‌ ಕುಮಾರ್‌, ರಜತ್‌ ಪಾಟೀದಾರ್‌, ಶಾಬಾಜ್‌ ಅಹ್ಮದ್‌ ಮತ್ತು ರಾಹುಲ್‌ ತ್ರಿಪಾಠಿ

ದಕ್ಷಿಣ ಆಫ್ರಿಕಾ:
ಟೆಂಬ ಬವುಮಾ (ನಾಯಕ), ಜನ್ನೆಮಾನ್‌ ಮಾಲನ್‌, ಕ್ವಿಂಟನ್‌ ಡಿ ಕಾಕ್‌, ಐಡೆನ್‌ ಮಾರ್ಕ್‌ರಮ್‌, ಹೆನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ವೇಯ್ನ ಪಾರ್ನೆಲ್‌, ಕೇಶವ್‌ ಮಹಾರಾಜ್‌, ಕಾಗಿಸೊ ರಬಾಡ, ಲುಂಗಿ ಎನ್‌ಗಿಡಿ, ಟಬ್ರೈಜ್‌, ರೀಜ ಹೆಂಡ್ರಿಕ್ಸ್‌, ಮಾರ್ಕೊ ಜಾನ್ಸೆನ್‌, ಆ್ಯನ್ರಿಚ್‌ ನೋರ್ಜೆ, ಆ್ಯಂಡಿಲ್‌ ಪೆಹ್ಲುಕ್ವಾಯೊ.

ರಾಂಚಿ ಏಕದಿನ ಫಲಿತಾಂಶ
ವರ್ಷ ಫಲಿತಾಂಶ
2013 ಇಂಗ್ಲೆಂಡ್‌ ವಿರುದ್ಧ 7 ವಿಕೆಟ್‌ ಜಯ
2013 ಆಸ್ಟ್ರೇಲಿಯ ವಿರುದ್ಧದ ಪಂದ್ಯ ರದ್ದು
2014 ಶ್ರೀಲಂಕಾ ವಿರುದ್ಧ 3 ವಿಕೆಟ್‌ ಜಯ
2016 ನ್ಯೂಜಿಲ್ಯಾಂಡ್‌ ವಿರುದ್ಧ 19 ರನ್‌ ಸೋಲು
2019 ಆಸ್ಟ್ರೇಲಿಯ ವಿರುದ್ಧ 32 ರನ್‌ ಸೋಲು

– ಆರಂಭ: 1.30
-ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

Advertisement

Udayavani is now on Telegram. Click here to join our channel and stay updated with the latest news.

Next