Advertisement
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಆಡಿದ 4 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಜಯಿಸಿದೆ. ಅದೂ ಸಾಮಾನ್ಯ ತಂಡಗಳೆದುರು. ಪಾಕಿಸ್ಥಾನ ವಿರುದ್ಧ 3 ವಿಕೆಟ್‌ಗಳಿಂದ, ವೆಸ್ಟ್ ಇಂಡೀಸ್ ವಿರುದ್ಧ 10 ವಿಕೆಟ್‌ಗಳಿಂದ ಗೆದ್ದಿತ್ತು. ನ್ಯೂಜಿಲ್ಯಾಂಡ್ ಎದುರಿನ ಪಂದ್ಯ ಭಾರೀ ಮಳೆಯಿಂದ ರದ್ದುಗೊಂಡಿತ್ತು. ಇಂಗ್ಲೆಂಡ್ ವಿರುದ್ಧದ ಮುನ್ನೂರರ ಮೇಲಾಟದಲ್ಲಿ 68 ರನ್ ಸೋಲನುಭವಿಸಿತ್ತು. ಈ ಸೋಲು ಭಾರತದೆದುರಿನ ಪಂದ್ಯದ ವೇಳೆ ಹರಿಣಗಳನ್ನು ಮಾನಸಿಕವಾಗಿ ಕಾಡಲೂಬಹುದು.
ಭಾರತ ತಂಡ ಆತಿಥೇಯ ಇಂಗ್ಲೆಂಡನ್ನೇ ಸದೆಬಡಿದು ಶುಭಾರಂಭ ಮಾಡಿತ್ತು. ಬಳಿಕ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ಥಾನವನ್ನು ಅಧಿಕಾರಯುತವಾಗಿ ಬಗ್ಗುಬಡಿಯಿತು. ಶ್ರೀಲಂಕಾ ತುಸು ಪ್ರತಿರೋಧ ಒಡ್ಡಿದರೂ ಮಿಥಾಲಿ ಪಡೆ ಇದನ್ನು ಯಶಸ್ವಿಯಾಗಿಯೇ ನಿಭಾಯಿಸಿತು. ಹೀಗೆ, ಭಾರತದ ಈವರೆಗಿನ ಪಯಣ ಗೆಲುವಿನಿನ ಪಥದಲ್ಲೇ ಸಾಗಿದೆ. ಆದರೆ ಮುಂದಿನ ಸವಾಲು ಅಷ್ಟು ಸುಲಭದ್ದಲ್ಲ.
Related Articles
Advertisement
ಈಗಿನ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯ, ಭಾರತ ಮತ್ತು ಇಂಗ್ಲೆಂಡ್ ತಂಡಗಳ ಸೆಮಿಫೈನಲ್ ಖಚಿತ. ಹಾಗೆಯೇ ಪಾಕಿಸ್ಥಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಕೂಟದಿಂದ ಗಂಟುಮೂಟೆ ಕಟ್ಟುವುದೂ ಖಾತ್ರಿ. ಆಗ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಒಂದು ಸೆಮಿಫೈನಲ್ ಸ್ಥಾನಕ್ಕೆ ತೀವ್ರ ಸ್ಪರ್ಧೆ ಎದುರಾಗಬಹುದು. ಎರಡೂ ಸಮಬಲ ಸಾಧನೆಯೊಂದಿಗೆ 5 ಅಂಕಗಳನ್ನು ಹೊಂದಿವೆ. ರನ್‌ರೇಟ್‌ನಲ್ಲಿ ಕಿವೀಸ್ ಸ್ವಲ್ಪ ಮುಂದಿದೆ. ಹೀಗಾಗಿ ಭಾರತದೆದುರಿನ ಪಂದ್ಯ ದಕ್ಷಿಣ ಆಫ್ರಿಕಾಕ್ಕೆ ಹೆಚ್ಚು ಮಹತ್ವದ್ದಾಗಿದೆ. ದಿನದ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡ್-ಪಾಕಿಸ್ಥಾನ ಎದುರಾಗಲಿವೆ. ಇಲ್ಲಿ ಕಿವೀಸ್ ನೆಚ್ಚಿನ ತಂಡವಾಗಿರುವುದೂ ಹರಿಣಗಳ ಒತ್ತಡವನ್ನು ಹೆಚ್ಚಿಸಿದೆ.
ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡೂ ಬಲಿಷ್ಠ. ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಕೊನೆಯ 2 ಪಂದ್ಯಗಳಲ್ಲಿ ವಿಫಲರಾದರೂ ದೀಪ್ತಿ ಶರ್ಮ, ಮಿಥಾಲಿ ರಾಜ್ ಸೇರಿಕೊಂಡು ಪರಿಸ್ಥಿತಿಯನ್ನು ಸಮರ್ಥ ರೀತಿಯಲ್ಲೇ ನಿಭಾಯಿಸಿದ್ದಾರೆ. ಮಧ್ಯಮ-ಕೆಳ ಕ್ರಮಾಂಕದಲ್ಲಿ ವೇದಾ ಕೃಷ್ಣಮೂರ್ತಿ, ಹರ್ಮನ್‌ಪ್ರೀತ್ ಕೌರ್ ತಂಡದ ನೆರವಿಗೆ ನಿಲ್ಲಬಲ್ಲರು. ಬೌಲಿಂಗ್ ವಿಭಾಗ ಏಕ್ತಾ ಬಿಷ್ಟ್, ಪೂನಂ ಯಾದವ್, ಜೂಲನ್ ಗೋಸ್ವಾಮಿ ಅವರನ್ನು ನೆಚ್ಚಿಕೊಂಡಿದೆ.
ನಿಯಂತ್ರಿತ ಬೌಲಿಂಗ್; ನೀಕರ್ಕ್ವೆಸ್ಟ್ ಇಂಡೀಸನ್ನು 48 ರನ್ನಿಗೆ ಉಡಾಯಿಸಿದ ಬಳಿಕ ಹರಿಣಗಳ ಬೌಲಿಂಗ್ ಇಂಗ್ಲೆಂಡ್ ವಿರುದ್ಧ ಹಳಿ ತಪ್ಪಿತ್ತು. ಅಲ್ಲಿ 373 ರನ್ ಸೋರಿ ಹೋಗಿತ್ತು. ಇನ್ನು ಇಂಥ ಧಾರಾಳತನಕ್ಕೆ ಅವಕಾಶ ಇಲ್ಲ ಎಂದಿದ್ದಾರೆ ನಾಯಕಿ ಡೇನ್ ವಾನ್ ನೀಕರ್ಕ್.