Advertisement

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

09:37 PM Jan 20, 2022 | Team Udayavani |

ಪಾರ್ಲ್: ಮಿಡ್ಲ್ ಆರ್ಡರ್‌ ಬ್ಯಾಟಿಂಗ್‌ನಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಾಣಬೇಕಾದ ಒತ್ತಡದೊಂದಿಗೆ ಭಾರತ ತಂಡ ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನು ಆಡಲಿಳಿಯಲಿದೆ. ಈ ಪಂದ್ಯ ಕೂಡ ಪಾರ್ಲ್ನ ಬೋಲ್ಯಾಂಡ್‌ ಪಾರ್ಕ್‌’ನಲ್ಲೇ ನಡೆಯಲಿದೆ.

Advertisement

ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಘೋರ ವೈಫ‌ಲ್ಯ ಅನುಭವಿಸಿದ ಭಾರತ 31 ರನ್ನುಗಳ ಸೋಲಿಗೆ ತುತ್ತಾಗಿತ್ತು. ಈ ಅಂತರ ಇನ್ನೂ ಹೆಚ್ಚುವ ಸಾಧ್ಯತೆ ಇತ್ತು. ಆದರೆ ಕೊನೆಯ ಹಂತದಲ್ಲಿ ಶಾದೂìಲ್‌ ಠಾಕೂರ್‌ ತಿರುಗಿ ಬಿದ್ದು ತಮ್ಮ ಮೊದಲ ಏಕದಿನ ಅರ್ಧ ಶತಕ ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ಠಾಕೂರ್‌ ಮೈಚಳಿ ಬಿಟ್ಟು ಆಡುವಾಗ ಉಳಿದ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳಿಗೆ ಇದೇಕೆ ಸಾಧ್ಯವಾಗದು ಎಂಬುದು ಇಲ್ಲಿನ ಪ್ರಶ್ನೆ.

ಪಾರ್ಲ್ ಟ್ರ್ಯಾಕ್‌ ಬೌಲಿಂಗಿಗೆ ವಿಶೇಷ ನೆರವನ್ನೇನೂ ನೀಡುತ್ತಿರಲಿಲ್ಲ. ಹೊತ್ತೇರಿದಂತೆ ಇದು “ಬ್ಯಾಟಿಂಗ್‌ ಫೇವರ್‌’ ಆಗಿ ಪರಿವರ್ತನೆಗೊಂಡಿತ್ತು. ಶಿಖರ್‌ ಧವನ್‌-ವಿರಾಟ್‌ ಕೊಹ್ಲಿ ಸಲೀಸಾಗಿ ಬ್ಯಾಟ್‌ ಬೀಸುತ್ತಿದ್ದುದನ್ನು ಕಂಡಾಗ ಭಾರತದ ಗೆಲುವಿನ ಬಗ್ಗೆ ಅನುಮಾನವಿರಲಿಲ್ಲ. ಆದರೆ ಕೊಹ್ಲಿ ಕಾಲದಿಂದಲೂ ಕಾಡುತ್ತಿದ್ದ ಮಧ್ಯಮ ಕ್ರಮಾಂಕದ ವೈಫ‌ಲ್ಯ ಮತ್ತೆ ಎದುರಾದುದೊಂದು ದುರಂತ. ಇಲ್ಲಿ ಪರಿಹಾರ ಕಂಡುಕೊಳ್ಳದ ಹೊರತು ವಿಶ್ವಕಪ್‌ಗೆ ಸಶಕ್ತ ತಂಡವನ್ನು ಕಟ್ಟಲು ಭಾರತದಿಂದಾಗದು ಎಂಬುದಕ್ಕೆ ಬುಧವಾರದ ಮುಖಾಮುಖೀಯೇ ಸಾಕ್ಷಿ.

ಭಾರತದ ಮಧ್ಯಮ ಕ್ರಮಾಂಕ ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಮತ್ತು ವೆಂಕಟೇಶ್‌ ಅಯ್ಯರ್‌ ಅವರನ್ನು ನಂಬಿಕೊಂಡಿತ್ತು. ಈ ಮೂವರಿಂದ ಒಟ್ಟುಗೂಡಿದ್ದು 35 ರನ್‌ ಮಾತ್ರ. ಇದಕ್ಕೂ ಮೊದಲು ಧವನ್‌-ಕೊಹ್ಲಿ 92 ರನ್‌ ಜತೆಯಾಟ ನಡೆಸಿ ತಂಡದ ಹಾದಿಯನ್ನು ಸುಗಮಗೊಳಿಸಿದ್ದರು. ಶ್ರೇಯಸ್‌ ಅಯ್ಯರ್‌ ಶಾರ್ಟ್‌ ಬಾಲ್‌ ನಿಭಾಯಿಸುವಲ್ಲಿ ಎಡವುತ್ತಿರುವುದು ಮತ್ತೂಮ್ಮೆ ಸಾಬೀತಾಗಿದೆ. ಪಂತ್‌ ಎಂದಿನಂತೆ ಮುನ್ನುಗ್ಗಿ ಬಾರಿಸಲು ಹೋಗಿ ವಿಕೆಟ್‌ ಕೈಚೆಲ್ಲಿದರು.

ಅಯ್ಯರ್‌ ಪಾತ್ರವೇನು? :

Advertisement

ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ ವೆಂಕಟೇಶ್‌ ಅಯ್ಯರ್‌ ಅವರ ಪಾತ್ರವೇನು ಎಂಬುದು. ಅವರನ್ನು ಆಲ್‌ರೌಂಡರ್‌ ಆಗಿ ಪರಿಗಣಿಸಿದ್ದರೆ ಬೌಲಿಂಗ್‌ ಅವಕಾಶ ಏಕೆ ನೀಡಲಿಲ್ಲ? ಅಯ್ಯರ್‌ ಅವರನ್ನು ಕೇವಲ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌ ನೆಲೆಯಲ್ಲಿ ಆಯ್ದುಕೊಂಡಿದ್ದೇ ಆದರೆ ಈ ಸ್ಥಾನಕ್ಕೆ ಅನುಭವಿ ಸೂರ್ಯಕುಮಾರ್‌ ಯಾದವ್‌ ಹೆಚ್ಚು ಫಿಟ್‌ ಆಗುತ್ತಿದ್ದರಲ್ಲವೇ? ತಂಡದ ಆಡಳಿತ ಮಂಡಳಿ ಈ ಕುರಿತು ಯೋಚಿಸಬೇಕಿದೆ.

ದಕ್ಷಿಣ ಆಫ್ರಿಕಾ ಟ್ರ್ಯಾಕ್‌ ಸ್ಪಿನ್ನರ್‌ಗಳಿಗೆ ನೆರವು ನೀಡದೆಂಬ ಸಂಗತಿ ಅರಿವಿದ್ದರೂ ಅವಳಿ ಸ್ಪಿನ್‌ ಪ್ರಯೋಗಕ್ಕೆ ಇಳಿದದ್ದು ಸೂಕ್ತವಲ್ಲ ಎಂಬ ಅಭಿಪ್ರಾಯವಿದೆ. ಇಲ್ಲಿ ಅಶ್ವಿ‌ನ್‌, ಚಹಲ್‌ ಇಬ್ಬರೂ ಪರಿಣಾಮ ಬೀರಲಿಲ್ಲ. ಡುಸೆನ್‌-ಬವುಮ ಇವರನ್ನೇ ಟಾರ್ಗೆಟ್‌ ಮಾಡಿಕೊಂಡು ಸಲೀಸಾಗಿ ರಿವರ್ಸ್‌ ಸ್ವೀಪ್‌ ಹೊಡೆತಗಳನ್ನು ಬಾರಿಸುತ್ತಿದ್ದರು. ಜಾಣ್ಮೆಯ ಬೌಲಿಂಗ್‌ ಬದಲಾವಣೆ ಇಲ್ಲಿ ಕಂಡುಬರಲಿಲ್ಲ.

ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಪಾರ್ಟ್‌ಟೈಮ್‌ ಬೌಲರ್‌ ಐಡನ್‌ ಮಾರ್ಕ್‌ರಮ್‌ ಅವರನ್ನೇ ಮೊದಲು ದಾಳಿಗಿಳಿಸಿ ಯಶಸ್ಸು ಕಂಡ ನಿದರ್ಶನ ಕಣ್ಮುಂದೆಯೇ ಇದೆ. ಅವರ ಆಫ್ ಬ್ರೇಕ್‌ ಎಸೆತಕ್ಕೆ ಭಾರತದ ನಾಯಕ ರಾಹುಲ್‌ ವಿಕೆಟ್‌ ಉರುಳಿತ್ತು.

ಸರಣಿ ಗೆಲುವಿನ ಯೋಜನೆ :

ದಕ್ಷಿಣ ಆಫ್ರಿಕಾ ಆರಂಭಿಕ ಕುಸಿತಕ್ಕೆ ಸಿಲುಕಿದ ಬಳಿಕ ಅಮೋಘ ರೀತಿಯಲ್ಲಿ ಚೇತರಿಸಿಕೊಂಡಿತು. 68 ರನ್ನಿಗೆ 3 ವಿಕೆಟ್‌ ಬಿದ್ದ ಬಳಿಕ ಡುಸೆನ್‌-ಬವುಮ ದ್ವಿತೀಯ ಶತಕದ ಜತೆಯಾಟ ನಡೆಸಿದ್ದು, ಇಬ್ಬರಿಂದಲೂ ಶತಕ ದಾಖಲಾದದ್ದೆಲ್ಲ ಅಸಾಮಾನ್ಯ ಬ್ಯಾಟಿಂಗ್‌ ಸಾಧನೆಯೇ ಆಗಿದೆ. ಇವರಿಬ್ಬರೇ ಸೇರಿ 30 ಓವರ್‌ ನಿಭಾಯಿಸಿ ನಿಂತಿದ್ದರು.

ಮೊದಲ ಪಂದ್ಯವನ್ನು ಗೆದ್ದ ಹುಮ್ಮಸ್ಸಿನಲ್ಲಿರುವ ದಕ್ಷಿಣ ಆಫ್ರಿಕಾದ ಮುಂದಿನ ಯೋಜನೆ ಸರಣಿ ಗೆಲುವು. ಸುಧಾರಿತ ಆಟದೊಂದಿಗೆ ಇದನ್ನು ತಡೆಯುವುದು ರಾಹುಲ್‌ ಬಳಗದ ಗುರಿಯಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next