ಜೊಹಾನ್ಸ್‌ಬರ್ಗ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದ ವೇಳೆ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಹೌದು, ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಸೇರಿದಂತೆ ಒಟ್ಟಾರೆ ಟಿ20 ಕ್ರಿಕೆಟ್ ಕೂಟ ಸೇರಿದಂತೆ ಧೋನಿ ವಿಕೆಟ್‌ಗಳ ಹಿಂದೆ 134ನೇ ಕ್ಯಾಚ್ ಪಡೆದಿದ್ದಾರೆ. ಈ ಮೂಲಕ ಶ್ರೀಲಂಕಾದ ದಿಗ್ಗಜ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ದಾಖಲೆ ಮುರಿದಿದ್ದಾರೆ. ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಹೆಂಡ್ರಿಕ್ಸ್ ಕ್ಯಾಚ್ ಪಡೆಯುವ ಮೂಲಕ ಧೋನಿ ವಿಶ್ವ ಸಾಧಕರಾದರು. ಮಾಜಿ ಕ್ರಿಕೆಟಿಗ ಸಂಗಕ್ಕಾರ ಈ ಹಿಂದೆ 254 ಪಂದ್ಯಗಳಿಂದ 133 ಕ್ಯಾಚ್ ಪಡೆದುಕೊಂಡಿದ್ದರು. ಧೋನಿ ಒಟ್ಟು 275 ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ.
123 ಪಂದ್ಯಗಳಿಂದ 227 ಕ್ಯಾಚ್ ಪಡೆದಿರುವ ದಿನೇಶ್ ಕಾರ್ತಿಕ್ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ತಂಡದ ವಿಕೆಟ್ ಕೀಪರ್ 115 ಪಂದ್ಯಗಳಿಂದ 211 ಕ್ಯಾಚ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದರೆ ವೆಸ್ಟ್ ಇಂಡೀಸ್ ತಂಡದ ದಿನೇಶ್ ರಾಮಿªನ್ 168 ಪಂದ್ಯಗಳಿಂದ 108 ಕ್ಯಾಚ್ ಹಿಡಿದಿದ್ದಾರೆ.
ಒಟ್ಟಾರೆ ವಿಕೆಟ್‌ಗಳ ಹಿಂದೆ ಬಲಿ ಪಡೆದಿರುವವರ ಪಟ್ಟಿಯಲ್ಲಿ ಧೋನಿ ವಿಶ್ವದ ಮೂರನೇ ಕ್ರಿಕೆಟಿಗರಾಗಿದ್ದಾರೆ. ಧೋನಿ ಒಟ್ಟು 495 ಪಂದ್ಯಗಳಿಂದ 775 ಔಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಮರ್ಕ್ ಬೌಚರ್ ಹಾಗೂ ಆ್ಯಡಂ ಗಿಲ್‌ಕ್ರಿಸ್ಟ್ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿ ಇದ್ದಾರೆ.
ವೀರ ಬ್ಯಾಟ್ಸ್‌ಮನ್ ಧೋನಿ: ವಿಕೆಟ್ ಕೀಪರ್ ಆಗಿ ಹಲವು ದಾಖಲೆ ಬರೆದಿರುವ ಧೋನಿ ಓಬ್ಬ ಸಮರ್ಥ್ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದ್ದಾರೆ. 90 ಟೆಸ್ಟ್ ಆಡಿರುವ ಅವರು 38.9 ಸರಾಸರಿಯಲ್ಲಿ 6 ಶತಕ, 33 ಅರ್ಧಶತಕಗಳಿಸಿದ್ದಾರೆ. 318 ಏಕದಿನ ಪಂದ್ಯ ಆಡಿರುವ ಧೋನಿ 51.37 ರನ್ ಸರಾಸರಿಯಲ್ಲಿ 10 ಶತಕ, 67 ಅರ್ಧಶತಕ ಬಾರಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 87 ಪಂದ್ಯ ಆಡಿರುವ ಮಾಹಿ ಏಕೈಕ ಅರ್ಧಶತಕವನ್ನಷ್ಟೇ ಹೊಂದಿದ್ದಾರೆ.