ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ ಈಗಾಗಲೇ ಆರಂಭವಾಗಿದೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ವಿಶ್ವಕಪ್ ಶುರುವಾಗಲಿದೆ. ಹೌದು ಇಂದು ಮಧ್ಯಾಹ್ನ ಭಾರತ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗಲಿದೆ. ಮೆಲ್ಬರ್ನ್ ನಲ್ಲಿ ನಡೆಯಲಿರುವ ಪಂದ್ಯವನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸ್ಟೇಡಿಯಂ ನಲ್ಲಿ ನೋಡಿದರೆ, ಕೋಟ್ಯಾಂತರ ಮಂದಿ ನೇರಪ್ರಸಾರದ ಮೂಲಕ ವೀಕ್ಷಿಸಲಿದ್ದಾರೆ. ಆದರೆ ಸದ್ಯ ಎಲ್ಲಾ ಅಭಿಮಾನಿಗಳಿಗೆ ಕಾಡುತ್ತಿರುವುದು ಮೆಲ್ಬರ್ನ್ ನ ಹವಾಮಾನದ ಬಗ್ಗೆ.
ಭಾರತ ಮತ್ತು ಪಾಕಿಸ್ಥಾನ ಮ್ಯಾಚ್ ವೇಳೆ ಮೆಲ್ಬರ್ನ್ ನಲ್ಲಿ ಮಳೆಯಾಗಬಹುದು ಎಂದು ಒಂದು ವಾರದ ಮೊದಲೇ ಹವಾಮಾನ ಇಲಾಖೆ ಅಂದಾಜಿಸಿತ್ತು. ಅಲ್ಲದೆ ಕಳೆದ ಕೆಲವು ದಿನಗಳ ಕಾಲ ಇಲ್ಲಿ ವರುಣ ರಾಯ ತನ್ನ ಉಪಸ್ಥಿತಿಯನ್ನು ಗುರುತಿಸಿದ್ದಾನೆ. ಹೀಗಾಗಿ ಕ್ರೀಡಾಭಿಮಾನಿಗಳು ಇಂದು ಮಳೆ ಬಾರದಿರಲಿ ಎಂದು ಆಶಿಸುತ್ತಿದ್ದಾರೆ.
ಇದನ್ನೂ ಓದಿ:ಪಶು ಆಹಾರ ದರ ಏರಿಕೆಗೆ ವಿರೋಧ; ಚರ್ಮಗಂಟು ರೋಗದ ಕಾಲದಲ್ಲೂ ಬೇಕಿತ್ತಾ?: ಕೆಶಿನ್ಮನೆ ಪ್ರಶ್ನೆ
ಟಿ20 ವಿಶ್ವಕಪ್ ನ ಗುಂಪು ಹಂತದ ಪಂದ್ಯಗಳಲ್ಲಿ ಯಾವುದೇ ಮೀಸಲು ದಿನಗಳನ್ನು ಒದಗಿಸಲಾಗಿಲ್ಲ. ಆದ್ದರಿಂದ ಒಂದು ವೇಳೆ ಇಂದಿನ ಆಟವು ವಾಶ್ ಔಟ್ ಆದರೆ, ಎರಡು ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಳ್ಳುತ್ತವೆ. ಆದರೆ, ಸದ್ಯದ ಹವಾಮಾನ ಗಣನೀಯವಾಗಿ ಸುಧಾರಿಸಿದ್ದು, ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ.
ಮೆಲ್ಬರ್ನ್ ನಲ್ಲಿ ಶುಕ್ರವಾರದಂದು ಉತ್ತಮ ಮಳೆಯಾಗಿತ್ತು. ಆದರೆ ಬಿಸಿಲು ಬಂದ ಕಾರಣ ಎರಡೂ ತಂಡಗಳು ಎಂಸಿಜಿ ಯಲ್ಲಿ ತಮ್ಮ ಸಂಪೂರ್ಣ ಅಭ್ಯಾಸ ನಡೆಸಿವೆ. ಇಂದು ಸಂಜೆ ಗಾಳಿ ಬೀಸಲಿದೆ, ಮೋಡ ಕವಿದ ವಾತಾವರಣವಿದ್ದು ತಡರಾತ್ರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
92% ರಷ್ಟು ಮೋಡ ಕವಿದಿದ್ದರೂ ಭಾನುವಾರ ಸಂಜೆ ಮೆಲ್ಬರ್ನ್‌ನಲ್ಲಿ ಆಟ ನಡೆಯುವಾಗ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಕೇವಲ 8% ಮಾತ್ರ.
ಈ ಬಗ್ಗೆ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, “ನಾನು ಸ್ವಲ್ಪ ಸಮಯದವರೆಗೆ ಮೆಲ್ಬರ್ನ್ ಹವಾಮಾನದ ಬಗ್ಗೆ ಕೇಳುತ್ತಿದ್ದೇನೆ. ಇಲ್ಲಿನ ಹವಾಮಾನ ಆಗಾಗ ಬದಲಾಗುತ್ತಿರುತ್ತದೆ. ಬೆಳಿಗ್ಗೆ ನಾನು ಎದ್ದಾಗ, ಬಹಳಷ್ಟು ಮೋಡಗಳಲ್ಲಿದ್ದವು, ಆದರೆ ಈಗ ಉತ್ತಮ ಬಿಸಿಲಿದೆ’ ಎಂದರು.