ರಾಯ್ಪುರ್ : ಇಲ್ಲಿನ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಅಮೋಘ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದ ಭಾರತ ಪ್ರವಾಸಿ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ಭಾರತದ ಬಿಗು ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲ್ಯಾಂಡ್ 34.3 ಓವರ್ ಗಳಲ್ಲಿ 108 ರನ್ ಗಳಿಗೆ ಸರ್ವ ಪತನ ಕಂಡಿತು. 15 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಬಿರುಗಾಳಿಗೆ ಸಿಲುಕಿದಂತಾಯಿತು. ಆ ಬಳಿಕ ಬಂದ ಗ್ಲೆನ್ ಫಿಲಿಪ್ಸ್ 36, ಎಂ ಬ್ರೇಸ್‌ವೆಲ್ 22 ಮತ್ತು ಸ್ಯಾಂಟ್ನರ್ 27 ರನ್ ಗಳಿಸಿ ತಂಡ ನೂರರ ಗಡಿ ದಾಟಲು ಕಾರಣರಾದರು. ಉಳಿದ ಯಾವೊಬ್ಬ ಆಟಗಾರರು ಒಂದಂಕಿ ದಾಟಲಿಲ್ಲ.
ಬೌಲಿಂಗ್ ನಲ್ಲಿ ಬಿಗಿ ದಾಳಿ ನಡೆಸಿದ ವೇಗಿ ಶಮಿ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯಾ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು. ಸಿರಾಜ್, ಶಾರ್ದುಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
109 ರನ್ ಗಳ ಗುರಿ ಬೆನ್ನಟ್ಟಿದ ಭಾರತ 20.1 ಓವರ್ ಗಳ ಲ್ಲಿ 2 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಸುಲಭ ಜಯ ತನ್ನದಾಗಿಸಿಕೊಂಡಿತು. ಸರಣಿಯನ್ನೂ ವಶಪಡಿಸಿ ಕೊಂಡಿತು. 2-0 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿತು. ನಾಯಕ ರೋಹಿತ್ ಶರ್ಮ 51 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ ಔಟಾಗದೆ 40, ವಿರಾಟ್ ಕೊಹ್ಲಿ11 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ ಔಟಾಗದೆ 8 ರನ್ ಗಳಿಸಿದರು.
ಸರಣಿಯ ಕೊನೆಯ ಪಂದ್ಯ ಜನವರಿ 24ರಂದು ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್ ನಲ್ಲಿ ನಡೆಯಲಿದೆ.