Advertisement
ಮಂಗಳವಾರ ದ್ವಿತೀಯ ಮುಖಾಮುಖೀ ಸಾಗಲಿದ್ದು, ಇದನ್ನೂ ಜಯಿಸಿದರೆ ಭಾರತದ “ಮೀಸಲು ಕ್ರಿಕೆಟ್ ಪಡೆ’ ಕ್ಲೀನ್ ಸ್ವೀಪ್ ಸಾಧನೆಗೈದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆದರೆ ಈ ಪಂದ್ಯಕ್ಕೂ ಮಳೆಯ ಭೀತಿ ತಪ್ಪಿದ್ದಲ್ಲ!
ಭಾರತ ಗೆಲುವು ಸಾಧಿಸಿದರೂ ಕೆಲವು ಸಮಸ್ಯೆಗಳನ್ನು ಎದುರಿಸಿದೆ. ಋತುರಾಜ್ ಗಾಯಕ್ವಾಡ್ ಕಾಲಿನ ಸ್ನಾಯು ಸೆಳೆತದಿಂದ ಇನ್ನಿಂಗ್ಸ್ ಆರಂಭಿಸಲು ಬರಲಿಲ್ಲ. ದ್ವಿತೀಯ ಪಂದ್ಯಕ್ಕೂ ಅವರು ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ಸಂಜು ಸ್ಯಾಮ್ಸನ್ ಅಥವಾ ರಾಹುಲ್ ತ್ರಿಪಾಠಿ ಆಡಲಿಳಿಯಬಹುದು.
Related Articles
Advertisement
ಸೂರ್ಯಕುಮಾರ್ ಯಾದವ್ ಗಾಯದಿಂದ ಚೇತರಿಸಿಕೊಂಡು ಮರಳಿದರೂ “ಗೋಲ್ಡನ್ ಡಕ್’ ಸಂಕಟಕ್ಕೆ ಸಿಲುಕಿದರು. ಅವರು ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಬೇಕಿದೆ. ಹಾಗೆಯೇ ಚೊಚ್ಚಲ ಪಂದ್ಯವಾಡಿದ ಬಹು ನಿರೀಕ್ಷೆಯ ವೇಗಿ ಉಮ್ರಾನ್ ಮಲಿಕ್ ಒಂದೇ ಓವರ್‌ನಲ್ಲಿ 14 ರನ್ ನೀಡಿ ದುಬಾರಿಯಾದರು. ಇವರೂ ನಿಯಂತ್ರಣ ಸಾಧಿಸಬೇಕಿದೆ. ಮಲಿಕ್ ಹಳೆ ಚೆಂಡಿನಲ್ಲಿ ಉತ್ತಮ ನಿಯಂತ್ರಣ ಸಾಧಿಸುವ ಸಾಧ್ಯತೆ ಇರುವುದರಿಂದ ಅವರನ್ನು ಪವರ್ ಪ್ಲೇ ಬಳಿಕ ದಾಳಿಗೆ ಇಳಿಸುವುದು ಪಾಂಡ್ಯ ಯೋಜನೆ. ಹೀಗಾಗಿ ರವಿವಾರ ಭುವನೇಶ್ವರ್ ಕುಮಾರ್ ಜತೆ ಸ್ವತಃ ಪಾಂಡ್ಯ ಅವರೇ ಬೌಲಿಂಗ್ ಆರಂಭಿಸಿದ್ದರು.
ಆವೇಶ್ ಖಾನ್ ಡೆತ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಅವರಷ್ಟು ಪರಿಣಾಮಕಾರಿ ಎನಿಸಲಿಲ್ಲ. ಈ ನಡುವೆ ಯಾರ್ಕರ್ ಸ್ಪೆಷಲಿಸ್ಟ್ ಆರ್ಷದೀಪ್ ಸಿಂಗ್ ಅವರಿಗೊಂದು ಅವಕಾಶ ನೀಡಬೇಕಿದೆ. ದಕ್ಷಿಣ ಆಫ್ರಿಕಾ ಸರಣಿಯ ಐದೂ ಪಂದ್ಯಗಳಲ್ಲಿ ಇವರು ಬೆಂಚ್ ಮೇಲೆಯೇ ಕುಳಿತ್ತಿದ್ದರು.
ಮುಂದಿನ ತಿಂಗಳು ಇಂಗ್ಲೆಂಡ್ ನೆಲದಲ್ಲಿ ಭಾರತ ಪೂರ್ಣ ಸಾಮರ್ಥ್ಯದ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿಯುವಷ್ಟರಲ್ಲಿ ಮೀಸಲು ಆಟಗಾರರನ್ನೆಲ್ಲ ಒಮ್ಮೆ ಪ್ರಯೋಗಿಸಿ ನೋಡುವುದು ನಾಯಕ ಪಾಂಡ್ಯ ಮತ್ತು ಕೋಚ್ ವಿವಿಎಸ್ ಲಕ್ಷ್ಮಣ್ ಅವರ ಐಡಿಯಾ. ಆದರೆ ಇದಕ್ಕೆ ಇರುವುದು ಎರಡೇ ಅವಕಾಶವಾದ್ದರಿಂದ ಕೆಲವು ಕಾರ್ಯತಂತ್ರಗಳನ್ನು ರೂಪಿಸುವುದು ಕಷ್ಟವಾಗುತ್ತಿದೆ. ದಕ್ಷಿಣ ಆಫ್ರಿಕಾ ಎದುರಿನ ಐದೂ ಪಂದ್ಯಗಳಲ್ಲಿ ಒಂದೇ ತಂಡವನ್ನು ಆಡಿಸಿದ್ದರ ಫಲವಿದು!
ಐರ್ಲೆಂಡ್ ದುರ್ಬಲವಲ್ಲ…ಐರ್ಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ್ದು ಹ್ಯಾರಿ ಟೆಕ್ಟರ್ ಮಾತ್ರ. 4 ಓವರ್ ಮುಗಿಯುವಷ್ಟರಲ್ಲಿ 23ಕ್ಕೆ 3 ವಿಕೆಟ್ ಬಿದ್ದ ಬಳಿಕ ಕ್ರೀಸ್ ಆಕ್ರಮಿಸಿಕೊಂಡ ಟೆಕ್ಟರ್ 33 ಎಸೆತಗಳಿಂದ 64 ರನ್(6 ಬೌಂಡರಿ, 3 ಸಿಕ್ಸರ್) ಬಾರಿಸಿ ಐರ್ಲೆಂಡ್ ಸರದಿಯನ್ನು ಆಧರಿಸಿದ್ದರು. ಅಂದಮಾತ್ರಕ್ಕೆ ಐರಿಷ್ ಬ್ಯಾಟಿಂಗ್ ಸರದಿ ದುರ್ಬಲವೇನಲ್ಲ. ಪೂರ್ತಿ 20 ಓವರ್‌ಗಳ ಅವಕಾಶ ಲಭಿಸಿದರೆ ಐರ್ಲೆಂಡ್ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ದಾಖಲಾಗುವ ಎಲ್ಲ ಸಾಧ್ಯತೆ ಇದೆ. ಆರಂಭ: ರಾತ್ರಿ 9.00
ಪ್ರಸಾರ: ಸೋನಿ ಸಿಕ್ಸ್