Advertisement
ಇದೀಗ ಶನಿವಾರ ಮತ್ತು ರವಿವಾರ ಆಡಲಾಗುವ ಉಳಿದೆರಡು ಪಂದ್ಯಗಳಿಗಾಗಿ ಭಾರತ ತಂಡದಲ್ಲಿ ಮಹತ್ತರ ಬದಲಾವಣೆ ಸಂಭವಿಸಿದೆ. ಸೀನಿಯರ್ ಆಟಗಾರರೆಲ್ಲ ಮರಳಿದ್ದಾರೆ. ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ ಅವರ ಆಗಮನವಾಗಿದೆ. ಇವರಲ್ಲಿ ಕೆಲವರಿಗಾದರೂ ಆಡುವ ಬಳಗದಲ್ಲಿ ಅವಕಾಶ ಲಭಿಸುವುದರಲ್ಲಿ ಅನುಮಾನವಿಲ್ಲ.
ತೀವ್ರ ರನ್ ಬರಗಾಲದಲ್ಲಿದ್ದರೂ ವಿರಾಟ್ ಕೊಹ್ಲಿಗೆ ಅವಕಾಶ ಸಿಗುವ ಬಗ್ಗೆ ಅನುಮಾನವಿಲ್ಲ. ಆದರೆ ಇವರಿಗೆ ಯಾವ ಕ್ರಮಾಂಕ ನೀಡಬೇಕು, ಯಾರನ್ನು ಹೊರಗಿಡಬೇಕು ಎಂಬುದೇ ಪ್ರಶ್ನೆ. ವನ್‌ಡೌನ್‌ನಲ್ಲಿ ಬರುವ ದೀಪಕ್ ಹೂಡಾ ಪ್ರತಿಯೊಂದು ಪಂದ್ಯದಲ್ಲೂ ಹೊಡಿಬಡಿ ಆಟ ಆಡುತ್ತಿರುವುದರಿಂದ ಇವರನ್ನು ಅಲುಗಿಸುವ ಪ್ರಶ್ನೆಯೇ ಇಲ್ಲ. ಗುರುವಾರ 17 ಎಸೆತಗಳಿಂದ 33 ರನ್ ಹೊಡೆದಿದ್ದರು.
Related Articles
Advertisement
ಉಳಿದಂತೆ ಅಕ್ಷರ್ ಪಟೇಲ್ ಬದಲು ರವೀಂದ್ರ ಜಡೇಜ, ಆರ್ಷದೀಪ್ ಸ್ಥಾನಕ್ಕೆ ಬುಮ್ರಾ ಬರುವುದು ಖಚಿತ. ರಿಷಭ್ ಪಂತ್ ಅವರಿಗಾಗಿ ದಿನೇಶ್ ಕಾರ್ತಿಕ್ ಹೊರಗುಳಿಯಬೇಕಾದೀತೇ, ಈ ಬದಲಾವಣೆ ಸೂಕ್ತವೇ ಎಂಬುದೊಂದು ಪ್ರಶ್ನೆ. ಕಾರ್ತಿಕ್ ಟಿ20 ವಿಶ್ವಕಪ್ ತಂಡದ ಪ್ರಬಲ ಉಮೇದುವಾರರಲ್ಲಿ ಒಬ್ಬರು ಎಂಬುದನ್ನು ಮರೆಯುವಂತಿಲ್ಲ.
ಸಿಡಿಯದ ಬಿಗ್ ಗನ್ಸ್ಜಾಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಕೂಡ ಬಲಿಷ್ಠ ಟಿ20 ತಂಡ. ಆದರೆ ಮೊದಲ ಪಂದ್ಯದಲ್ಲಿ ಬಿಗ್ ಹಿಟ್ಟರ್‌ಗಳಾದ ಜೇಸನ್ ರಾಯ್, ಬಟ್ಲರ್, ಲಿವಿಂಗ್‌ಸ್ಟೋನ್, ಮಲಾನ್ ಅವರೆಲ್ಲ ಸಿಡಿದು ನಿಲ್ಲುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಬಟ್ಲರ್ ಅವರನ್ನು ಮೊದಲ ಎಸೆತದಲ್ಲೇ ಭುವನೇಶ್ವರ್ ಕ್ಲೀನ್‌ಬೌಲ್ಡ್ ಮಾಡಿದ್ದರು. ಅಪಾಯಕಾರಿ ಲಿವಿಂಗ್‌ಸ್ಟೋನ್‌ಗೆ ಖಾತೆ ತೆರೆಯಲು ಪಾಂಡ್ಯ ಅವಕಾಶವನ್ನೇ ಕೊಡಲಿಲ್ಲ. ಪಾಂಡ್ಯ 33ಕ್ಕೆ 4 ವಿಕೆಟ್ ಬೇಟೆಯಾಡಿ ಆಂಗ್ಲರ ನಡು ಮುರಿದರು. ಪಂದ್ಯದ ಏಕೈಕ ಅರ್ಧ ಶತಕಕ್ಕೂ ಅವರು ಸಾಕ್ಷಿಯಾಗಿದ್ದರು (33 ಎಸೆತ, 51 ರನ್, 4 ಬೌಂಡರಿ, 2 ಸಿಕ್ಸರ್). ಪಾಂಡ್ಯ ಅವರ ಆಲ್‌ರೌಂಡ್ ಶೋ ಟೀಮ್ ಇಂಡಿಯಾ ಪಾಲಿಗೊಂದು ವರದಾನ. ಗುರುವಾರ ಸಿಡಿಯದ ಇಂಗ್ಲೆಂಡಿನ ಬಿಗ್ ಗನ್‌ಗಳಲ್ಲಿ ಕೆಲವಾದರೂ ಬರ್ಮಿಂಗ್‌ಹ್ಯಾಮ್‌ನಲ್ಲಿ ಸ್ಫೋಟಿಸುವ ಸಾಧ್ಯತೆ ಇದೆ. ಭಾರತ ಹೆಚ್ಚು ಎಚ್ಚರದಿಂದ ಇರಬೇಕು. ಶನಿವಾರವೇ ಸರಣಿ ಗೆಲ್ಲುವುದು ರೋಹಿತ್ ಪಡೆಯ ಯೋಜನೆಯಾಗಬೇಕು.