Advertisement

ನಾಳೆ ಭಾರತ-ಇಂಗ್ಲೆಂಡ್‌ ಸೆಮಿ ಕಾದಾಟ

09:08 AM Mar 05, 2020 | sudhir |

ಸಿಡ್ನಿ: ವನಿತಾ ಟಿ20 ವಿಶ್ವಕಪ್‌ ಸೆಮಿಫೈನಲ್‌ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಅಜೇಯ ಭಾರತ, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಹಂತಕ್ಕೇರಿವೆ. ಗುರುವಾರ ನಡೆಯುವ ಸೆಮಿಫೈನಲ್‌ ಹೋರಾಟದಲ್ಲಿ ಭಾರತವು ಇಂಗ್ಲೆಂಡ್‌ ಸವಾಲನ್ನು ಎದುರಿಸಲಿದ್ದರೆ ಆಸ್ಟ್ರೇಲಿಯವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ.

Advertisement

ದ. ಆಫ್ರಿಕಾಕ್ಕೆ ಮಳೆಯ ಲಾಭ
ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಲೀಗ್‌ ಪಂದ್ಯ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಇದರಿಂದಾಗಿ ಇತ್ತಂಡಗಳಿಗೂ ಒಂದೊಂದು ಅಂಕ ನೀಡಲಾಯಿತು. ಈ ಒಂದು ಅಂಕದ ಲಾಭವೆತ್ತಿದ ದಕ್ಷಿಣ ಆಫ್ರಿಕಾ “ಬಿ’ ಗುಂಪಿನ ಅಗ್ರಸ್ಥಾನ ಅಲಂಕರಿಸಿದರೆ ಇಂಗ್ಲೆಂಡ್‌ ದ್ವಿತೀಯ ಸ್ಥಾನಕ್ಕೆ ಕುಸಿಯಿತು. ಇದರಿಂದಾಗಿ ಇಂಗ್ಲೆಂಡ್‌ “ಎ’ ವಿಭಾಗದ ಅಗ್ರಸ್ಥಾನಿ ಅಜೇಯ ಭಾರತದ ವಿರುದ್ಧ ಸೆಮಿಫೈನಲ್‌ನಲ್ಲಿ ಆಡಲಿದೆ.

ಫೈನಲ್‌ ನಿರೀಕ್ಷೆಯಲ್ಲಿ ಭಾರತ
ಭಾರತ ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶ ಪಡೆದಿಲ್ಲ. ಈ ಸಲ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶ ಭಾರತಕ್ಕೆ ಲಭಿಸಿದೆ. ಲೀಗ್‌ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ಚಾಂಪಿಯನ್‌ ಎನಿಸಿಕೊಳ್ಳುವ ಉತ್ಸಾಹದಲ್ಲಿದೆ. ಅದಕ್ಕಾಗಿ ಇನ್ನೆರಡು ಪಂದ್ಯ ಗೆದ್ದರೆ ಸಾಕಾಗುತ್ತದೆ. ಆದರೆ ಮುಂದಿನೆರಡು ಪಂದ್ಯ ಅಷ್ಟು ಸುಲಭದ್ದಲ್ಲ.

ಲೀಗ್‌ನಲ್ಲಿ ಮೂರು ಗೆಲುವು ಮತ್ತು ಒಂದು ಸೋಲು ಕಂಡಿರುವ ಇಂಗ್ಲೆಂಡ್‌ ತಂಡವು ಗುರುವಾರ ಭಾರತಕ್ಕೆ ಪ್ರಬಲ ಸವಾಲು ನೀಡುವ ಸಾಧ್ಯತೆಯಿದೆ. ಇದು 2018ರ ವಿಶ್ವಕಪ್‌ನ ಪುನರಾವರ್ತನೆಯಾಗಿದೆ. 2018ರಲ್ಲಿ ಭಾರತಕ್ಕೆ ಇಂಗ್ಲೆಂಡ್‌ ಸೆಮಿಫೈನಲ್‌ನಲ್ಲಿ ಎದುರಾಗಿತ್ತು. ಇಲ್ಲಿ ಇಂಗ್ಲೆಂಡ್‌ ಜಯಭೇರಿ ಮೊಳಗಿಸಿ ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿತ್ತು.

ಲೀಗ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಭಾರತವು ಸೆಮಿಫೈನಲ್‌ನಲ್ಲೂ ಭರ್ಜರಿ ಆಟ ಪ್ರದರ್ಶಿಸುವ ಸಾಧ್ಯತೆಯಿದೆ. ಬ್ಯಾಟಿಂಗ್‌ನಲ್ಲಿ ಮಿಂಚಿದರೆ ಭಾರತ ಮೇಲುಗೈ ಸಾಧಿಸಬಹುದು. ಗೆದ್ದರೆ ಫೈನಲ್‌ನಲ್ಲಿ ಮತ್ತೆ ಆಸ್ಟ್ರೇಲಿಯ ಎದುರಾಗುವ ಸಾಧ್ಯತೆಯಿದೆ.

Advertisement

ಗುರುವಾರ ನಡೆಯುವ ಇನ್ನೊಂದು ಸೆಮಿಫೈನಲ್‌ ಪಂದ್ಯವು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಈ ಪಂದ್ಯ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ.

ಸೆಮಿಗೆ ಮಳೆ ಬಂದರೆ…
ಸಿಡ್ನಿ: ವನಿತಾ ಟಿ20 ವಿಶ್ವಕಪ್‌ನ ಎರಡು ಸೆಮಿಫೈನಲ್‌ ಪಂದ್ಯಗಳು ಸಿಡ್ನಿಯಲ್ಲಿ ಗುರುವಾರ ನಡೆಯಲಿವೆ. ಸಿಡ್ನಿಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್‌ ನಡುವಣ ಪಂದ್ಯ ಯಾವುದೇ ಎಸೆತ ಕಾಣದೆ ರದ್ದಾಗಿತ್ತು. ಸಿಡ್ನಿಯಲ್ಲಿ ಇನ್ನೂ ಕೆಲವು ದಿನ ಮಳೆ ಬರುವ ಸಾಧ್ಯತೆಯಿದೆ.

ಗುರುವಾರ ಎರಡೂ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಬಂದರೆ ಏನಾಗಬಹುದು. ಐಸಿಸಿ ನಿಯಮದ ಪ್ರಕಾರ ಪ್ರತಿಯೊಂದು ತಂಡ ಕಡಿಮೆಪಕ್ಷ 10 ಓವರ್‌ ಆಡಬೇಕಾಗುತ್ತದೆ. ಒಂದು ವೇಳೆ 10 ಓವರ್‌ ಆಡಲು ಸಾಧ್ಯವಾಗದಿದ್ದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

ಸೆಮಿಫೈನಲ್‌ ಪಂದ್ಯಗಳಿಗೆ ಮೀಸಲು ದಿನ ಇಲ್ಲದ ಕಾರಣ ಒಂದು ವೇಳೆ ಪಂದ್ಯ ರದ್ದುಗೊಂಡರೆ ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆದ ಆಧಾರದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಫೈನಲಿಗೇರಲಿವೆ. ಫೈನಲ್‌ ಪಂದ್ಯಕ್ಕೆ ಮೀಸಲು ದಿನ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next