ಅಹ್ಮದಾಬಾದ್: ಪುನರ್ ನಿರ್ಮಾಣಗೊಂಡ ಅಹ್ಮದಾಬಾದ್‌ನ “ಸರ್ದಾರ್ ಪಟೇಲ್ ಮೊಟೇರಾ ಸ್ಟೇಡಿಯಂ’ನಲ್ಲಿ ಮುಂದಿನ ವರ್ಷ ಭಾರತ-ಇಂಗ್ಲೆಂಡ್ ನಡುವೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಾಗುವುದು. ಗುರುವಾರ ಬಿಸಿಸಿಐ ಈ ಸರಣಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿತು.
ಗುಜರಾತ್ ಕ್ರಿಕೆಟ್ ಮಂಡಳಿ ಎಳೆಯ ಕ್ರಿಕೆಟಿಗರಿಗಾಗಿ ಆಯೋಜಿಸಿದ ಒಳಾಂಗಣ ಅಕಾಡೆಮಿಯನ್ನು ಉದ್ಘಾಟಿಸಿದ ಬಳಿಕ ಜಯ್ ಶಾ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು. ಒಂದು ದಿನದ ಹಿಂದಷ್ಟೇ ಕ್ರಿಕೆಟಿಗೆ ವಿದಾಯ ಘೋಷಿಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದು 4 ಟೆಸ್ಟ್, 5 ಟಿ20 ಮತ್ತು 3 ಏಕದಿನ ಪಂದ್ಯಗಳ ಸುದೀರ್ಘ ಸರಣಿಯಾದರೂ ಕೋವಿಡ್-19 ಮುನ್ನೆಚ್ಚರಿಕೆಯ ಕಾರಣ ಮೂರೇ ಜೈವಿಕ ಸುರಕ್ಷಾ ತಾಣಗಳನ್ನು ಆಯ್ದುಕೊಳ್ಳಲಾಗಿದೆ. ಅದರಂತೆ ಅಹ್ಮದಾಬಾದ್‌ನಲ್ಲಿ 2 ಟೆಸ್ಟ್ ಹಾಗೂ 5 ಟಿ20, ಚೆನ್ನೈಯಲ್ಲಿ 2 ಟೆಸ್ಟ್ ಮತ್ತು ಪುಣೆಯಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಾಗುವುದು. ಬಿಸಿಸಿಐ ಆವರ್ತನ ಪದ್ಧತಿಯಂತೆ ಈ ಕೇಂದ್ರಗಳಿಗೆ ಆತಿಥ್ಯದ ಅವಕಾಶ ಸಿಕ್ಕಿದೆ.
ಐಪಿಎಲ್‌ಗೆ ಪೀಠಿಕೆ
ಅಹ್ಮದಾಬಾದ್ ಡೇ-ನೈಟ್ ಟೆಸ್ಟ್ ಫೆ. 24ರಿಂದ ಆರಂಭವಾಗಲಿದ್ದು, ಇದು ಭಾರತದ ಆತಿಥ್ಯದಲ್ಲಿ ನಡೆಯುವ ದ್ವಿತೀಯ ಪಿಂಕ್ ಬಾಲ್ ಟೆಸ್ಟ್ ಎನಿಸಲಿದೆ. ಮೊದಲ ಹಗಲು-ರಾತ್ರಿ ಟೆಸ್ಟ್ ಭಾರತ-ಬಾಂಗ್ಲಾದೇಶ ನಡುವೆ ಕಳೆದ ವರ್ಷಾಂತ್ಯ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿತ್ತು. ಈ ಸರಣಿಯನ್ನು ಯಶಸ್ವಿಯಾಗಿ ನಡೆಸಿದರೆ, ಮುಂದಿನ ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲೇ ಆಯೋಜಿಸುವುದು ಬಿಸಿಸಿಐ ಲೆಕ್ಕಾಚಾರ.
ವಿಶ್ವದ ಬೃಹತ್ ಸ್ಟೇಡಿಯಂ
ಮೊಟೆರಾ ಕ್ರೀಡಾಂಗಣವನ್ನು 800 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಪುನರ್ ನಿರ್ಮಾಣ ಮಾಡಲಾಗಿದೆ. 1.10 ಲಕ್ಷ ವೀಕ್ಷಕರ ಸಾಮರ್ಥ್ಯ ಹೊಂದಿದ್ದು, ವಿಶ್ವದ ಬೃಹತ್ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1982ರಲ್ಲಿ ತಲೆಯೆತ್ತಿದ ಈ ಕ್ರೀಡಾಂಗಣ ಮೊದಲು 49 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿತ್ತು. ಆದರೆ ಈ ಸರಣಿ ವೇಳೆ ವೀಕ್ಷಕರಿಗೆ ಪ್ರವೇಶವಿದೆಯೇ ಎಂಬುದೊಂದು ಪ್ರಶ್ನೆ