Advertisement

ಇಂಗ್ಲೆಂಡ್‌ ನೆಲದಲ್ಲಿ ಭಾರತಕ್ಕೆ ಟಿ20 ಸವಾಲು

06:00 AM Jul 03, 2018 | Team Udayavani |

ಮ್ಯಾಂಚೆಸ್ಟರ್‌: ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಹೆಗ್ಗುರುತು ಸ್ಥಾಪಿಸಿರುವ ಟೀಮ್‌ ಇಂಡಿಯಾ ಮಂಗಳವಾರದಿಂದ ಆಂಗ್ಲರ ನೆಲದಲ್ಲಿ  3 ಪಂದ್ಯಗಳ ಟಿ20 ಸರಣಿಯನ್ನು ಆರಂಭಿಸಲಿದೆ. ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಕಳೆದ ಕೆಲವು ವರ್ಷಗಳಿಂದ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಅತ್ತ ಇಂಗ್ಲೆಂಡ್‌ ಸಹ ಇತ್ತೀಚೆಗೆ ಏಕದಿನ ಹಾಗೂ ಟಿ20ಗಳಲ್ಲಿ ಬಲಾಡ್ಯ ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ಇತ್ತಂಡಗಳ ನಡುವಿನ ಕ್ರಿಕೆಟ್‌ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

Advertisement

2019ರಲ್ಲಿ ನಡೆಯಲಿರುವ ಏಕದಿನ ವಿಶ್ವ ಕಪ್‌ಗೆ 12 ತಿಂಗಳು ಬಾಕಿಯಿದ್ದು, ಇದಕ್ಕಾಗಿ ತಂಡವನ್ನು ಹುರಿಗೊಳಿಸುವ ಹಾಗೂ ಒಂದು ಸಮತೋಲಿತ ತಂಡವನ್ನು ಈಗಿನಿಂದಲೇ ರೂಪಿಸುವ ಜವಾಬ್ದಾರಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮೇಲಿದೆ. ಅದರಲ್ಲೂ ಆ ಬೃಹತ್‌ ಟೂರ್ನಿ ಇಂಗ್ಲೆಂಡ್‌ ನೆಲದಲ್ಲೇ ನಡೆಯುವುದರಿಂದ ತಮ್ಮ ಆಟಗಾರರ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸಕ್ಕೆ ಕೊಹ್ಲಿ ಮುಂದಾಗಲಿದ್ದಾರೆ. ಈ ದೃಷ್ಟಿಯಿಂದ ಭಾರತ-ಇಂಗ್ಲೆಂಡ್‌ ನಡುವಿನ ಟಿ20, ಏಕದಿನ ಸರಣಿಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ.

ಆತ್ಮ ವಿಶ್ವಾಸದ ಜತೆಗೆ ಎಚ್ಚರಿಕೆ
ಕಳೆದ ವಾರವಷ್ಟೇ ಅಯರ್‌ಲ್ಯಾಂಡ್‌ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್‌ ಇಂಡಿಯಾ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಲಿದೆ. ಆದರೆ ಎದುರಾಳಿ ತಂಡ ಅಯರ್‌ಲ್ಯಾಂಡ್‌ನ‌ಷ್ಟು ದುರ್ಬಲವಲ್ಲ ಎಂಬ ಎಚ್ಚರಿಕೆಯೂ ಕೊಹ್ಲಿ ಪಡೆಗಿದೆ. ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಶ್ರೀಲಂಕಾದಲ್ಲಿ ನಡೆದಿದ್ದ ನಿದಹಾಸ್‌ ಟ್ರೋಫಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ದ್ವಿಪಕ್ಷೀಯ ಸರಣಿಯ ಪಂದ್ಯಗಳೂ ಸೇರಿ, 20 ಟಿ20 ಪಂದ್ಯಗಳಲ್ಲಿ 15ರಲ್ಲಿ ಜಯ ಸಾಧಿ ಸಿರುವುದು ಕೊಹ್ಲಿ ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಬಹುದೆಂಬುದೊಂದು ನಂಬಿಕೆ.

ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿ
ಇಂಗ್ಲೆಂಡ್‌ ವಿರುದ್ಧ ಸರ್ವ ಸನ್ನದ್ಧವಾಗಿ ಕಣಕ್ಕಿಳಿಯಲಿದ್ದ ಭಾರತ ತಂಡಕ್ಕೆ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಅನುಪಸ್ಥಿತಿ ಎದುರಾಗಿದೆ. ಅವರ ಬದಲಿಗೆ ಭಾರತ “ಎ’ ತಂಡದ ಸದಸ್ಯ ದೀಪಕ್‌ ಚಹರ್‌ಗೆ ಅವಕಾಶ ನೀಡಲಾಗಿದೆ. ಚಹರ್‌ ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಇವರಂತೆ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಕೂಡ ಅವಕಾಶಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಬುಮ್ರಾ ಬದಲು ಉಮೇಶ್‌ ಯಾದವ್‌ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚು. ಮಧ್ಯಮ ವೇಗಿ ಸಿದ್ದಾರ್ಥ್ ಕೌಲ್‌ ಕೂಡ ರೇಸ್‌ನಲ್ಲಿದ್ದಾರೆ. ಭುವನೇಶ್ವರ್‌ ಕುಮಾರ ಪ್ರಧಾನ ವೇಗಿಯಾಗಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ಈಗ ವಿಪರೀತ ಬಿಸಿ ವಾತಾವರಣ ಇರುವುದರಿಂದ ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಇಬ್ಬರೂ ದಾಳಿಗೆ ಇಳಿಯಬಹುದು. ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಭಾರೀ ಪೈಪೋಟಿ ಕಂಡುಬರುವುದು ಖಂಡಿತ. ಧವನ್‌, ರಾಹುಲ್‌, ರೋಹಿತ್‌, ರೈನಾ, ಕೊಹ್ಲಿ, ಧೋನಿ, ಪಾಂಡೆ, ಕಾರ್ತಿಕ್‌ ಬ್ಯಾಟಿಂಗ್‌ ಸರದಿಯ ಪ್ರಮುಖರು. ಅಯರ್‌ಲ್ಯಾಂಡ್‌ ವಿರುದ್ಧದ ಎರಡೂ ಪಂದ್ಯಗಳಲ್ಲಿ ವಿಫ‌ಲರಾದ ಕೊಹ್ಲಿ ಇಂಗ್ಲೆಂಡ್‌ ವಿರುದ್ಧ ಸಿಡಿದು ನಿಲ್ಲಬೇಕಾದುದು ಅನಿವಾರ್ಯ.

Advertisement

ಆಂಗ್ಲರ ಪ್ರಚಂಡ ಬ್ಯಾಟಿಂಗ್‌ ಶಕ್ತಿ 
ಇಂಗ್ಲೆಂಡ್‌ ಇತ್ತೀಚಿನ ದಿನಗಳಲ್ಲಿ ಸೀಮಿತ ಓವರ್‌ಗಳ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್‌ ಮೂಲಕ ಎದುರಾಳಿ ಮೇಲೆ ಸವಾರಿ ಮಾಡುತ್ತಿದೆ. ಆಸ್ಟ್ರೇಲಿಯ ವಿರುದ್ಧ ಏಕದಿನದಲ್ಲಿ ವಿಶ್ವದಾಖಲೆಯನ್ನೂ ನಿರ್ಮಿಸಿದೆ. ಹೇಲ್ಸ್‌, ರಾಯ್‌, ಬಟ್ಲರ್‌, ಬೇರ್‌ಸ್ಟೊ, ಮಾರ್ಗನ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಸರದಿ ಟಿ20ಗೆ ಹೇಳಿ ಮಾಡಿಸಿದಂತಿದೆ. ಇವರನ್ನು ನಿಯಂತ್ರಿಸುವುದರಲ್ಲಿ ಭಾರತದ ಯಶಸ್ಸು ಅಡಗಿದೆ.

ತಂಡಗಳು
ಭಾರತ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ಸುರೇಶ್‌ ರೈನಾ, ಮನೀಷ್‌ ಪಾಂಡೆ, ಮಹೇಂದ್ರ ಸಿಂಗ್‌ ಧೋನಿ, ದಿನೇಶ್‌ ಕಾರ್ತಿಕ್‌, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಹಾರ್ದಿಕ್‌ ಪಾಂಡ್ಯ, ಸಿದ್ಧಾರ್ಥ್ ಕೌಲ್‌, ಉಮೇಶ್‌ ಯಾದವ್‌.

ಇಂಗ್ಲೆಂಡ್‌: ಇಯಾನ್‌ ಮಾರ್ಗನ್‌ (ನಾಯಕ), ಮೊಯಿನ್‌ ಅಲಿ, ಜಾನಿ ಬೇರ್‌ಸ್ಟೊ, ಜೇಕ್‌ ಬಾಲ್‌, ಜಾಸ್‌ ಬಟ್ಲರ್‌, ಸ್ಯಾಮ್‌ ಕರನ್‌, ಟಾಮ್‌ ಕರನ್‌, ಅಲೆಕ್ಸ್‌ ಹೇಲ್ಸ್‌, ಕ್ರೀಸ್‌ ಜೋರ್ಡನ್‌, ಲಿಯಮ್‌ ಪ್ಲಂಕೆಟ್‌, ಆದಿಲ್‌ ರಶೀದ್‌, ಜೋ ರೂಟ್‌, ಜಾಸನ್‌ ರಾಯ್‌, ಡೇವಿಡ್‌ ವಿಲ್ಲಿ, ಡೇವಿಡ್‌ ಮಾಲನ್‌.
ಆರಂಭ: ರಾತ್ರಿ 10.00

ಪ್ರಸಾರ: ಸೋನಿ ನೆಟ್‌ವರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next