ಕೊಲಂಬೋ : ಟಿ-20 ಪಂದ್ಯವನ್ನು ಕೊನೆಯ ಓವರ್‌ಗಳಲ್ಲಿ ಚೇಸಿಂಗ್‌ನಲ್ಲಿ ಗೆಲ್ಲಬಲ್ಲ ಅಸಾಮಾನ್ಯ ಪ್ರತಿಭೆ ದಿನೇಶ್ ಕಾರ್ತಿಕ್ ಅವರಲ್ಲಿ ಇದೆ ಎಂಬುದನ್ನು ನಾನು ಹಿಂದೆ ಮುಂಬಯಿ ಇಲೆವೆನ್ ಐಪಿಎಲ್ ಪಂದ್ಯಗಳಲ್ಲೆ ಕಂಡುಕೊಂಡಿದ್ದೆ; ಹಾಗಾಗಿ ಚೇಸಿಂಗ್‌ನ ಕೊನೇ ಓವರ್‌ಗಳ ಆಟಕ್ಕಾಗಿ ನಾನು ದಿನೇಶ್ ಕಾರ್ತಿಕ್ ಅವರನ್ನು ಉಳಿಸಿಕೊಂಡು ಅವರಿಗಿಂತ ಮೊದಲು ವಿಜಯ ಶಂಕರ್ ಅವರನ್ನು ಕ್ರೀಸಿಗೆ ಕಳುಹಿಸಿಲು ನಿರ್ಧರಿಸಿದೆ. ನನ್ನ ಲೆಕ್ಕಾಚಾರ ಸರಿಯೇ ಆಯಿತು. ಕೊನೆಯ 12 ಬಾಲ್‌ಗಳಲ್ಲಿ 34ರನ್ ತೆಗೆಯುವ ಅತ್ಯಂತ ಕಷ್ಟಕರ ಸವಾಲನ್ನು ದಿನೇಶ್ ಕಾರ್ತಿಕ್ ಎದೆ ಗುಂದದೆ, ಕೆಚ್ಚೆದೆಯಿಂದ ಸಾಧಿಸಿ ಭಾರತಕ್ಕೆ ನಿದಹಾಸ್ ಟ್ರೋಫಿಯನ್ನು ಗೆದ್ದು ಕೊಟ್ಟರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಿನ್ನೆ ಬಾಂಗ್ಲಾದೇಶದ ಎದುರು ನಡೆದಿದ್ದ ನಿದಸಾಸ್ ಟ್ರೋಫಿಯ ಫೈನಲ್ ಪಂದ್ಯವನ್ನು ಭಾರತ, ದಿನೇಶ್ ಕಾರ್ತಿಕ್ ಅವರ ಶೌರ್ಯಯುತ ಹೋರಾಟದಲ್ಲಿ ಗೆದ್ದಿರುವುದಕ್ಕೆ ನಾಯಕ ರೋಹಿತ್ ಶರ್ಮಾ ನೀಡಿರುವ ಪ್ರತಿಕ್ರಿಯೆ ಇದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟಿದ್ದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಮಾಡಿತ್ತು. ಭಾರತಕ್ಕೆ 167 ರನ್ ಗುರಿ ನಿಗದಿಯಾಗಿತ್ತು. ಈ ಗುರಿಯನ್ನು ಭಾರತ 6 ವಿಕೆಟ್ ನಷ್ಟಕ್ಕೆ ರೋಮಾಂಚಕವಾಗಿ ಸಾಧಿಸಿ ಪಂದ್ಯ ಪ್ರಶಸ್ತಿ ಗೆದ್ದುಕೊಂಡಿತ್ತು. ರೋಹಿತ್ ಶರ್ಮಾ 42 ಎಸೆತಗಳಲ್ಲಿ 56 ರನ್ ಬಾರಿಸಿ ಭರ್ಜರಿ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.
ಕೊನೆಯ ಎರಡು ಓವರ್‌ಗಳಲ್ಲಿ 34 ರನ್ ಬಾರಿಸಬೇಕಾದ ಅನಿವಾರ್ಯತೆ ಭಾರತಕ್ಕೆ ಎದುರಾಗಿತ್ತು. 19ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಅವರು ಬಾಂಗ್ಲಾದ ಮಧ್ಯಮ ವೇಗಿ ರುಬೆಲ್ ಹುಸೇನ್ ಅವರ ಎಸೆಗಾರಿಕೆಯಲ್ಲಿ ಭರ್ಜರಿಯಾಗಿ 2 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದರು. ಆ ಬಳಿಕದ ಅಂತಿಮ ಓವರ್‌ನಲ್ಲಿ ಭಾರತಕ್ಕೆ 12 ರನ್‌ಗಳ ಅಗತ್ಯವಿತ್ತು.
ಕೊನೇ ಓವರ್‌ನ 5ನೇ ಎಸೆತದಲ್ಲಿ ವಿಜಯ ಶಂಕರ್ ಅವರು ಬಾಂಗ್ಲಾದ ಸೌಮ್ಯ ಸರ್ಕಾರ್ ಎಸೆತದಲ್ಲಿ ಓಟಾದರು. ಅಂತಿಮ ಬಾಲ್‌ನಲ್ಲಿ ಭಾರತಕ್ಕೆ 5 ರನ್ ಬೇಕಿತ್ತು. ಧೃತಿಗೆಡದ ದಿನೇಶ್ ಕಾರ್ತಿಕ್ ಅಂತಿಮ ಎಸೆತವನ್ನು ಭರ್ಜರಿ ಸಿಕ್ಸರ್‌ಗೆ ಎತ್ತಿ ಪಂದ್ಯವನ್ನು ರೋಚಕವಾಗಿ ಜಯಿಸಿ ಕೊಟ್ಟರು.
“ದಿನೇಶ್ ಕಾರ್ತಿಕ್ ಅವರ ಪಂದ್ಯ ಗೆಲ್ಲುವ ಸಾಮರ್ಥ್ಯವನ್ನು ನಾನು ಮೊದಲೇ ಅರಿತಿದ್ದೆ. ಆತನ ಮೇಲೆ ನನಗೆ ವಿಶ್ವಾಸವಿತ್ತು. ಅದನ್ನು ಆತ ಯಶಸ್ವಿಯಾಗಿ ಪೂರೈಸಿದರು’ ಎಂದು ನಾಯಕ ರೋಹಿತ್ ಶರ್ಮಾ ಹೇಳಿದರು.