Advertisement

ಸಿಡ್ನಿಯಲ್ಲೂ ಸಿಡಿದು ನಿಲ್ಲಲಿ ರಹಾನೆ ಸೇನೆ

11:23 PM Jan 06, 2021 | Team Udayavani |

ಸಿಡ್ನಿ: ಸರಣಿ ಸಮಬಲ ಸಾಧಿಸಿದ ಸಂಭ್ರಮದಲ್ಲಿರುವ ಭಾರತ ಮತ್ತು ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಸೋಲಿನೇಟು ಅನುಭವಿಸಿದ ಆಸ್ಟ್ರೇಲಿಯ ತಂಡಗಳು ಗುರುವಾರ ಸಿಡ್ನಿ ಸಮರಾಂಗಣಕ್ಕೆ ಇಳಿಯಲಿವೆ. ಇಲ್ಲಿ ಸರಣಿಯ ಮೂರನೇ ಟೆಸ್ಟ್‌ ಪಂದ್ಯ ಆರಂಭವಾಗಲಿದ್ದು, ರೋಚಕ ಹಾಗೂ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ.

Advertisement

ಎರಡೂ ತಂಡಗಳ ಪಾಲಿನ ಶುಭ ಸಮಾಚಾರವೆಂದರೆ ಪ್ರಧಾನ ಆರಂಭಿಕರ ಪುನರಾಗಮನ. ರೋಹಿತ್‌ ಶರ್ಮ ಮತ್ತು ಡೇವಿಡ್‌ ವಾರ್ನರ್‌ ಪ್ರವೇಶದಿಂದ ಇತ್ತಂಡಗಳ ಓಪನಿಂಗ್‌ ಹೆಚ್ಚು ಬಲಿಷ್ಠಗೊಳ್ಳಲಿದೆ ಎಂಬುದು ಎಲ್ಲರ ಲೆಕ್ಕಾಚಾರ.

ರಹಾನೆಯೇ ಕೇಂದ್ರ ಬಿಂದು
ಭಾರತ ಈಗಾಗಲೇ ತನ್ನ ಆಡುವ ಬಳಗವನ್ನು ಅಂತಿಮಗೊಳಿಸಿದ್ದು, ನಿರೀಕ್ಷೆಯಂತೆ ರೋಹಿತ್‌ಗಾಗಿ ಮಾಯಾಂಕ್‌ ಅಗರ್ವಾಲ್‌ ಜಾಗ ಬಿಟ್ಟಿದ್ದಾರೆ. ಉಮೇಶ್‌ ಯಾದವ್‌ ಸ್ಥಾನಕ್ಕೆ ನವದೀಪ್‌ ಸೈನಿ ಬಂದಿದ್ದಾರೆ. ಇದರೊಂದಿಗೆ ದಿಲ್ಲಿಯ ಈ ಬಲಗೈ ವೇಗಿ ಟೆಸ್ಟ್‌ ಕ್ಯಾಪ್‌ ಧರಿಸಲಿದ್ದಾರೆ. ರೇಸ್‌ನಲ್ಲಿದ್ದ ಉಳಿದಿಬ್ಬರೆಂದರೆ ಶಾದೂìಲ್‌ ಠಾಕೂರ್‌ ಮತ್ತು ಟಿ. ನಟರಾಜನ್‌.

ಉಳಿದಂತೆ ಮೆಲ್ಬರ್ನ್ ಗೆಲುವಿನಲ್ಲಿ ಭಾಗಿಯಾದ ಆಟಗಾರರೇ ಟೀಮ್‌ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಅನುಪಸ್ಥಿತಿಯನ್ನು ಮರೆಸುವ ರೀತಿಯಲ್ಲಿ ತಂಡವನ್ನು ಮುನ್ನಡೆಸಿದ್ದಲ್ಲದೆ, ಮೆಲ್ಬರ್ನ್ನಲ್ಲಿ ಭಾರತಕ್ಕೆ ಮೇಲುಗೈ ಕೊಡಿಸಿದ ನಾಯಕ ಅಜಿಂಕ್ಯ ರಹಾನೆ ತಂಡದ ಕೇಂದ್ರಬಿಂದುವಾಗಿದ್ದಾರೆ. ಭಾರತದ ಪಾಲಿಗೆ ಅಷ್ಟೇನೂ ಅದೃಷ್ಟಶಾಲಿಯಲ್ಲದ ಸಿಡ್ನಿಯಲ್ಲಿ ಇವರ ಗೇಮ್‌ಪ್ಲ್ರಾನ್‌ ಏನಿದ್ದೀತು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಭಾರತ ಸಿಡ್ನಿಯಲ್ಲಿ ಗೆಲ್ಲದೆ 42 ವರ್ಷಗಳೇ ಉರುಳಿವೆ. 1978ರಲ್ಲಿ ಬೇಡಿ ನಾಯಕತ್ವದಲ್ಲಿ ಗೆದ್ದದ್ದೇ ಕೊನೆ. ಒಟ್ಟು 5 ಸೋಲನುಭವಿಸಿದೆ. ಆದರೆ ಇಲ್ಲಿ ಆಡಲಾದ ಕಳೆದೆರಡು ಟೆಸ್ಟ್‌ ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವುದು ಭಾರತದ ಪಾಲಿನ ಸಮಾಧಾನ ಸಂಗತಿ. ಆದರೆ ಇಲ್ಲಿ ಇತಿಹಾಸದಿಂದ ಲಾಭನೇನೂ ಇಲ್ಲ. ಕಳೆದ ಪಂದ್ಯದ ಲಯವನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯ. ಗೆಲ್ಲದೇ ಹೋದರೂ ಕನಿಷ್ಠ ಡ್ರಾ ಸಾಧಿಸಿದರೂ ಅದರಿಂದ ಭಾರತಕ್ಕೆ ಎಷ್ಟೋ ಲಾಭವಿದೆ.

Advertisement

ಸ್ಮಿತ್‌, ಪೂಜಾರ ರನ್‌ ಬರಗಾಲ
ಆಸ್ಟ್ರೇಲಿಯ ಇನ್ನೂ ತನ್ನ ಆಡುವ ಬಳಗವನ್ನು ಪ್ರಕಟಿಸಿಲ್ಲ. ಆದರೂ ಶೇ. 70ರಷ್ಟು ಮಾತ್ರ ಫಿಟ್‌ನೆಸ್‌ ಹೊಂದಿರುವ ವಾರ್ನರ್‌ ಆಡಲಿಳಿಯುವುದು ಖಾತ್ರಿಯಾಗಿದೆ. ಇವರೊಂದಿಗೆ ವಿಲ್‌ ಪುಕೋವ್‌ಸ್ಕಿ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಆಸೀಸ್‌ ಕ್ರಿಕೆಟಿನ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಆಗಿರುವ ಪುಕೋವ್‌ಸ್ಕಿಗೆ ಇದು ಚೊಚ್ಚಲ ಟೆಸ್ಟ್‌ ಆಗಿರಲಿದೆ. ಬರ್ನ್ಸ್-ವೇಡ್‌ ಜೋಡಿಗೆ ಗೇಟ್‌ಪಾಸ್‌ ಖಚಿತ.

ರನ್‌ ಮೆಶಿನ್‌ ಸ್ಟೀವನ್‌ ಸ್ಮಿತ್‌ ತೀವ್ರ ರನ್‌ ಬರಗಾಲದಲ್ಲಿರುವುದು ಆಸ್ಟ್ರೇಲಿಯದ ಬ್ಯಾಟಿಂಗ್‌ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದೆ. ಈ ಸಮಸ್ಯೆ ಹೀಗೆಯೇ ಮುಂದುವರಿದರೆ ರಹಾನೆ ಪಡೆಗೆ ಖಂಡಿತವಾಗಿಯೂ ಲಾಭವಿದೆ.

ಇತ್ತ ಭಾರತ ತಂಡದಲ್ಲಿ ಟೆಸ್ಟ್‌ ಸ್ಪೆಷಲಿಸ್ಟ್‌ ಪೂಜಾರ ಕೂಡ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶಿಸುತ್ತಿಲ್ಲ. ವಿಹಾರಿ ಪ್ರಯತ್ನ ಸಾಲದು. ಇವರಿಗಿಂತ ಜಡೇಜ ಅವರೇ ಜಬರ್ದಸ್ತ್ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್‌-ಗಿಲ್‌ ಆರಂಭಿಕ ಸಮಸ್ಯೆಗೆ ಪರಿಹಾರ ಒದಗಿಸಬೇಕಾದುದು ಅತ್ಯಗತ್ಯ.

ಆಸೀಸ್‌ ಅನುಭವಿ ಬೌಲಿಂಗ್‌
“ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ ವೇಗದ ಬೌಲಿಂಗಿಗೆ ಹೆಸರುವಾಸಿಯಾಗಿರುವ ಅಂಗಳ. ಭಾರತಕ್ಕೆ ಹೋಲಿಸಿದರೆ ಆಸೀಸ್‌ ತ್ರಿವಳಿಗಳ ಅನುಭವ ಅಪಾರ. ಸ್ಟಾರ್ಕ್‌, ಕಮಿನ್ಸ್‌, ಹ್ಯಾಝಲ್‌ವುಡ್‌ ಸೇರಿಕೊಂಡು 144 ಟೆಸ್ಟ್‌ ಆಡಿದ್ದು, 607 ವಿಕೆಟ್‌ ಉಡಾಯಿಸಿದ್ದಾರೆ.

ಇನ್ನೊಂದೆಡೆ ಕೇವಲ 16 ಟೆಸ್ಟ್‌ ಆಡಿರುವ ಬುಮ್ರಾ ಅವರೇ ಅತ್ಯಂತ ಅನುಭವಿ ಬೌಲರ್‌. ಸಿರಾಜ್‌ ಕಳೆದ ಪಂದ್ಯದಲ್ಲಷ್ಟೇ ಟೆಸ್ಟ್‌ “ಡೆಬ್ಯು’ ಮಾಡಿದ್ದರು. ಆದರೆ ಮೂಡಿಸಿದ ಭರವಸೆ ಅಪಾರ. ಸೈನಿ ಇನ್ನಷ್ಟೇ ಟೆಸ್ಟ್‌ ಆಡಬೇಕಿದೆ. ಬಹುಶಃ ವಿದೇಶಿ ಟೆಸ್ಟ್‌ ಒಂದರಲ್ಲಿ ಭಾರತದ ವೇಗದ ಬೌಲಿಂಗ್‌ ವಿಭಾಗ ಇಷ್ಟೊಂದು ಅನನುಭವಿ ಎನಿಸಿದ್ದು ಇದೇ ಮೊದಲಿರಬೇಕು. ಆದರೆ ಸ್ಪಿನ್ನರ್‌ಗಳಾದ ಅಶ್ವಿ‌ನ್‌-ಜಡೇಜ ಫಾಸ್ಟ್‌ ಟ್ರ್ಯಾಕ್‌ನಲ್ಲೂ ಮಿಂಚು ಹರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಪುರುಷರ ಪಂದ್ಯಕ್ಕೆ ವನಿತಾ ಫೋರ್ತ್‌ ಅಂಪಾಯರ್‌!
ಸಿಡ್ನಿ ಟೆಸ್ಟ್‌ ವಿಶೇಷ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಪುರುಷರ ಟೆಸ್ಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವನಿತಾ ಫೋರ್ತ್‌ ಅಂಪಾಯರ್‌ ಕರ್ತವ್ಯ ನಿಭಾಯಿಸಲಿದ್ದಾರೆ. ಈ ಅದೃಷ್ಟವಂತೆ ಆಸ್ಟ್ರೇಲಿಯದ ಕ್ಲೇರ್‌ ಪೊಲೊಸಾಕ್‌. 2019ರ ನಮೀಬಿಯಾ-ಒಮಾನ್‌ ನಡುವಿನ ವರ್ಲ್ಡ್ ಕ್ರಿಕೆಟ್‌ ಲೀಗ್‌ ಡಿವಿಷನ್‌-2 ಫೈನಲ್‌ನಲ್ಲಿ ಪೊಲೊಸಾಕ್‌ ಫೀಲ್ಡ್‌ ಅಂಪಾಯರ್‌ ಆಗಿದ್ದರು.

ಸಿಡ್ನಿಯಲ್ಲಿ ಮಾಸ್ಕ್ ಕಡ್ಡಾಯ
ಭಾರತ-ಆಸ್ಟ್ರೇಲಿಯ ನಡುವಿನ ಮೆಲ್ಬರ್ನ್ ಟೆಸ್ಟ್‌ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಹಾಜರಿದ್ದ ವೀಕ್ಷಕನೊಬ್ಬನಿಗೆ ಕೊರೊನಾ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಸಿಡ್ನಿ ಟೆಸ್ಟ್‌ ನಿಯಮಾವಳಿ ಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿ ಸಲಾಗಿದೆ. ವೀಕ್ಷಕರಿಗೆ ಮಾಸ್ಕ್ ಕಡ್ಡಾಯವೆಂದು ನ್ಯೂ ಸೌತ್‌ ವೇಲ್ಸ್‌ ಸರಕಾರ ಸೂಚಿಸಿದೆ. ಜತೆಗೆ ಮೆಲ್ಬರ್ನ್ ಟೆಸ್ಟ್‌ ವೀಕ್ಷಕರಿಗೆ ಸಿಡ್ನಿ ಟೆಸ್ಟ್‌ಗೆ ಹಾಜರಾಗದಂತೆಯೂ ಸೂಚಿಸಲಾಗಿದೆ.ಕೊರೊನಾ ಪಾಸಿಟಿವ್‌ ಕಂಡುಬಂದ ಆ ವೀಕ್ಷಕ ಮೆಲ್ಬರ್ನ್ ಟೆಸ್ಟ್‌ ಪಂದ್ಯದ ದ್ವಿತೀಯ ದಿನ (ಡಿ. 27) ಸ್ಟೇಡಿಯಂಗೆ ಹಾಜರಾಗಿದ್ದು, ಝೋನ್‌-5ರ ಆಸನದಲ್ಲಿ ಕುಳಿತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next