ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕ್ಯಾನ್ ಬೆರಾದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದ ವೇಳೆ ಈ ಬೃಹತ್ ಮೈಲಿಗಲ್ಲು ಸಾಧಿಸುವ ಉತ್ಸಾಹದಲ್ಲಿದ್ದು, ಈಗಾಗಲೇ ಸಿದ್ದತೆ ಆರಂಭಿಸಿದ್ದಾರೆ.
ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಪಡೆಯ ವಿರುದ್ಧ ಕಳೆದೆರೆಡು ಪಂದ್ಯಗಳಲ್ಲಿ ಮುಗ್ಗರಿಸಿರುವ ಭಾರತ ಸರಣಿಯನ್ನು ಕೈಚೆಲ್ಲಿದೆ. ಆದರೇ ನಾಯಕ ಕೊಹ್ಲಿ ಕಳೆದ ಪಂದ್ಯದಲ್ಲಿ 89 ರನ್ ಸಿಡಿಸಿ ತಮ್ಮ ಸಾಮರ್ಥ್ಯ ಸಾಬಿತುಪಡಿಸಿದ್ದರು. ಅದಾಗ್ಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಅನುಭವಿಸಿತ್ತು.
ಇದೀಗ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಲು ಕೊಹ್ಲಿ ಪಡೆ ಶತಯಾಗತಯಾ ಪ್ರಯತ್ನ ನಡೆಸುತ್ತಿದ್ದು, 3ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಪುಡಿಗಟ್ಟಲು ಸಜ್ಜಾಗಿದ್ದಾರೆ.
ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತೀ ವೇಗವಾಗಿ 12 ಸಾವಿರ ರನ್ ಗಳಿಸಿರುವ ಸಾಧನೆ ಸಚಿನ್ ಮಡಿಲಲ್ಲಿದ್ದು, ಒಂದು ವೇಳೆ ಕೊಹ್ಲಿ ಕ್ಯಾನ್ ಬೆರಾದಲ್ಲಿ ನಡೆಯಲಿರುವ ಪಂದ್ಯದಲ್ಲಿ 23 ರನ್ ಗಳಿಸಿದರೇ ಸಚಿನ್ ದಾಖಲೆ ಮುರಿಯಲಿದೆ.
309 ಪಂದ್ಯಗಳ 300 ಇನ್ನಿಂಗ್ಸ್ ನಲ್ಲಿ ಸಚಿನ್ 12 ಸಾವಿರದ ಗಡಿ ದಾಟಿದ್ದು, ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ನಂತರದಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕರಾ, ಸನತ್ ಜಯಸೂರ್ಯ, ಮಹೇಲಾ ಜಯವರ್ಧನೆ ಇದ್ದಾರೆ.
ಕೊಹ್ಲಿ ಈ ಸಾಧನೆಯ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಒಂದು ವೇಳೆ ಮುಂದಿನ ಪಂದ್ಯದಲ್ಲಿ 23 ರನ್ ಗಳಿಸಿದರೇ 251 ಪಂದ್ಯಗಳ 242 ಇನ್ನಿಂಗ್ಸ್ ನಲ್ಲಿ 12 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದಂತಾಗುತ್ತದೆ. ಆ ಮೂಲಕ ಸಾಧನೆ ಮಾಡಿದವರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರುತ್ತಾರೆ.
ಇದು ಮಾತ್ರವಲ್ಲದೆ ಆಸೀಸ್ ವಿರುದ್ಧ ಮುಂದಿನ ಪಂದ್ಯದಲ್ಲಿ ಶತಕ ದಾಖಲಿಸಿದರೇ, ಸಚಿನ್ ನಂತರ ಕಾಂಗರೂ ಪಡೆಗಳ ವಿರುದ್ಧ ಅತೀ ಹೆಚ್ಚು ಶತಕ ದಾಖಲಿಸಿದ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.