Advertisement

2 ದಿನದಲ್ಲಿ ಮುಗಿದ ಟೆಸ್ಟ್‌: ಅಫ್ಘಾನಿಸ್ಥಾನಕ್ಕೆ ಇನ್ನಿಂಗ್ಸ್‌ ಸೋಲು

06:00 AM Jun 16, 2018 | Team Udayavani |

ಬೆಂಗಳೂರು: ಮೊದಲ ಟೆಸ್ಟ್‌ ಪಂದ್ಯದ ಖುಷಿಯಲ್ಲಿದ್ದ ಅಫ್ಘಾನಿಸ್ಥಾನಕ್ಕೆ ಮರ್ಮಾಘಾತವಾಗಿದೆ. ಆತಿಥೇಯ ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಪಡೆ ಎರಡೇ ದಿನದಲ್ಲಿ ಇನ್ನಿಂಗ್ಸ್‌ ಹಾಗೂ 262 ರನ್‌ ಅಂತರದ ಭಾರೀ ಸೋಲಿಗೆ ತುತ್ತಾಗಿದೆ. 

Advertisement

ಶುಕ್ರವಾರ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಸಂಭವಿಸಿದ್ದೊಂದು ನಾಟಕೀಯ ಕುಸಿತ. ಒಂದೇ ದಿನದಲ್ಲಿ 24 ವಿಕೆಟ್‌ಗಳ ಪತನ! 6 ವಿಕೆಟಿಗೆ 347 ರನ್‌ ಗಳಿಸಿದ್ದ ಭಾರತ ದ್ವಿತೀಯ ದಿನದಾಟ ಮುಂದುವರಿಸಿ 474ರ ತನಕ ಸಾಗಿತು. ಜವಾಬಿತ್ತ ಅಫ್ಘಾನಿಸ್ಥಾನ 109 ರನ್ನಿಗೆ ಆಲೌಟ್‌ ಆಯಿತು. ಫಾಲೋಆನ್‌ಗೆ ಸಿಲುಕಿದ ಬಳಿಕವೂ ಪ್ರವಾಸಿಗರ ಬ್ಯಾಟಿಂಗ್‌ ಕುಸಿತ ನಿಲ್ಲಲಿಲ್ಲ; 103 ರನ್ನಿಗೆ ದ್ವಿತೀಯ ಇನ್ನಿಂಗ್ಸ್‌ ಮುಗಿಯಿತು! ಇದರೊಂದಿಗೆ ಭಾರತ ತನ್ನ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡೇ ದಿನದಲ್ಲಿ ಟೆಸ್ಟ್‌ ಪಂದ್ಯವನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು.

ಅಫ್ಘಾನಿಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 27.5 ಓವರ್‌ ಎದುರಿಸಿದರೆ, ದ್ವಿತೀಯ ಸರದಿ ಯಲ್ಲಿ 38.4 ಓವರ್‌ಗಳನ್ನಷ್ಟೇ ನಿಭಾಯಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 24 ರನ್‌ ಮಾಡಿದ ಮೊಹಮ್ಮದ್‌ ನಬಿ, ದ್ವಿತೀಯ ಇನ್ನಿಂಗ್ಸ್‌ ನಲ್ಲಿ 36 ರನ್‌ ಮಾಡಿದ ಹಶ್ಮತುಲ್ಲ ಶಾಹಿದಿ ಅವರದೇ ಸರ್ವಾಧಿಕ ಗಳಿಕೆ. 

ಭಾರತದ ಮಿಂಚಿನ ದಾಳಿ
ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಅಮೋಘ ಸಾಧನೆಯೊಂದಿಗೆ ಗುರುತಿಸಿ ಕೊಂಡಿದ್ದ ಅಫ್ಘಾನಿಸ್ಥಾನ ಟೆಸ್ಟ್‌ನಲ್ಲಿ ಇಷ್ಟೊಂದು ಕಳಪೆ ಪ್ರದರ್ಶನ ನೀಡೀತೆಂಬ ನಿರೀಕ್ಷೆ ಇರಲಿಲ್ಲ. ಪ್ರವಾಸಿ ಪಡೆ ಭಾರತದ ಮಿಂಚಿನ ಬೌಲಿಂಗ್‌ ದಾಳಿಗೆ ಸಿಲುಕಿ ತತ್ತರಿಸಿತು; ನಿಂತು ಆಡುವುದನ್ನು ತಾನಿನ್ನೂ ಕಲಿತಿಲ್ಲ ಎಂಬುದನ್ನು ತೋರ್ಪಡಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿ‌ನ್‌ 4, ಜಡೇಜ ಮತ್ತು ಇಶಾಂತ್‌ ತಲಾ 2 ವಿಕೆಟ್‌ ಉರುಳಿಸಿದರು. ಎರಡನೇ ಸರದಿಯಲ್ಲಿ ಜಡೇಜ 4, ಉಮೇಶ್‌ ಯಾದವ್‌ 3, ಇಶಾಂತ್‌ 2 ವಿಕೆಟ್‌ ಹಾರಿಸಿದರು. ಮೊದಲ ದಿನದಾಟದಲ್ಲಿ ಲಂಚ್‌ ಒಳಗೆ ಶತಕ ಸಿಡಿಸಿದ ಶಿಖರ್‌ ಧವನ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

ಸಂಕ್ಷಿಪ್ತ ಸ್ಕೋರ್‌: ಭಾರತ-474 (ಧವನ್‌ 107, ವಿಜಯ್‌ 105, ಪಾಂಡ್ಯ 71, ರಾಹುಲ್‌ 54, ಅಹ್ಮದ್‌ಜಾಯ್‌ 51ಕ್ಕೆ 3, ವಫಾದಾರ್‌ 100ಕ್ಕೆ 2, ರಶೀದ್‌ ಖಾನ್‌ 154ಕ್ಕೆ 2). ಅಫ್ಘಾನಿಸ್ಥಾನ-109 (ನಬಿ 24, ಮಜೀಬ್‌ 15, ಅಶ್ವಿ‌ನ್‌ 27ಕ್ಕೆ 4, ಜಡೇಜ 18ಕ್ಕೆ 2, ಇಶಾಂತ್‌ 28ಕ್ಕೆ 2) ಮತ್ತು 103 (ಶಾಹಿದಿ 36, ಸ್ತಾನಿಕ್‌ಜಾಯ್‌ 25, ಜಡೇಜ 17ಕ್ಕೆ 4, ಯಾದವ್‌ 26ಕ್ಕೆ 3, ಇಶಾಂತ್‌ 17ಕ್ಕೆ 2). 

ಪಂದ್ಯಶ್ರೇಷ್ಠ: ಶಿಖರ್‌ ಧವನ್‌

Advertisement

Udayavani is now on Telegram. Click here to join our channel and stay updated with the latest news.

Next