Advertisement

ಭಾರತ ಅಂಡರ್‌-19 ತಂಡ ಜಯಭೇರಿ

06:00 AM Aug 08, 2018 | |

ಮೊರತುವಾ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿದ ಭಾರತ ಅಂಡರ್‌-19 ತಂಡವು ಮಂಗಳವಾರ ನಡೆದ ನಾಲ್ಕನೇ ಯೂತ್‌ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಅಂಡರ್‌-19 ತಂಡವನ್ನು 135 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಗೆಲುವಿನಿಂದ ಭಾರತ ಅಂಡರ್‌-19 ತಂಡವು ಐದು ಪಂದ್ಯಗಳ ಸರಣಿಯಲ್ಲಿ 2-2 ಸಮಬಲ ಸ್ಥಾಪಿಸಿದೆ. ಸರಣಿ ನಿರ್ಣಾಯಕ ಪಂದ್ಯವು ಆ. 10ರಂದು ಮೊರತುವಾದಲ್ಲಿ ನಡೆಯಲಿದೆ. ಈ ಹಿಂದಿನ ಮೂರು ಪಂದ್ಯಗಳನ್ನು ಗಮನಿಸಿದರೆ ಈ ಪಂದ್ಯ ಏಕಮುಖವಾಗಿ ಸಾಗಿರುವುದು ಸ್ಪಷ್ಟವಾಗಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಭಾರತೀಯ ತಂಡ ಪಾರಮ್ಯ ಮೆರೆದಿದೆ. 

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಅಂಡರ್‌-19 ತಂಡವು ಮೂವರು ಆಟಗಾರರ ಅರ್ಧಶತಕದಿಂದಾಗಿ  6 ವಿಕೆಟಿಗೆ 278 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಭಾರತದ ನಿಖರ ದಾಳಿಗೆ ತತ್ತರಿಸಿದ ಶ್ರೀಲಂಕಾ ಅಂಡರ್‌-19 ತಂಡವು 37.2 ಓವರ್‌ಗಳಲ್ಲಿ 143 ರನ್ನಿಗೆ ಆಲೌಟಾಗಿ ಶರಣಾಯಿತು. 

ಉತ್ತಮ ಆರಂಭ
ಭಾರತದ ಆರಂಭ ಉತ್ತಮವಾಗಿತ್ತು. ಆರಂಭದ ಐವರು ಆಟಗಾರರು ಭರ್ಜರಿ ಆಟ ಆಡಿದ್ದರಿಂದ ಭಾರತ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. ಆರಂಭಿಕ ದೇವದತ್‌ ಪಡಿಕ್ಕಲ್‌, ಆರ್ಯನ್‌ ಜುಯಾಲ್‌ ಮತ್ತು ಯಶ್‌ ರಾಥೋಡ್‌ ಅರ್ಧಶತಕ ಹೊಡೆದರು. ಪಡಿಕ್ಕಲ್‌ 91 ಎಸೆತ ಎದುರಿಸಿ 71 ರನ್‌ ಹೊಡೆದರು. ಜುಯಾಲ್‌ ಮತ್ತು ರಾಥೋಡ್‌ ನಾಲ್ಕನೇ ವಿಕೆಟಿಗೆ 92 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಜುಯಾಲ್‌ 60 ಮತ್ತು ರಾಥೋಡ್‌ 56 ರನ್‌ ಗಳಿಸಿದರು.

ಗೆಲ್ಲಲು 279 ರನ್‌ ಗಳಿಸುವ ಕಠಿನ ಗುರಿ ಪಡೆದ ಶ್ರೀಲಂಕಾ ಅಂಡರ್‌ 19 ತಂಡವು ಮೊದಲ ವಿಕೆಟನ್ನು ಬೇಗನೇ ಕಳೆದುಕೊಂಡಿತು. ಆದರೆ ದ್ವಿತೀಯ ವಿಕೆಟಿಗೆ ಪರನವಿತಣ ಮತ್ತು ವಿಪುನ್‌ ಧನಂಜಯ ಪೆರೆರ 60 ರನ್‌ ಪೇರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಆದರೆ ಈ ಜೋಡಿ ಮುರಿದ ಬಳಿಕ ಶ್ರೀಲಂಕಾ ಕುಸಿಯುತ್ತಲೇ ಹೋಯಿತು. 143 ರನ್ನಿಗೆ ಆಲೌಟಾಗಿ ಶರಣಾಯಿತು. 45 ರನ್‌ ಗಳಿಸಿದ ಪರನವಿತಣ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.  ಆಯುಷ್‌ ಬದೋನಿ ಮತ್ತು ಹರ್ಷ ತ್ಯಾಗಿ ತಲಾ ಮೂರು ವಿಕೆಟ್‌ ಕಿತ್ತು ಭಾರತ ಗೆಲುವಿಗೆ ತಮ್ಮ ಕೊಡುಗೆ ಸಲ್ಲಿಸಿದರು.

ಸಂಕ್ಷಿಪ್ತ ಸ್ಕೋರು
ಭಾರತ ಅಂಡರ್‌19: 6 ವಿಕೆಟಿಗೆ 278 (ದೇವದತ್‌ ಪಡಿಕ್ಕಲ್‌ 71, ಪವನ್‌ ಶಾ 36, ಆರ್ಯನ್‌ ಜುಯಾಲ್‌ 60, ಯಶ್‌ ರಾಥೋಡ್‌ 56, ಅವಿಷ್ಕಾ ಲಕ್ಷಣ್‌ 48ಕ್ಕೆ 2, ಸಂಡನ್‌ ಮೆಂಡಿಸ್‌ 37ಕ್ಕೆ 2); ಶ್ರೀಲಂಕಾ ಅಂಡರ್‌-19: 37.2 ಓವರ್‌ಗಳಲ್ಲಿ 143 ಆಲೌಟ್‌ (ಪರನವಿತಣ 45, ವಿಪುನ್‌ ಧನಂಜಯ್‌ ಪೆರೆರ 36, ಆಯುಷ್‌ ಬದೋನಿ 35ಕ್ಕೆ 3, ಹರ್ಷ ತ್ಯಾಗಿ 37ಕ್ಕೆ 3).

Advertisement
Advertisement

Udayavani is now on Telegram. Click here to join our channel and stay updated with the latest news.

Next