ಹಂಬಂತೋಟ: ಪ್ರವಾಸಿ ಶ್ರೀಲಂಕಾ ತಂಡದೆದುರಿನ ಅಂಡರ್-19 ಕ್ರಿಕೆಟ್‌ನ ದ್ವಿತೀಯ ಯೂತ್ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದ್ದು ಸ್ಪಷ್ಟ ಗೆಲುವಿನ ನಿರೀಕ್ಷೆಯಲ್ಲಿದೆ.
ಚತುರ್ದಿನ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ಅಂಡರ್ 19 ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದು 47 ರನ್ ಗಳಿಸಿದೆ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ಭಾರತ ಜಯಭೇರಿ ಬಾರಿಸಲು ಲಂಕಾದ ಇನ್ನುಳಿದ 7 ವಿಕೆಟ್ ಹಾರಿಸಿದರೆ ಸಾಕಾಗುತ್ತದೆ. ಪಂದ್ಯದಲ್ಲಿ ಡ್ರಾದಲ್ಲಿ ಅಂತ್ಯಗೊಳಿಸಬೇಕಾದರೆ ಶ್ರೀಲಂಕಾ ಅಂಡರ್ 19 ಆಟಗಾರರು ಅಂತಿಮ ದಿನಪೂರ್ತಿ ಆಡಬೇಕಾಗುತ್ತದೆ.
ಪವನ್ ಶಾ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಭಾರತ 8 ವಿಕೆಟಿಗೆ 613 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಶ್ರೀಲಂಕಾ ತಂಡ ದ್ವಿತೀಯ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 140 ರನ್ ಗಳಿಸಿತ್ತು. ಮೂರನೇ ದಿನ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 316 ರನ್ ಗಳಿಸಿ ಆಔಟಾಯಿತು. 297 ರನ್ ಮೊದಲ ಇನ್ನಿಂಗ್ಸ್ ಹಿನ್ನಡೆ ಪಡೆದ ಶ್ರೀಲಂಕಾ ಫಾಲೋ ಆನ್ ಪಡೆಯಿತು. ಸೂರಿಯಾಬಂದರ ಶತಕ (115) ಬಾರಿಸಿದ್ದರೆ ದಿನುಷ 51 ಮತ್ತು ಸಂಡನ್ ಮೆಂಡಿಸ್ 49 ರನ್ ಹೊಡೆದಿದ್ದರು.
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಎಡವಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್ ಗಳಿಸಿದ್ದ ಮಿಶಾರ ಅವರನ್ನು ಅರ್ಜುನ್ ತೆಂಡುಲ್ಕರ್ 5 ರನ್ನಿಗೆ ಎಲ್‌ಬಿ ಬಲೆಗೆ ಬೀಳಿಸಿದರು. ಅರ್ಜುನ್ ಮೊದಲ ಇನ್ನಿಂಗ್ಸ್‌ನಲ್ಲಿ ವಿಕೆಟ್ ಪಡೆದಿರಲಿಲ್ಲ. ನಿಶಾನ್ ಮದುಷ್ಕ ಫೆರ್ನಾಡೊ 25 ರನ್ ಗಳಿಸಿ ಔಟಾಗಿದ್ದಾರೆ.
ಸಂಕ್ಷಿಪ್ತ ಸ್ಕೋರು: ಭಾರತ ಅಂಡರ್-19 ಪ್ರಥಮ ಇನ್ನಿಂಗ್ಸ್ 8 ವಿಕೆಟಿಗೆ 613 ಡಿಕ್ಲೇರ್; ಶ್ರೀಲಂಕಾ ಅಂಡರ್-19 ಪ್ರಥಮ ಇನ್ನಿಂಗ್ಸ್ 316; ದ್ವಿತೀಯ ಇನ್ನಿಂಗ್ಸ್ 3 ವಿಕೆಟಿಗೆ 47.