ಮುಂಬೈ: ಸತತ ಕ್ರಿಕೆಟ್ ಆಡುತ್ತಿರುವ ಭಾರತ ಪುರುಷರ ತಂಡ ಮುಂದಿನ ಆಗಸ್ಟ್ ನಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 18-22ರವರೆಗೆ ಭಾರತ ತಂಡ ಮೂರು ಏಕದಿನ ಪಂದ್ಯಗಳಿಗೆ ಜಿಂಬಾಬ್ವೆ ಪ್ರವಾಸ ಮಾಡಲಿದೆ.
ಏಷ್ಯಾ ಕಪ್ ಗೆ ಕೆಲವು ದಿನಗಳ ಮುಂಚಿತವಾಗಿ ಸರಣಿಯನ್ನು ಆಡಲಿರುವುದರಿಂದ, ಪೂರ್ಣ ಪ್ರಮಾಣದ ಭಾರತ ತಂಡವು ಈ ಸರಣಿ ಆಡುವುದು ಅನುಮಾನ ಎನ್ನಲಾಗಿದೆ. ಜಿಂಬಾಬ್ವೆ ಕ್ರಿಕೆಟ್‌ನ ತಾಂತ್ರಿಕ ನಿರ್ದೇಶಕ ಲಾಲ್‌ಚಂದ್ ರಜಪೂತ್ ಈ ಸರಣಿಯನ್ನು ತಮ್ಮ ತಂಡಕ್ಕೆ ಉತ್ತಮ ಕಲಿಕೆಯ ಅವಕಾಶವಾಗಿದೆ ಎಂದಿದ್ದಾರೆ.
“ನಿಸ್ಸಂಶಯವಾಗಿ, ಪ್ರತಿಯೊಂದು ಸಣ್ಣ ದೇಶವು ಭಾರತದ ವಿರುದ್ಧ ಆಡಲು ಎದುರು ನೋಡುತ್ತಿದೆ. ಹೆಚ್ಚಿನ ಆಟಗಾರರು ಐಪಿಎಲ್ ಆಡುತ್ತಾರೆ. ಆದ್ದರಿಂದ ಜಿಂಬಾಬ್ವೆಯ ಕ್ರಿಕೆಟ್ ಗೆ ಇದು ದೊಡ್ಡ ವಿಷಯವಾಗಿದೆ. ಜಿಂಬಾಬ್ವೆಯ ಪ್ರತಿಯೊಬ್ಬ ಕ್ರಿಕೆಟಿಗರು ಎದುರು ನೋಡುತ್ತಿದ್ದಾರೆ. ಇದು ಅವರಿಗೆ ಉತ್ತಮ ಕಲಿಕೆಯ ಅನುಭವವಾಗಲಿದೆ” ಲಾಲ್ ಚಂದ್ ರಜಪೂತ್ ಎನ್ ಡಿಟಿವಿ ವಾಹಿನಿಗೆ ಹೇಳಿದ್ದಾರೆ.
ಇದನ್ನೂ ಓದಿ:ಟ್ವಿಟರ್ ಖರೀದಿ ಒಪ್ಪಂದ ಕೈಬಿಟ್ಟ ಎಲಾನ್ ಮಸ್ಕ್!
ಭಾರತ ತಂಡ ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯ ಬಳಿಕ ವೆಸ್ಟ್ ಇಂಡೀಸ್ ನಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಬಳಿಕ ಜಿಂಬಾಬ್ವೆ ಸರಣಿ ಆಡಲಿದೆ.