ಹೊಸದಿಲ್ಲಿ: ಕೋವಿಡ್ 19 ವೈರಸ್ ಹೊಡೆತಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ಹಾಗೂ ಕುವೈತ್ ರಾಷ್ಟ್ರಗಳಿಗೆ ತನ್ನ ವೈದ್ಯಕೀಯ ತಂಡವನ್ನು ಕಳಿಸಿಕೊಡಲು ಭಾರತ ಸರಕಾರ ನಿರ್ಧರಿಸಿದೆ.
ಕೋವಿಡ್ ಕಪಿಮುಷ್ಟಿಗೆ ಸಿಲುಕಿ ನಲುಗಿರುವ ಯುಎಇ ಮಂಗಳವಾರವಷ್ಟೇ ವೈದ್ಯರು ಹಾಗೂ ನರ್ಸ್ ಗಳನ್ನು ತಮ್ಮ ದೇಶಕ್ಕೆ ಕಳುಹಿಸಿಕೊಡುವಂತೆ ಭಾರತ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರಕಾರ ಇದೀಗ ನಿವೃತ್ತ ಮಿಲಿಟರಿ ವೈದ್ಯರು, ನರ್ಸ್ ಹಾಗೂ ಇತರೆ ಸಿಬಂದಿ ಕಳಿಸಿಕೊಡಲು ಹಸಿರು ನಿಶಾನೆ ನೀಡಿದೆ ಎಂದು ತಿಳಿದುಬಂದಿದೆ.
ಪ್ರತೀ ವರ್ಷ ಭಾರತೀಯ ಸೈನ್ಯದಿಂದ 100 ವೈದ್ಯ ಸಿಬಂದಿ ಸೇರಿದಂತೆ ಹಲವು ಅರೆವೈದ್ಯಕೀಯ ಸಿಬಂದಿ ಹಾಗೂ 30ರಿಂದ 40 ನರ್ಸ್ ಗಳು ನಿವೃತ್ತರಾಗುತ್ತಾರೆ.
ಸದ್ಯ ಯುಎಇ ಹಾಗೂ ಕುವೈತ್ ರಾಷ್ಟ್ರಗಳು ಅಧಿಕೃತ ಮನವಿಯನ್ನು ಭಾರತ ಸರ್ಕಾರಕ್ಕೆ ಕಳುಹಿಸಿಕೊಟ್ಟ ಬೆನ್ನಲ್ಲೇ ಭಾರತದಿಂದ ಹಿರಿಯ, ಅನುಭವಿ ವೈದ್ಯಕೀಯ ತಂಡಗಳು ಗಲ್ಫ್ ರಾಷ್ಟ್ರದತ್ತ ಪ್ರಯಾಣ ಬೆಳೆಸಲಿದ್ದು ಅಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತಮ್ಮ ಯೋಗದಾನವನ್ನು ಈ ಭಾರತದ ವೈದ್ಯಕೀಯ ತಂಡ ನೀಡಲಿದೆ.