ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ ಲಸಿಕೆ ವಿತರಣೆ ಯಶಸ್ವಿಯಾಗಿ ನಡೆಯುತ್ತಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗೆ ವಿದೇಶಗಳಿಂದಲೂ ಬೇಡಿಕೆ ಹೆಚ್ಚುತ್ತಿದೆ. ನೆರೆಯ ಬಾಂಗ್ಲಾದೇಶಕ್ಕೆ ಭಾರತದಿಂದ 20 ಲಕ್ಷ ಡೋಸ್ ಗಳಷ್ಟು ಕೋವಿಡ್ ಲಸಿಕೆ ಕಳುಹಿಸಿಕೊಡಲಾಗುತ್ತಿದೆ.
ಜ.20 ರಂದು ಭಾರತದಿಂದ ಬಾಂಗ್ಲಾದೇಶಕ್ಕೆ ಕೊವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ. ವಿಶೇಷ ವಿಮಾನದಲ್ಲಿ 20 ಲಕ್ಷ ಡೋಸ್ ಲಸಿಕೆ ಬಾಂಗ್ಲಾ ರಾಜಧಾನಿ ಢಾಕಾ ತಲುಪಲಿದೆ. ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮೂಲಕ ಲಸಿಕೆಯನ್ನು ಬಾಂಗ್ಲಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು.
ಪಾಕಿಸ್ಥಾನದ ಪ್ರಯತ್ನ: ಮತ್ತೊಂದು ನೆರೆ ರಾಷ್ಟ್ರ ಪಾಕಿಸ್ಥಾನ ಕೂಡಾ ಭಾರತದ ಲಸಿಕೆಗಾಗಿ ಪ್ರಯತ್ನ ನಡೆಸುತ್ತಿದೆ. ಪಾಕಿಸ್ತಾನವು ಜಾಗತಿಕ ಮೈತ್ರಿಕೂಟದ ಮೂಲಕ ಅಥವಾ ದ್ವಿಪಕ್ಷೀಯ ಮಾರ್ಗದ ಮೂಲಕ ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಪಡೆಯುವ ಆಯ್ಕೆಗಳನ್ನು ಎದುರುನೋಡುತ್ತಿದೆ.
ಇದನ್ನೂ ಓದಿ:ಭಾರತದ ಲಸಿಕೆ ರಾಜತಾಂತ್ರಿಕತೆಗೆ ತತ್ತರಿಸುವುದೇ ಚೀನ
ಭಾರತದ ಲಸಿಕೆಗಳಿಗೆ ಪಾಕಿಸ್ತಾನದ ಕ್ರಮ ಕೈಗೊಂಡಿದ್ದು, ಅಲ್ಲಿನ ದೇಶದ ಔಷಧ ನಿಯಂತ್ರಕ ಮಂಡಳಿ ಡ್ರಗ್ ರೆಗ್ಯುಲೇಟರಿ ಅಥಾರಿಟಿ ಆಫ್ ಪಾಕಿಸ್ತಾನ ವು ತುರ್ತು ಬಳಕೆಗಾಗಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯನ್ನು ಬಳಸಲು ಕಳೆದ ವಾರಾಂತ್ಯದಲ್ಲಿ ಅನುಮೋದನೆ ನೀಡಿದೆ.
ಇದನ್ನೂ ಓದಿ: ಕೋವಿಡ್ ಹಿಮ್ಮೆಟ್ಟಿಸಲು ಮಾರ್ಗದರ್ಶಿ ಸೂತ್ರಗಳ ಪಾಲನೆ ಅಗತ್ಯವಲ್ಲವೇ?
ಬಾಂಗ್ಲಾದೇಶದಲ್ಲಿ ಇದುವರೆಗೆ ಐದು ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 7,900 ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ಥಾನದಲ್ಲಿ ಐದು ಲಕ್ಷಕ್ಕೂ ಮಿಕ್ಕಿ ಪ್ರಕರಣಗಳು ದೃಢವಾಗಿದ್ದು, 11 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ.